ನಿಖರ ಎತ್ತರ ಅಳೆಯಲು ಮೌಂಟ್ ಎವರೆಸ್ಟ್ ಹತ್ತಿದ ಚೀನಾ ತಂಡ

Update: 2020-05-28 17:33 GMT
ಫೈಲ್ ಫೋಟೊ

ಬೀಜಿಂಗ್, ಮೇ 28: ಜಗತ್ತಿನ ಅತ್ಯಂತ ಎತ್ತರದ ಶಿಖರವಾಗಿರುವ ಮೌಂಟ್ ಎವರೆಸ್ಟ್‌ನ ನಿಖರ ಎತ್ತರವನ್ನು ಅಳೆಯುವುದಕ್ಕಾಗಿ ಚೀನಾದ ಸರ್ವೇಕ್ಷಣಾ ತಂಡವೊಂದು ಬುಧವಾರ ಟಿಬೆಟ್ ಮೂಲಕ ಶಿಖರವನ್ನು ತಲುಪಿದೆ

ಚೀನಾ ಮಾಡಿರುವ ಅಳತೆಯ ಪ್ರಕಾರ, ಮೌಂಟ್ ಎವರೆಸ್ಟ್‌ನ ಎತ್ತರವು 8,844.43 ಮೀಟರ್ ಆಗಿದೆ ಎಂದು ಸರಕಾರಿ ಮಾಧ್ಯಮ ವರದಿ ಮಾಡಿದೆ. ಇದು ನೇಪಾಳ ಮಾಡಿರುವ ಅಳತೆಗಿಂತ ನಾಲ್ಕು ಮೀಟರ್ ಕಡಿಮೆಯಾಗಿದೆ.

ಮೌಂಟ್ ಎವರೆಸ್ಟ್‌ನ ಎತ್ತರದ ವಿಷಯದಲ್ಲಿ ನೇಪಾಳದೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ಚೀನಾವು ಶಿಖರದ ಎತ್ತರವನ್ನು ನಿಖರವಾಗಿ ಅಳೆಯುವುದಕ್ಕಾಗಿ ಮೇ 1ರಂದು ನೂತನ ಸರ್ವೇಕ್ಷಣೆಯನ್ನು ಆರಂಭಿಸಿತ್ತು.

ಶಿಖರವನ್ನು ಏರಿದ ಬಳಿಕ, ತಂಡದ ಸದಸ್ಯರು ಹಿಮಾಚ್ಛಾದಿತ ತುದಿಯಲ್ಲಿ ಸರ್ವೇ ಮಾರ್ಕರ್‌ಗಳನ್ನು ನೆಟ್ಟರು ಎಂದು ವರದಿ ತಿಳಿಸಿದೆ.

ಚೀನಾದ ಸರ್ವೇಯರ್‌ಗಳು ಆರು ಬಾರಿ ಮೌಂಟ್ ಎವರೆಸ್ಟ್ ಶಿಖರವನ್ನು ಹತ್ತಿ ಅಳತೆ ವೈಜ್ಞಾನಿಕ ಸಂಶೋಧನೆಗಳನ್ನು ಮಾಡಿದ್ದಾರೆ ಹಾಗೂ ಎರಡು ಬಾರಿ, ಅಂದರೆ 1975 ಮತ್ತು 2005ರಲ್ಲಿ ಶಿಖರದ ಎತ್ತರವನ್ನು ಬಿಡುಗಡೆ ಮಾಡಿದ್ದಾರೆ. ಶಿಖರದ ಎತ್ತರ 1975ರಲ್ಲಿ 8,848.13 ಮೀಟರ್ ಇದ್ದರೆ, 2005ರಲ್ಲಿ ಅದು 8,844.43 ಮೀಟರ್ ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News