ಆಸ್ತಿ ತೆರಿಗೆ ಪಾವತಿ ರಿಯಾಯಿತಿ ಕಾಲಾವಧಿ ವಿಸ್ತರಣೆ

Update: 2020-05-29 08:58 GMT

ಮಂಗಳೂರು, ಮೇ 29: ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ದ.ಕ. ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಿಗದಿಪಡಿಸಿರುವ ಆಸ್ತಿ ತೆರಿಗೆ ಪಾವತಿ ಮೇಲಿನ ಶೇ.5ರ ರಿಯಾಯಿತಿ ಕಾಲಾವಧಿಯನ್ನು ಹಾಲಿ ಲಾಕ್‌ಡೌನ್ ವಿಸ್ತರಣೆಗೊಂಡಿರುವ ಹಿನ್ನೆಲೆಯಲ್ಲಿ ಜು.31ರವರೆಗೂ ವಿಸ್ತರಿಸಿ ರಾಜ್ಯ ಸರಕಾರ ಆದೇಶಿಸಿದೆ.

ಆಸ್ತಿ ತೆರಿಗೆ ಪಾವತಿ ಮೇಲಿನ ಶೇ.5ರ ರಿಯಾಯಿತಿ ಕಾಲಾವಧಿ ಎ.30ರವರೆಗೆ ಮಾತ್ರ ಲಭ್ಯವಿತ್ತು. ಆದರೆ, ಲಾಕ್‌ಡೌನ್ ಕಾರಣದಿಂದ ಇದನ್ನು ಮೇ 31ರವರೆಗೆ ವಿಸ್ತರಿಸಲಾಗಿತ್ತು. ಹಾಲಿ ಲಾಕ್‌ಡೌನ್ ವಿಸ್ತರಣೆಗೊಂಡಿರುವ ಹಿನ್ನೆಲೆಯಲ್ಲಿ ಈ ರಿಯಾಯಿತಿಯನ್ನು ಜು.31ರವರೆಗೂ ವಿಸ್ತರಿಸಿ ನಗರಾಭಿವೃದ್ಧಿ ಇಲಾಖೆಯು ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಆಯುಕ್ತರು, ಪೌರಾಯುಕ್ತರು, ಮುಖ್ಯಾಧಿಕಾರಿಗಳಿಗೆ ಸೂಚಿಸಿದೆ ಎಂದು ಮನಪಾ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ತಿಳಿಸಿದ್ದಾರೆ.

ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿ ತೆರಿಗೆ ಪಾವತಿ ಮೇಲಿನ ಪಾವತಿ ವಿಳಂಬ ದಂಡವನ್ನು ಕೂಡ ಜು.1ರಿಂದ ಅನ್ವಯಿಸುವ ಬದಲಾಗಿ ನ.1ರಿಂದ ಅನ್ವಯಿಸಿ ವಿಧಿಸುವಂತೆ ಕ್ರಮ ವಹಿಸಲಾಗಿದೆ. ರಾಜ್ಯಾದ್ಯಂತ ಕೊರೋನ ನಿಯಂತ್ರಣ ಸಂಬಂಧ ವಿಧಿಸಲಾಗಿರುವ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಾಮಾಜಿಕ ಅಂತರ ಹಾಗೂ ಪ್ರತ್ಯೇಕತೆಗೆ ಹೆಚ್ಚಿನ ಗಮನಹರಿಸಬೇಕಾಗಿದೆ. ಹೀಗಾಗಿ ಸಾರ್ವಜನಿಕರಿಗೆ ಅನುವಾಗುವಂತೆ ಕಾಯ್ದೆ/ನಿಯಮಗಳಲ್ಲಿ ಅಗತ್ಯ ಸಂಯೋಜನೆ ತರುವ ನಿಟ್ಟಿನಲ್ಲಿ ಕರ್ನಾಟಕ ಮಹಾನಗರ ಪಾಲಿಕೆ, ಪುರಸಭೆಗಳ ಕಲಂಗಳಿಗೆ ಅಗತ್ಯ ತಿದ್ದುಪಡಿ ತರಬೇಕಾಗಿದ್ದು ಸರಕಾರದಿಂದ ಅಗತ್ಯ ಕ್ರಮ ವಹಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರಕಾರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News