ಉಡುಪಿ ಜಿಪಂ ಸಿಬ್ಬಂದಿಯ 3ನೇ ವರದಿ ನೆಗೆಟಿವ್: ಇಂದು ಆಸ್ಪತ್ರೆಯಿಂದ ಬಿಡುಗಡೆ ಸಾಧ್ಯತೆ

Update: 2020-05-29 08:22 GMT

ಕಾಪು, ಮೇ 29: ಗೊಂದಲಕ್ಕೆ ಕಾರಣವಾಗಿದ್ದ ಉಡುಪಿ ಜಿಪಂ ಸ್ವಚ್ಛತಾ ಅಭಿಯಾನ ವಿಭಾಗದ ಸಿಬ್ಬಂದಿ, ಕಟಪಾಡಿ ಸರಕಾರಿಗುಡ್ಡೆಯ 30ರ ಹರೆಯದ ಯುವಕನ 3ನೇ ಬಾರಿ ನಡೆಸಿದ ಗಂಟಲದ್ರವದ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಅವರು ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ.

ಉಡುಪಿ ಜಿಪಂ ಸಿಬ್ಬಂದಿಯ ಮೇ 27ರಂದು ಮಣಿಪಾಲ ಪ್ರಯೋಗಾಲಯಕ್ಕೆ ಕಳುಹಿಸಲಾದ ಗಂಟಲು ದ್ರವದ ಪರೀಕ್ಷೆಯ ವರದಿಯು ನೆಗೆಟಿವ್ ಬಂದಿದೆ ಎಂದು ಕೋವಿಡ್ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದ್ದಾರೆ.

ಮೇ 24ರಂದು ಮಂಗಳೂರು ಪ್ರಯೋಗಾಲಯದಿಂದ ಇವರ ಗಂಟಲು ದ್ರವದ ಮಾದರಿಯ ಪರೀಕ್ಷೆಯ ವರದಿ ಪಾಸಿಟಿವ್ ಬಂದಿದ್ದರೆ ಮೇ 26ರಂದು ಉಡುಪಿಯ ಜಿಲ್ಲಾಸ್ಪತ್ರೆಯಲ್ಲಿ ಟ್ರೂನಟ್ ಯಂತ್ರದ ಮೂಲಕ ಮತ್ತೊಮ್ಮೆ ನಡೆಸಿದ ಪರೀಕ್ಷೆಯ ಲ್ಲಿ ನೆಗೆಟಿವ್ ಎಂಬುದಾಗಿ ವರದಿ ಬಂದಿತ್ತು. ಹೀಗೆ ವರದಿಯಲ್ಲಿನ ತಾಂತ್ರಿಕ ಗೊಂದಲದ ಕಾರಣಕ್ಕಾಗಿ ಇವರ ಗಂಟಲು ದ್ರವದ ಪರೀಕ್ಷೆಯನ್ನು ಮೇ 27ರಂದು ಮತ್ತೋಮ್ಮೆ ಮಣಿಪಾಲ ಪ್ರಯೋ ಗಾಲಯಕ್ಕೆ ಕಳುಹಿಸಲಾಗಿತ್ತು.

ಇದೀಗ ಇದರ ವರದಿಯು ಮೇ 28ರಂದು ನೆಗೆಟಿವ್ ಎಂಬುದಾಗಿ ಬಂದಿದೆ. ಆದುದರಿಂದ ಸದ್ಯ ಉದ್ಯಾವರ ಎಸ್‌ಡಿಎಂ ಆಸ್ಪತ್ರೆಯ ಐಸೋಲೇಷನ್ ವಾರ್ಡ್‌ನಲ್ಲಿರುವ ಇವರನ್ನು ಇಂದು ಆಸ್ಪತ್ರೆಯನ್ನು ಬಿಡುಗಡೆಗೊಳಿಸಿ ಮನೆಗೆ ಕಳುಹಿಸುವ ಸಾಧ್ಯತೆಗಳಿವೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News