ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದ ಖರ್ಚು ವೆಚ್ಚಗಳ ಬಗ್ಗೆ ಸರಕಾರ ಶ್ವೇತ ಪತ್ರ ಹೊರಡಿಸಲಿ: ಸಲೀಂ ಅಹ್ಮದ್ ಆಗ್ರಹ

Update: 2020-05-29 09:20 GMT

ಮಂಗಳೂರು, ಮೇ 29: ಲಾಕ್‌ಡೌನ್‌ನಿಂದಾಗಿ ಸಂಕಷ್ಟದಲ್ಲಿರುವ ವಲಸೆ ಕಾರ್ಮಿಕರು ಸೇರಿದಂತೆ ಜನ ಸಮುದಾಯದ ಸಂಕಷ್ಟಗಳ ಬಗ್ಗೆ ಸರಕಾರ ಕಣ್ಣು, ಕಿವಿ ಇಲ್ಲದಂತೆ ಮಾತ್ರವಲ್ಲ ಹೃದಯ ಶೂನ್ಯರಾಗಿ ವರ್ತಿಸುತ್ತಿದೆ. ರಾಜ್ಯಕ್ಕೆ 50,000 ಕೋಟಿ ವಿಶೇಷ ಪ್ಯಾಕೇಜ್ ನೀಡುವಂತೆ ಕೋರಿಕೊಂಡಿದ್ದರೂ ಯಾವುದೇ ಪ್ರಯತ್ನ ಆಗಿಲ್ಲ. ಸರಕಾರ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದ ಖರ್ಚು ವೆಚ್ಚಗಳ ಕುರಿತಂತೆ ಶ್ವೇತ ಪತ್ರವನ್ನು ಬಿಡುಗಡೆಗೊಳಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಆಗ್ರಹಿಸಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

 ಲಾಕ್‌ಡೌನ್ ಸಂದರ್ಭ ಕಾಂಗ್ರೆಸ್ 1.60 ಕೋಟಿ ಆಹಾರ ಪ್ಯಾಕೇಟ್, 75 ಲಕ್ಷಕ್ಕೂ ಅಧಿಕ ದಿನಸಿ ಕಿಟ್, 35 ಲಕ್ಷ ಮಾಸ್ಕ್, 7 ಲಕ್ಷ ಸ್ಯಾನಿಟೈಸರ್ ಸೇರಿದಂತೆ ಎಲ್ಲ ರೀತಿಯ ನೆರವನ್ನು ನೀಡಿದೆ. 100 ಕೋಟಿ ರೂ. ವೌಲ್ಯದ ಕೃಷಿ ಬೆಳೆಯನ್ನು ರೈತರಿಂದ ಖರೀದಿಸಿ ಜನರಿಗೆ ಪೂರೈಕೆ ಮಾಡಿದೆ. ಸರಕಾರ ಮಾಡಬೇಕಾದ ಕೆಲಸವನ್ನು ವಿಪಕ್ಷವಾಗಿ ಕಾಂಗ್ರೆಸ್ ಮಾಡಿದೆ. ಆದರೆ ಸರಕಾರದಿಂದ ನೀಡಲಾದ ಆಹಾರದ ಕಿಟ್‌ನಲ್ಲಿ ಬಿಜೆಪಿಯವರ ಭಾವಚ್ರಿ ಹಾಕಿ ಹಂಚಿಕೆ ಮಾಡಿದ್ದನ್ನು ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿನಲ್ಲಿ ಬಹಿರಂಗಗೊಳಿಸಿದ್ದಾರೆ. ಹಾಗಾಗಿ ರಾಜ್ಯದ ಹಿತದೃಷ್ಟಿಯಿಂದ ಈಗಾಗಲೇ ಆರೋಪ ವ್ಯಕ್ತವಾಗಿರುವಂತೆ ಪಿಪಿಇ ಕಿಟ್‌ಗಳ ಅವ್ಯವಹಾರದ ಕುರಿತಂತೆ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಹರೀಶ್ ಕುಮಾರ್, ಮಾಜಿ ಶಾಸಕರಾದ ಮೊಯ್ದಿನ್ ಬಾವ, ಜೆ.ಆರ್.ಲೋಬೋ, ಮುಖಂಡರಾದ ಜಿ.ಎ.ಬಾವ, ಶಶಿಧರ ಹೆಗ್ಡೆ, ಮಂಜುನಾಥ ಭಂಡಾರಿ, ಬಿ.ಇಬ್ರಾಹೀಂ, ಟಿ.ಎಂ.ಶಹೀದ್, ದಿನೇಶ್ ಆಳ್ವ, ಶುಭೋದಯ, ಬಲರಾಜ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News