ಮೇ 29ರಿಂದ ಭಟ್ಕಳದಲ್ಲಿ ಷರತ್ತುಬದ್ಧ ಲಾಕ್ ಡೌನ್ ಸಡಿಲಿಕೆ : ಎಸ್.ಪಿ

Update: 2020-05-28 17:03 GMT

ಭಟ್ಕಳ : ಮಂಗಳೂರು ಫಸ್ಟ್ ನ್ಯೂರೋ ಆಸ್ಪತ್ರೆಯ ಸಂಪರ್ಕದಿಂದಾಗಿ ಭಟ್ಕಳದಲ್ಲಿ ಮೇ 5ರಂದು 18ರ ಯುವತಿಯಲ್ಲಿ ಕಾಣಿಸಿಕೊಂಡಿದ್ದ ಕೊರೋನಾ ಸೋಂಕಿನಿಂದಾಗಿ ಭಟ್ಕಳ ನಗರವನ್ನೇ ಕಂಟೇನ್ಮೆಂಟ್ ವಲಯವನ್ನಾಗಿ ಪರಿವರ್ತಿಸಿ ಸೀಲ್‍ಡೌನ್ ಮಾಡಿದ್ದ ಜಿಲ್ಲಾಡಳಿತ ಶುಕ್ರವಾರದಿಂದ ಅದರ ವ್ಯಾಪ್ತಿಯನ್ನು ಕಡಿಮೆಗೊಳಿಸಿ ಕೆಲ ಷರತ್ತುಬದ್ಧ ನಿಯಮಗಳೊಂದಿಗೆ ಲಾಕ್ ಡೌನ್ ಸಡಿಲಿಕೆಗೆ ಅವಕಾಶ ನೀಡಿದೆ.

ಈ ಕುರಿತಂತೆ  ಉತ್ತರಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವಾರಾಜು ಗುರುವಾರ ಭಟ್ಕಳದ ಪ್ರವಾಸಿ ಬಂಗ್ಲೆಯಲ್ಲಿ  ನಡೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.

ನಗರದ ಮದೀನಾ ಕಾಲನಿ, ಗುಡ್ಲಕ್ ರೋಡ್, ಉಸ್ಮಾನಿಯ ಕಾಲೋನಿ, ಕೋಕ್ತಿನಗರ, ಸುಲ್ತಾನ್ ಸ್ರೀಟ್ ಪ್ರದೇಶ ನೂರು ಮೀಟರ್ ವ್ಯಾಪ್ತಿ ಯನ್ನು ಮಾತ್ರ ಕಂಟೇನ್ಮೆಂಟ್ ವಲಯ ಎಂದು ಪರಿಗಣಿಸಿ ಆ ಪ್ರದೇಶವನ್ನು ಹೊರತುಪಡಿಸಿ ಉಳಿದ ಎಲ್ಲ ಕಡೆಗಳಲ್ಲಿ ಬೆಳಿಗ್ಗೆ 8ರಿಂದ ಮದ್ಯಾಹ್ನ 2ಗಂಟೆ ವರೆಗೆ ಲಾಕ್‍ಡೌನ್ ನಲ್ಲಿ ಸಡಿಲಿಕೆ ಮಾಡುತ್ತಿದ್ದು ಮೆಡಿಕಲ್, ಪೆಟ್ರೋಲ್ ಪಂಪ್, ಗ್ಯಾರೇಜ್, ಸಲೂನ್, ಬೇಕರಿ ಸೇರಿದಂತೆ ಅಗತ್ಯ ವಸ್ತು ಪೂರೈಕೆಯ ಅಂಗಡಿಗಳನ್ನು ತೆರೆಯಲು ಅವಕಾಶ ಮಾಡಿಕೊಡಲಾಗುವುದು ಎಂದರು.

ಅಂಗಡಿಕಾರರು ಹಾಗೂ ಗ್ರಹಕರು ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಹೋಗಬೇಕು. ಯಾವುದೇ ರೀತಿಯ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡು ಬಂದಲ್ಲಿ ಅಂಗಡಿಗಳ ಲೈಸನ್ಸ್ ನ್ನು ರದ್ದು ಮಾಡಲಾಗುವುದು ಎಂದರು. ಜೂನ್1 ರಿಂದ 8 ರ ವರೆಗೆ ಈ ಸಡಿಲಿಕೆ ಮುಂದುವರೆಯಲಿದ್ದು ನಂತರ ಹಂತ ಹಂತವಾಗಿ ಸರ್ಕಾರದ ಮಾರ್ಗಸೂಚಿಯಂತೆ ಕ್ರಮ ಜರಗಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಎಸ್ಪಿ ನಿಖಿಲ್ ಬಿ, ಸಹಾಯಕ ಆಯುಕ್ತ ಭರತ್ ಎಸ್, ತಹಸಿಲ್ದಾರ್ ರವಿಚಂದ್ರ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News