ಗಲ್ಪ್ ಕನ್ನಡಿಗರ ನೆರವಿಗೆ ನಿಲ್ಲುವುದು ಸಹಾಯವಲ್ಲ, ಜವಾಬ್ದಾರಿ-ಕೃತಜ್ಞತೆಯಾಗಿದೆ: ಬಿ ಹ್ಯೂಮನ್ ಸ್ಥಾಪಕ ಆಸಿಫ್ ಡೀಲ್ಸ್

Update: 2020-05-28 18:12 GMT

ದಮಾಮ್ ನಿಂದ ಮಂಗಳೂರಿಗೆ ಬರಲಿರುವ ಮೊದಲ ವಿಮಾನ ಪ್ರಯಾಣಿಕರ ಪ್ರಯಾಣ ವೆಚ್ಚವನ್ನು ಭರಿಸಲಿರುವ ಸೌದಿಯ ಖ್ಯಾತ ಅನಿವಾಸಿ ಉದ್ಯಮಿಗಳಾದ ಅಲ್ತಾಫ್ ಉಳ್ಳಾಲ್ ಮತ್ತು ಬಶೀರ್ ಸಾಗರ್ ಅವರ ಸೇವೆಯು ಈ ದಿನದಲ್ಲಿ ಅತ್ಯಂತ ತುರ್ತು ಅಗತ್ಯ ಎನಿಸಿದೆ ಎಂದು ಟೀಂ ಬಿ ಹ್ಯೂಮನ್ ಸಂಸ್ಥೆಯ ಸ್ಥಾಪಕರಾದ ಆಸಿಫ್ ಡೀಲ್ಸ್ ಅಭಿಪ್ರಾಯಪಟ್ಟರು.

ಕೋವಿಡ್ - 19 ನಂತರ ಎನ್.ಆರ್.ಐಗಳು ಬಹಳ ಸಂಕಷ್ಟ ಪಡುತ್ತಿದ್ದು, ಅವರ ನೆರವಿಗೆ ದಾವಿಸುವುದು ನಮ್ಮ ಮೇಲೆ ಬಲು ದೊಡ್ಡ ಜವಾಬ್ದಾರಿಯಾಗಿದೆ ಎಂದ ಅವರು, ಕೆಲಸ ಮತ್ತು ವ್ಯವಹಾರ ಇದ್ದ ಕಾಲದಲ್ಲಿ ಊರಿನ ಪ್ರತಿಯೊಂದು ಒಳಿತಿನಲ್ಲೂ ತಮ್ಮ ತನು - ಮನ - ಧನದ ನೆರವು ನೀಡಿದ್ದ ಎನ್.ಆರ್.ಐಗಳಿಗೆ ಅಲ್ತಾಫ್ ಉಳ್ಳಾಲ್ ಮತ್ತು ಬಶೀರ್ ಅವರು ನೀಡುತ್ತಿರುವ ಈ ನೆರವು ಕೊಡುಗೆ ಎನ್ನುವುದಕ್ಕಿಂತ ಕರ್ತವ್ಯ ಮತ್ತು ಕೃತಜ್ಞತೆ ಎಂದು ಹೇಳುತ್ತೇನೆ ಎಂದವರು ಹೇಳಿದರು.

ಅಲ್-ಕೋಬರ್ ಮೂಲದ ಸಾಕೋ ಕಂಪೆನಿಯ ಎಂಡಿ ಆಗಿರುವ ಅಲ್ತಾಫ್ ಉಳ್ಳಾಲ್, ಸಿ.ಇ.ಒ ಆಗಿರುವ ಬಶೀರ್ ಸಾಗರ್ ಅವರು ಕೋವಿಡ್ ನಂತರದ ದಿನಗಳಲ್ಲಿ ಜಿಲ್ಲೆಯಲ್ಲಿ ಸದ್ದಿಲ್ಲದೆ ನಡೆಸಿದ ಸಮಾಜ ಸೇವೆಯನ್ನೂ ನಾನು ನೋಡಿದ್ದೇನೆ. ಸುಮಾರು ಆರು ಸಾವಿರ ಕುಟುಂಬಗಳಿಗೆ ರೇಷನ್ ಕಿಟ್ಟ್ ವಿತರಿಸಿದ್ದೂ ಅಲ್ಲದೇ  ಟೀಂ ಬಿ- ಹ್ಯೂಮನ್ ನ ಪ್ರತಿಯೊಂದು ಮಾನವೀಯ ಸೇವೆಯಲ್ಲೂ  ಜೊತೆ ನಿಂತವರು. ಅದೇ ರೀತಿ ಹಲವು ಶಿಕ್ಷಣ ಸಂಸ್ಥೆ, ಸೇವಾ ಸಂಸ್ಥೆ ಮತ್ತು ಧಾರ್ಮಿಕ ಕೇಂದ್ರಗಳಿಗೆ ಈ ಸಂಕಷ್ಟದ ಸಮಯದಲ್ಲಿ ನೆರವುಗಳನ್ನೂ ನೀಡಿದ್ದಾರೆ ಎಂದ ಆಸಿಫ್ ಡೀಲ್ಸ್, ಎನ್.ಆರ್.ಐ ಗಳು ತಾಯಿನೆಲ ತಲುಪಿದಾಗ ಇಲ್ಲೂ ಅವರ ಸೇವೆಯಲ್ಲಿ ಹಲವು  ವ್ಯಕ್ತಿಗಳು ತೊಡಗಿಸಿಕೊಂಡಿರುವುದು ಸ್ಮರಿಸುವಂತದ್ದೇ ಆಗಿದೆ ಎಂದರು.

ಬಡವ - ಮಧ್ಯಮ ವರ್ಗ ಹಾಗೇ ಶ್ರೀಮಂತರನ್ನೂ ಈ ಕೋವಿಡ್ ಮಹಾಮಾರಿ ಕಷ್ಟ - ನಷ್ಟ - ಸಂಕಷ್ಟದಲ್ಲಿ ಹಾಕಿದ್ದು ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ಪರಸ್ಪರ ಸಹಕರಿಸುತ್ತಾ, ಹಂಚಿಕೊಳ್ಳುತ್ತಾ, ಸ್ಪಂಧಿಸುತ್ತಾ ಬದುಕುವುದು ಮನುಷ್ಯ ಬದುಕಿನ ಅನಿವಾರ್ಯವಾಗಿದೆ. ಉದ್ಯಮದಲ್ಲಿ ತಾವು ಗಳಿಸಿದ ಸಂಪತ್ತಿನ ಭಾಗವನ್ನು ಅಲ್ತಾಫ್ ಉಳ್ಳಾಲ್ ಮತ್ತು ಬಶೀರ್ ಸಾಗರ್ ಅವರು ಸಮಾಜಕ್ಕೆ ಸಕಾಲಿಕ ನೆರವಿಗೆ ನೀಡುತ್ತಿರುವುದು ಕನ್ನಡಿಗರ ಮೇಲಿನ ಅವರ ಪ್ರೀತಿಗೆ ಸಾಕ್ಷಿಯಾಗಿದೆ. ಹೀಗೇ ನಾವು ಕನ್ನಡಿಗರು ಎಲ್ಲೇ ಇದ್ದರೂ ನಮ್ಮ ಧರ್ಮ - ಜಾತಿ - ಭಿನ್ನತೆ ಮೀರಿ ಜೊತೆಯಾಗಿ ಕೆಲಸ ಮಾಡುವ ಮನಸ್ಸು ಸದಾ ಇರಬೇಕು ಎಂದ ಆಸಿಫ್ ಡೀಲ್ಸ್, ಸುಮಾರು ಹದಿನೈದು ಲಕ್ಷ ಕನ್ನಡಿಗರು ಗಲ್ಪ್ ರಾಷ್ಟ್ರದಲ್ಲಿ ಇದ್ದು ಅವರೆಲ್ಲರ ಕ್ಷೇಮ, ಆರೋಗ್ಯ, ಸುರಕ್ಷೆಗೆ ಪ್ರಾರ್ಥಿಸುವ. ಅವರ ಜೊತೆ ಇದುವರೆಗೂ ಸ್ಪಂದಿಸಿದ ಎಲ್ಲರಿಗೂ ಹಾಗೇ ಸಹಕಾರ ನೀಡುತ್ತಿರುವ ಎಲ್ಲರಿಗೂ ದೇವನು ಉನ್ನತ ಪ್ರತಿಫಲ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News