ಮೃತ ತಾಯಿಯನ್ನು ಎಬ್ಬಿಸುತ್ತಿರುವ ಮಗು: ಇದು ದುರದೃಷ್ಟಕರ, ಆಘಾತಕಾರಿ ಎಂದ ಪಾಟ್ನಾ ಹೈಕೋರ್ಟ್

Update: 2020-05-29 09:45 GMT

ಪಾಟ್ನಾ ಮೇ.29: ಬಿಹಾರದ ರೈಲ್ವೆ ನಿಲ್ದಾಣದಲ್ಲಿ ಮೃತಪಟ್ಟ ಸ್ಥಿತಿಯಲ್ಲಿದ್ದ ತಾಯಿಯನ್ನು ಎಬ್ಬಿಸಲು ಯತ್ನಿಸುತ್ತಿರುವ ಮಗುವಿನ ವೀಡಿಯೊ ದೇಶಾದ್ಯಂತ ಸಂಚಲನ ಮೂಡಿಸಿದ್ದು ಲಾಕ್‌ಡೌನ್‌ನಿಂದ ಅಲ್ಲಲ್ಲಿ ಸಿಲುಕಿದ್ದ ವಲಸೆ ಕಾರ್ಮಿಕರು ತಮ್ಮ ಊರಿಗೆ ತೆರಳುವಾಗ ಎದುರಿಸುತ್ತಿರುವ ಭೀಕರ ದುಸ್ಥಿತಿಯನ್ನು ಬಿಂಬಿಸುತ್ತಿತ್ತು.

ಗುರುವಾರ ಪಾಟ್ನಾ ಹೈಕೋರ್ಟ್ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸುತ್ತಾ "ಇದೊಂದು ದುರದೃಷ್ಟಕರ, ಆಘಾತಕಾರಿ"ಎಂದು ಹೇಳಿದೆ. ಬಿಹಾರದ ಕಟಿಹಾರ್ ನಿವಾಸಿ ಅಬೀನಾ ಹೆಸರಿನ ಮೃತ ಮಹಿಳೆ ಗುಜರಾತ್‌ನ ಅಹಮದಾಬಾದ್‌ನಿಂದ ಬಿಹಾರದ ಕಟಿಹಾರಕ್ಕೆ ವಲಸಿಗ ಕಾರ್ಮಿಕರನ್ನು ಸಾಗಿಸುತ್ತಿರುವ ವಿಶೇಷ ರೈಲಿನಲ್ಲಿ ಪ್ರಯಾಣಿಸಿದ್ದರು. ರೈಲು ಮುಝಫ್ಪರ್‌ಪುರ ತಲುಪುವ ಮೊದಲೇ ಆಕೆ ವಿಪರೀತ ಉಷ್ಣಾಂಶ, ಆಹಾರ ಹಾಗೂ ನೀರಿನ ಕೊರತೆಯಿಂದಾಗಿ ಸಾವನ್ನಪ್ಪಿರುವುದಾಗಿ ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಮೃತಪಟ್ಟಿರುವ 27 ಹರೆಯದ ಮಹಿಳೆ ತನ್ನ ತಂಗಿ ಹಾಗೂ ಮೈದುನನೊಂದಿಗೆ ಪ್ರಯಾಣಿಸಿದ್ದರು. ಆಕೆ ಮಾನಸಿಕ ಅಸ್ಥಿರತೆ ಹೊಂದಿದ್ದು ರೈಲು ಪ್ರಯಾಣದ ವೇಳೆ ಸಹಜ ಸಾವು ಕಂಡಿದ್ದಾರೆ ಎಂದು ರಾಜ್ಯ ಸರಕಾರವು ನ್ಯಾಯಾಲಯಕ್ಕೆ ತಿಳಿಸಿದೆ. ಸರಕಾರದ ಹೇಳಿಕೆಗೆ ಪಾಟ್ನಾ ಹೈಕೋರ್ಟ್ ಸರಣಿ ಪ್ರಶ್ನೆಗಳನ್ನು ಕೇಳಿದೆ.

ಶವ ಪರೀಕ್ಷೆ ನಡೆಸಲಾಗಿದೆಯೇ ? ಮಹಿಳೆ ನಿಜವಾಗಿಯೂ ಹಸಿವಿನಿಂದ ಸಾವನ್ನಪ್ಪಿದ್ದಾರೆಯೇ? ಕಾನೂನು ಜಾರಿ ಸಂಸ್ಥೆಗಳು ಯಾವ ನಿಲುವು ತೆಗೆದುಕೊಂಡಿವೆ? ಸರಕಾರ ಸೂಚನೆಯಂತೆ ಮೃತ ಮಹಿಳೆಯ ಅಂತಿಮ ಕ್ರಿಯೆ ನಡೆಸಲಾಗಿದೆಯೇ ? ಎಲ್ಲದಕ್ಕೂ ಮಿಗಿಲಾಗಿ ಇಂತಹ ಬಿಕ್ಕಟ್ಟಿನ ಸಮಯದಲ್ಲಿ ತಾಯಿಯನ್ನು ಕಳೆದುಕೊಂಡಿರುವ ಮಕ್ಕಳನ್ನು ನೋಡಿಕೊಳ್ಳುವವರ್ಯಾರು? ಎಂದು ನ್ಯಾಯಾಧೀಶರು ಪ್ರಶ್ನಿಸಿದ್ದಾರೆ.

ಬಿಹಾರ ಸರಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಎಸ್‌ಟಿ ಯಾದವ್ "ಮಹಿಳೆಯ ಶವ ಪರೀಕ್ಷೆ ನಡೆಸಿಲ್ಲ. ಎಫ್‌ಐಆರ್‌ನ್ನು ದಾಖಲಿಸಲಾಗಿಲ್ಲ. ಮುಝಫ್ಪರ್‌ಪುರ  ನಿಲ್ದಾಣದಲ್ಲಿ ರೈಲ್ವೆ ಅಧಿಕಾರಿಗಳು ಹೇಳಿಕೆಗಳನ್ನು ದಾಖಲಿಸಿಕೊಂಡ ಬಳಿಕ ಶವವನ್ನು ಕುಟುಂಬ ಸದಸ್ಯರಿಗೆ ನೀಡಲಾಗಿದೆ. ಮೃತ ಮಹಿಳೆಯ ಪತಿ ದೂರವಾಗಿದ್ದು, ಮಹಿಳೆಯ ಮಕ್ಕಳನ್ನು ತಂಗಿಯ ಸುಪರ್ದಿಗೆ ವಹಿಸಲಾಗಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News