ಹಾಂಕಾಂಗ್ ರಾಷ್ಟ್ರೀಯ ಭದ್ರತಾ ಕಾನೂನಿಗೆ ಚೀನಾ ಸಂಸತ್ತು ಅನುಮೋದನೆ

Update: 2020-05-28 17:52 GMT

ಬೀಜಿಂಗ್, ಮೇ 28: ಹಾಂಕಾಂಗ್‌ನಲ್ಲಿ ರಾಷ್ಟ್ರೀಯ ಭದ್ರತಾ ಕಾನೂನನ್ನು ಜಾರಿಗೊಳಿಸುವ ಯೋಜನೆಗೆ ಚೀನಾ ಸಂಸತ್ತು ಗುರುವಾರ ಅನುಮೋದನೆ ನೀಡಿದೆ. ಆದರೆ, ಈ ಕಾನೂನು ನಗರಕ್ಕೆ ನೀಡಲಾಗಿರುವ ಸ್ವಾಯತ್ತೆಯ ಭರವಸೆಯನ್ನು ಉಲ್ಲಂಘಿಸುತ್ತದೆ ಎಂದು ಟೀಕಾಕಾರರು ಆರೋಪಿಸಿದ್ದಾರೆ.

ಚೀನಾದ ರಬ್ಬರ್ ಸ್ಟ್ಯಾಂಪ್ ಸಂಸತ್ತು ನ್ಯಾಶನಲ್ ಪೀಪಲ್ಸ್ ಕಾಂಗ್ರೆಸ್, ಈ ಪ್ರಸ್ತಾಪಿತ ಕಾನೂನಿನ ಪರವಾಗಿ ಮತ ಹಾಕಿದೆ.

ಕಳೆದ ವರ್ಷದ ಏಳು ತಿಂಗಳು ಹಾಂಕಾಂಗ್‌ನಲ್ಲಿ ಬೃಹತ್ ಪ್ರಜಾಪ್ರಭುತ್ವಪರ ಚಳವಳಿಗಳು ನಡೆದ ಬಳಿಕ, ಅಲ್ಲಿ ರಾಷ್ಟ್ರೀಯ ಭದ್ರತಾ ಕಾನೂನನ್ನು ಜಾರಿಗೊಳಿಸುವುದನ್ನು ಚೀನಾವು ತನ್ನ ವಾರ್ಷಿಕ ನ್ಯಾಶನಲ್ ಪೀಪಲ್ಸ್ ಕಾಂಗ್ರೆಸ್‌ನಲ್ಲಿ ಅತ್ಯುನ್ನತ ಆದ್ಯತೆಯಾಗಿ ಪರಿಗಣಿಸಿತ್ತು.

ಈ ಕಾನೂನಿನ ಮೂಲಕ ವಿಭಜನೆ, ಸರಕಾರಿ ಅಧಿಕಾರವನ್ನು ತಿರಸ್ಕರಿಸುವುದು, ಭಯೋತ್ಪಾದನೆ ಹಾಗೂ ರಾಷ್ಟೀಯ ಭದ್ರತೆಯನ್ನು ಅಪಾಯಕ್ಕೆ ಸಿಲುಕಿಸುವ ಕೃತ್ಯಗಳನ್ನು ಶಿಕ್ಷಿಸಲಾಗುತ್ತದೆ.

ಹಾಂಕಾಂಗ್‌ನ ವಿಶೇಷ ವ್ಯಾಪಾರ ಸ್ಥಾನಮಾನ ಹಿಂದಕ್ಕೆ: ಮೈಕ್ ಪಾಂಪಿಯೊ ಘೋಷಣೆ

ಈ ನಡುವೆ, ಹಾಂಕಾಂಗ್‌ಗೆ ನೀಡಲಾಗಿರುವ ವಿಶೇಷ ವ್ಯಾಪಾರ ಸ್ಥಾನಮಾನವನ್ನು ಹಿಂದಕ್ಕೆ ಪಡೆದಿರುವುದಾಗಿ ಅಮೆರಿಕದ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಹೇಳಿದ್ದಾರೆ. ಹಾಂಕಾಂಗ್‌ಗೆ ಉನ್ನತ ಮಟ್ಟದ ಸ್ವಾಯತ್ತೆಯನ್ನು ನೀಡುವುದಾಗಿ ನಗರದ ಹಸ್ತಾಂತರದ ವೇಳೆ ಬ್ರಿಟನ್‌ಗೆ ನೀಡಿರುವ ಭರವಸೆಯನ್ನು ಚೀನಾವು ಮುರಿದಿದೆ ಎಂದು ಅವರು ಹೇಳಿದ್ದಾರೆ.

ವಾಸ್ತವಿಕ ಸ್ಥಿತಿಗತಿಗಳನ್ನು ಪರಿಶೀಲಿಸಿದರೆ, ಚೀನಾವು ಹಾಂಕಾಂಗ್‌ಗೆ ಉನ್ನತ ಮಟ್ಟದ ಸ್ವಾಯತ್ತೆಯನ್ನು ನೀಡಿದೆ ಎನ್ನುವುದನ್ನು ಯಾವುದೇ ತಾರ್ಕಿಕ ವ್ಯಕ್ತಿ ಹೇಳಲಾರ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News