ನಮ್ಮ ಉದ್ಯೋಗಿಗಳನ್ನು ಇದರಿಂದ ಹೊರಗಿಡಿ: ಟ್ರಂಪ್ ಜೊತೆ ಸಂಘರ್ಷಕ್ಕಿಳಿದ ಟ್ವಿಟರ್ ಮುಖ್ಯಸ್ಥ

Update: 2020-05-28 17:36 GMT

ಸಾನ್‌ಫ್ರಾನ್ಸಿಸ್ಕೊ (ಅಮೆರಿಕ), ಮೇ 28: ಜಗತ್ತಿನಾದ್ಯಂತ ನಡೆಯುವ ಚುನಾವಣೆಗಳಿಗೆ ಸಂಬಂಧಿಸಿ, ಸತ್ಯವಲ್ಲದ ಅಥವಾ ವಿವಾದಿತ ಮಾಹಿತಿಗಳತ್ತ ಬೆಟ್ಟು ಮಾಡಿ ತೋರಿಸುವ ತನ್ನ ನಿರ್ಧಾರವನ್ನು ಸಾಮಾಜಿಕ ಜಾಲತಾಣ ಟ್ವಿಟರ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಾಕ್ ಡೊರ್ಸಿ ಮಂಗಳವಾರ ಪುನರುಚ್ಚರಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಟ್ವೀಟ್‌ಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವಂತೆ ಟ್ವಿಟರ್ ಓದುಗರಿಗೆ ಕರೆ ನೀಡಿದ ಬಳಿಕ ಎಲ್ಲ ಸಾಮಾಜಿಕ ಮಾಧ್ಯಮಗಳನ್ನು ಮುಚ್ಚುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದರು. ಇದಾದ ಒಂದು ದಿನದ ಬಳಿಕ ತನ್ನ ನಿರ್ಧಾರವನ್ನು ಟ್ವಿಟರ್ ಮುಖ್ಯಸ್ಥರು ಪುನರುಚ್ಚರಿಸಿದ್ದಾರೆ.

ಡೊರ್ಸಿ ಮತ್ತು ಟ್ರಂಪ್ ನಡುವಿನ ಸಂಘರ್ಷ ತಾರಕಕ್ಕೆ ಏರುವ ಎಲ್ಲ ಲಕ್ಷಣಗಳು ಇರುವಂತೆಯೇ, ನಮ್ಮ ಉದ್ಯೋಗಿಗಳನ್ನು ಇದರಿಂದ ಹೊರಗಿಡಿ ಎಂಬುದಾಗಿ ಡೊರ್ಸಿ ಮನವಿ ಮಾಡಿದ್ದಾರೆ.

ವಾಸ್ತವಾಂಶ ತಪಾಸಣೆ: ಒಂದು ಕಂಪೆನಿಯಾಗಿ ನಮ್ಮ ಕೃತ್ಯಗಳಿಗೆ ಯಾರಾದರೊಬ್ಬರು ಉತ್ತರದಾಯಿ ಆಗಿರುತ್ತಾರೆ. ಅದು ನಾನೇ. ದಯವಿಟ್ಟು ನಮ್ಮ ಉದ್ಯೋಗಿಗಳನ್ನು ಇದರಿಂದ ಹೊರಗಿಡಿ. ಜಾಗತಿಕ ಮಟ್ಟದಲ್ಲಿ ನಡೆಯುವ ಚುನಾವಣೆಗಳ ಬಗ್ಗೆ ತಪ್ಪು ಅಥವಾ ವಿವಾದಿತ ಮಾಹಿತಿಯತ್ತ ಬೆಟ್ಟು ಮಾಡುವುದನ್ನು ನಾವು ಮುಂದುವರಿಸುತ್ತೇವೆ. ಅದೇ ವೇಳೆ, ನಾವು ಮಾಡುವ ಯಾವುದೇ ತಪ್ಪುಗಳನ್ನು ಒಪ್ಪಿಕೊಳ್ಳುತ್ತೇವೆ ಹಾಗೂ ಅವುಗಳ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತೇವೆ ಎಂದು ಡೊರ್ಸಿ ಟ್ವೀಟ್ ಮಾಡಿದ್ದಾರೆ.

ಮಂಗಳವಾರ ಟ್ರಂಪ್ ಮಾಡಿರುವ ಎರಡು ಟ್ವೀಟ್‌ಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವಂತೆ ಟ್ವಿಟರ್ ಓದುಗರಿಗೆ ಸೂಚನೆ ನೀಡಿದ ಬಳಿಕ, ಟ್ವಿಟರ್ ಮತ್ತು ಟ್ರಂಪ್ ನಡುವೆ ಸಂಘರ್ಷ ಏರ್ಪಟ್ಟಿದೆ. ಅಂಚೆ ಮತಗಳ ಸಂಖ್ಯೆಯಲ್ಲಿ ಹೆಚ್ಚಳವಾದಂತೆ, ಈ ವರ್ಷದ ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿನ ಅವ್ಯವಹಾರಗಳೂ ಹೆಚ್ಚುತ್ತವೆ ಎಂಬುದಾಗಿ ಆ ಎರಡು ಟ್ವೀಟ್‌ಗಳಲ್ಲಿ ಟ್ರಂಪ್ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸುತ್ತಾ, ಚುನಾವಣೆಯಲ್ಲಿ ಅಕ್ರಮ ನಡೆಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂಬ ಆರೋಪಗಳಿಗೆ ಆಧಾರವಿಲ್ಲ ಎಂದು ಟ್ವಿಟರ್ ಹೇಳಿದೆ ಹಾಗೂ ಟ್ರಂಪ್ ಟ್ವೀಟ್‌ಗಳ ಕೆಳಗೆ, ಅಂಚೆ ಮತಗಳ ಕುರಿತ ವಾಸ್ತವ ಸಂಗತಿಗಳನ್ನು ಅರಿಯಿರಿ ಎಂಬ ತಲೆಬರಹದ ಲಿಂಕೊಂದನ್ನು ಹಾಕಿದೆ.

ಇದರಿಂದ ರೊಚ್ಚಿಗೆದ್ದ ಟ್ರಂಪ್, ಎಲ್ಲ ಸಾಮಾಜಿಕ ಮಾಧ್ಯಮ ಕಂಪೆನಿಗಳನ್ನು ಮುಚ್ಚುವುದಾಗಿ ಬೆದರಿಕೆ ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News