'ಝೀ ನ್ಯೂಸ್' ಕಚೇರಿ ಕೊರೋನದ ‘ಪ್ರಮುಖ ಕ್ಲಸ್ಟರ್' ಎಂದು ಬಣ್ಣಿಸಿದ ‘ಟೈಮ್ಸ್ ಆಫ್ ಇಂಡಿಯಾ’

Update: 2020-05-29 11:12 GMT

ಹೊಸದಿಲ್ಲಿ : ‘ಝೀ ಮೀಡಿಯಾ’ ಸಂಸ್ಥೆಯ ಹಲವು ಉದ್ಯೋಗಿಗಳಿಗೆ ಕೋವಿಡ್-19 ಸೋಂಕು ತಗಲಿರುವುದರಿಂದ ಝೀ ಮೀಡಿಯಾ ‘ಪ್ರಮುಖ ಕೊರೋನ ಕ್ಲಸ್ಟರ್' ಆಗಿದೆ ಎಂಬರ್ಥ ನೀಡುವ  ಸುದ್ದಿಯನ್ನು ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿದೆ.

“ನೊಯ್ದಾದಲ್ಲಿ ವಾರದಲ್ಲಿ ಗರಿಷ್ಠ  ಪ್ರಕರಣಗಳು ಎರಡು ಕ್ಲಸ್ಟರ್‍ಗಳಿಂದ'' ಎಂದು ಮೇ 27ರ ಟೈಮ್ಸ್ ಆಫ್ ಇಂಡಿಯಾ ಮುದ್ರಣ ಆವೃತ್ತಿಯಲ್ಲಿನ ಸುದ್ದಿಯ ಶೀರ್ಷಿಕೆಯಾಗಿದ್ದರೆ, ಪತ್ರಿಕೆಯ ಆನ್‍ಲೈನ್ ಆವೃತ್ತಿಯಲ್ಲಿ “ನೊಯ್ಡಾದಲ್ಲಿ ಒಂದು ವಾರದಲ್ಲಿ 90 ಪ್ರಕರಣಗಳು, ಹೆಚ್ಚಿನವು ಗ್ರಾಮೀಣ ಕ್ಲಸ್ಟರ್‍ಗಳಿಂದ'' ಎಂಬ ಶೀರ್ಷಿಕೆಯಿತ್ತು.

ನೊಯ್ಡಾದಲ್ಲಿ 14 ದಿನಗಳಲ್ಲಿ ಕೊರೋನ ಪ್ರಕರಣಗಳು 51ರಿಂದ 90ಕ್ಕೆ ಏರಿಕೆಯಾಗಿದೆ. “ಹೆಚ್ಚಿನವು ಮಾಧ್ಯಮ ಸಂಸ್ಥೆಯೊಂದರ ಸೆಕ್ಟರ್ 16 ಕಚೇರಿಯಿಂದ ವರದಿಯಾಗಿದೆ.  ಇಲ್ಲಿಯ ತನಕ 50 ಉದ್ಯೋಗಿಗಳು ಕೊರೋನ ಪಾಸಿಟಿವ್ ಆಗಿದ್ದಾರೆ, ಇವರಲ್ಲಿ 31 ಮಂದಿ ನೊಯ್ದಾದವರಾಗಿದ್ದಾರೆ, ಇದರೊಂದಿಗೆ ಈ ಮಾಧ್ಯಮ ಸಂಸ್ಥೆ ನಗರದಲ್ಲಿ ನಿಧಾನವಾಗಿ ಪ್ರಮುಖ ಕ್ಲಸ್ಟರ್ ಆಗುತ್ತಿದೆ'' ಎಂದು ವರದಿಯಲ್ಲಿ ಹೇಳಲಾಗಿದೆ.

‘ಝೀ ನ್ಯೂಸ್’ ಹೇಗೆ `ಕೋವಿಡ್-19 ಹಾಟ್‍ಸ್ಪಾಟ್' ಆಗಿದೆ ಎಂದು ಕಳೆದ ವಾರ ನ್ಯೂಸ್‍ ಲಾಂಡ್ರಿ ವರದಿ ಮಾಡಿತ್ತಲ್ಲದೆ ಸಂಸ್ಥೆಯ ಆಡಳಿತವು  ಸರಕಾರದ ಮಾರ್ಗಸೂಚಿಗಳನ್ನು ಅನುಸರಿಸುವ ನಿಟ್ಟಿನಲ್ಲಿ ಸಡಿಲ ನೀತಿ ಅನುಸರಿಸುತ್ತಿದೆ ಎಂಬುದರತ್ತವೂ ಬೆಳಕು ಚೆಲ್ಲಿತ್ತು.

ಝೀ ವಾಹಿನಿಯ ಮುಖ್ಯ ಸಂಪಾದಕ ಸುಧೀರ್ ಚೌಧರಿ ತಮ್ಮ ಉದ್ಯೋಗಿಗಳನ್ನುದ್ದೇಶಿಸಿ, “ನಾಳೆಯಿಂದ  ಜ್ವರ ಅಥವಾ ಕೆಮ್ಮು ಕುರಿತು  ಯಾವ ದೂರು ಕೇಳಲೂ ನಾನು ಬಯಸುವುದಿಲ್ಲ. ನೆನಪಿಡಿ, ನೀವೆಲ್ಲರೂ ಜ್ವರದಿಂದ ಚೇತರಿಸಿಕೊಳ್ಳುತ್ತೀರಿ. ಆದರೆ  ಅದರ ಬಗ್ಗೆ ದೂರುವವರಿಗೆ  ಅದು ಎಂದಿನಂತಿರುವುದಿಲ್ಲ'' ಎಂದು  ಹೇಳಿದ್ದಾರೆಂದೂ ವರದಿ ತಿಳಿಸಿತ್ತು.

ಝೀ ಕಚೇರಿಯಲ್ಲಿ ಸುರಕ್ಷಿತ ಅಂತರ ಹಾಗೂ ಉದ್ಯೋಗಿಗಳ ಸುರಕ್ಷತೆ ಕುರಿತಂತೆ ನಿರ್ಲಕ್ಷ್ಯ ವಹಿಸಲಾಗಿರುವುದು ಕಚೇರಿಯ ವಾಟ್ಸ್ಯಾಪ್ ಗ್ರೂಪ್‍ನಿಂದ ತಿಳಿದು ಬಂದಿರುವ ಕುರಿತೂ ನ್ಯೂಸ್ ಲಾಂಡ್ರಿ ವರದಿ ಮಾಡಿತ್ತು. ಈ ಕಚೇರಿಯಿಂದ ಮೊದಲ ಪ್ರಕರಣ ಎಪ್ರಿಲ್ ತಿಂಗಳಲ್ಲಿ ವರದಿಯಾಗಿದ್ದರೂ ಬೇರೆ ಯಾರನ್ನೂ ಪರಿಕ್ಷೆಗೊಳಪಡಿಸಲಾಗಿಲ್ಲ ಅಥವಾ ಕ್ವಾರಂಟೈನ್ ಮಾಡಲಾಗಿರಲಿಲ್ಲ ಎಂದೂ ಆರೋಪಿಸಲಾಗಿದೆ.

ಕೃಪೆ: newslaundry.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News