ಉಡುಪಿ: ಮಹಾರಾಷ್ಟ್ರದಿಂದ ಬಂದ 15 ಮಂದಿಯಲ್ಲಿ ಕೊರೋನ ಪಾಸಿಟಿವ್; ಸೋಂಕಿತರ ಸಂಖ್ಯೆ 164ಕ್ಕೆ ಏರಿಕೆ

Update: 2020-05-29 14:17 GMT

ಉಡುಪಿ, ಮೇ 29: ಮಹಾರಾಷ್ಟ್ರದ ವಿವಿದೆಡೆಗಳಿಂದ ಉಡುಪಿ ಜಿಲ್ಲೆಗೆ ಆಗಮಿಸಿದ 15 ಮಂದಿ ಶುಕ್ರವಾರ ಕೊರೋನ ವೈರಸ್ ಸೋಂಕಿಗೆ ಪಾಸಿಟಿವ್ ಆಗಿದ್ದಾರೆ. ಇವರಲ್ಲಿ 9 ಮಂದಿ ಪುರುಷರು, ನಾಲ್ವರು ಮಹಿಳೆಯರು ಹಾಗೂ ಇಬ್ಬರು ಬಾಲಕ ಸೇರಿದ್ದಾರೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ ಚಂದ್ರ ಸೂಡ ತಿಳಿಸಿದ್ದಾರೆ.

ಕೊರೋನ ಲಾಕ್‌ಡೌನ್ ಬಳಿಕ ಅಂತಾರಾಜ್ಯ ಹಾಗೂ ವಿದೇಶಗಳಲ್ಲಿ ಸಿಕ್ಕಿಬಿದ್ದವರಿಗೆ ಹುಟ್ಟೂರಿಗೆ ಬರಲು ಹಸಿರು ನಿಶಾನೆ ತೋರಿದ ಬಳಿಕ ಜಿಲ್ಲೆಯಲ್ಲಿ ಕೊರೋನ ಪಾಸಿಟಿವ್ ಆಗುತ್ತಿರುವವರ ಸಂಖ್ಯೆ ಒಂದೇ ಸಮನೆ ಏರುಗತಿ ಯಲ್ಲಿದ್ದು, ಇಂದು ಮತ್ತೆ 15 ಮಂದಿ ಈ ಪಟ್ಟಿಗೆ ಸೇರ್ಪಡೆಗೊಂಡರು.

ಇದರಿಂದ ಜಿಲ್ಲೆಯಲ್ಲೀಗ ಒಟ್ಟು 164 ಮಂದಿಯಲ್ಲಿ ಕೊರೋನ ಸೋಂಕು ಪತ್ತೆಯಾಗಿದ್ದು, ಈ ಮೂಲಕ ಉಡುಪಿ ಜಿಲ್ಲೆ ರಾಜ್ಯದಲ್ಲಿ ಐದನೇ ಸ್ಥಾನಕ್ಕೆ ನೆಗೆದಿದೆ. ಉಳಿದಂತೆ ಪಶ್ಚಿಮ ಕರಾವಳಿಯ ದಕ್ಷಿಣಕನ್ನಡ ಜಿಲ್ಲೆ 12ನೇ (97ಕೇಸು) ಹಾಗೂ ಉತ್ತರ ಕನ್ನಡ ಜಿಲ್ಲೆ 16ನೇ (75) ಸ್ಥಾನದಲ್ಲಿವೆ.

ಇಬ್ಬರು ಬಿಡುಗಡೆ: ಜಿಲ್ಲೆಯಲ್ಲೀಗ 158 ಸಕ್ರೀಯ ಪ್ರಕರಣಗಳಿವೆ. ಮಾ.29ರವರೆಗೆ ಪಾಸಿಟಿವ್ ಬಂದ ಮೂವರು ಚಿಕಿತ್ಸೆಯ ಬಳಿಕ ಚೇತರಿಸಿ ಕೊಂಡು ಆಸ್ಪತ್ರೆಯಿಂದ ಬಿಡುಗಡೆ ಗೊಂಡಿದ್ದರೆ, ಒಮ್ಮೆ ಪಾಸಿಟಿವ್ ಬಂದ ಬಳಿಕ ಮರು ಪರೀಕ್ಷೆಯಲ್ಲಿ ಎರಡು ಬಾರಿ ನೆಗೆಟಿವ್ ಬಂದ ಕಾರ್ಕಳದ 22ರ ಹರೆಯದ ತುಂಬು ಗರ್ಭಿಣಿ ಹಾಗೂ ಜಿಪಂನ ಸಿಬ್ಬಂದಿ 30ರ ಹರೆಯದ ಕಟಪಾಡಿಯ ಯುವಕನನ್ನು ಇಂದು ಬಿಡುಗಡೆಗೊಳಿಸಲಾಗಿದೆ. ಇದುವರೆಗೆ ಇವರಿಬ್ಬರು ತಮ್ಮ ಮನೆಯಲ್ಲೇ ಕ್ವಾರಂಟೈನ್‌ನಲ್ಲಿದ್ದು, ಇದೀಗ ಅದರಿಂದ ಮುಕ್ತರಾಗಿದ್ದಾರೆ.

ಹೀಗಾಗಿ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು ಐವರು ಆಸ್ಪತ್ರೆಯಿಂದ ಬಿಡುಗಡೆ ಗೊಂಡಂತಾಗಿದೆ. ಮುಂಬೈಯಿಂದ ಬಂದ ಒಬ್ಬರು ಹೃದಯಾಘಾತ ದಿಂದ ನಿಧನರಾಗಿದ್ದು, ಅವರಲ್ಲೂ ಕೊರೋನ ಸೋಂಕು ಕಂಡು ಬಂದಿತ್ತು. ಹೀಗಾಗಿ ಈಗ ಸದ್ಯಕ್ಕೆ 158 ಉಡುಪಿಯ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ ಎಂದು ಡಾ. ಸೂಡ ತಿಳಿಸಿದರು.

ಶುಕ್ರವಾರ ಪಾಸಿಟಿವ್ ಬಂದ ಎಲ್ಲಾ 15 ಮಂದಿಯೂ ಮಹಾರಾಷ್ಟ್ರದಿಂದ ಊರಿಗೆ ಬಂದವರಾಗಿದ್ದಾರೆ. ಇವರಲ್ಲಿ 9 ಮಂದಿ ಪುರುಷರು, ನಾಲ್ವರು ಮಹಿಳೆಯರು ಹಾಗೂ ಇಬ್ಬರು 10 ವರ್ಷದೊಳಗಿನ ಬಾಲಕರು. ಇವರೆಲ್ಲರನ್ನೂ ಈಗಾಗಲೇ ಕೋವಿಡ್ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಡಿಎಚ್‌ಓ ಹೇಳಿದರು.

ಇಂದು 49 ವರ್ಷ, 63, 39, 34, 36, 39, 41, 36 ಹಾಗೂ 33 ವರ್ಷದ ಪುರುಷರಲ್ಲಿ, 38 ವರ್ಷ, 80, 27 ಹಾಗೂ 35 ವರ್ಷ ಪ್ರಾಯದ ಮಹಿಳೆಯರಲ್ಲಿ ಅಲ್ಲದೇ 7 ಮತ್ತು 6 ವರ್ಷ ಪ್ರಾಯದ ಬಾಲಕರಲ್ಲಿ ಸೋಂಕು ಪತ್ತೆಯಾಗಿದೆ. ಇವರಲ್ಲಿ ಕುಂದಾಪುರ ತಾಲೂಕಿನ ಇಬ್ಬರು, ಉಡುಪಿ ತಾಲೂಕಿನ ಇಬ್ಬರು ಹಾಗೂ ಕಾರ್ಕಳದ 11 ಮಂದಿ ಇದ್ದಾರೆ ಎಂದು ಡಾ.ಸೂಡ ತಿಳಿಸಿದರು.

15ಪಾಸಿಟಿವ್, 677 ನೆಗೆಟಿವ್: ಕೋವಿಡ್ -19 ಸೋಂಕಿನ ಪರೀಕ್ಷೆಗಾಗಿ ಕಳುಹಿಸಿದ ಶಂಕಿತರ ಗಂಟಲು ದ್ರವದ ಮಾದರಿಗಳಲ್ಲಿ ಶುಕ್ರವಾರ 15 ಮಾದರಿಗಳು ಪಾಸಿಟಿವ್ ಫಲಿತಾಂಶವನ್ನು ನೀಡಿದ್ದರೆ, ಒಟ್ಟು 677 ವರದಿಗಳು ನೆಗೆಟಿವ್ ಆಗಿವೆ. ಇಂದಿನ 15 ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಈವರೆಗೆ 164 ಪಾಸಿಟಿವ್ ಫಲಿತಾಂಶ ಬಂದಂತಾಗಿದೆ. ಇವುಗಳಲ್ಲಿ 158 ಸಕ್ರೀಯ ವಾಗಿದ್ದು, ಮೂವರು ಗುಣಮುಖರಾಗಿ, ಇಬ್ಬರು ಸ್ಯಾಂಪಲ್ ನೆಗೆಟಿವ್ ಬಂದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ, ಒಬ್ಬರು ಮೃತಪಟ್ಟಿದ್ದಾರೆ ಎಂದು ಡಿಎಚ್‌ಓ ತಿಳಿಸಿದರು.

 4 ಸ್ಯಾಂಪಲ್ ಮಾತ್ರ ಸಂಗ್ರಹ:  ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಗಂಟಲು ದ್ರವ ಮಾದರಿಗಳ ಸಂಖ್ಯೆ ಈಗ 10969. ರಾಜ್ಯ ಸರಕಾರ ಸ್ಯಾಂಪಲ್‌ಗಳ ಪರೀಕ್ಷೆಗೆ ಹೊಸ ನಿಯಮ ರೂಪಿಸಿದ ಬಳಿಕ ಮಾದರಿಗಳ ಸಂಗ್ರಹದಲ್ಲಿ ಗಣನೀಯ ಇಳಿಕೆಯಾಗಿದೆ. ಇಂದು ಕೇವಲ ನಾಲ್ಕು ಮಾದರಿಗಳನ್ನು ಮಾತ್ರ ಸಂಗ್ರಹಿಸಲಾಯಿತು. ಇವುಗಳಲ್ಲಿ ಒಂದು ಕೋವಿಡ್ ಸಂಪರ್ಕಿತರದ್ದಾದರೆ, ಇನ್ನೊಂದು ಉಸಿರಾಟ ತೊಂದರೆ ಇರುವವರು ಹಾಗೂ ಎರಡು ಶೀತಜ್ವರ ಇರುವವರದ್ದಾಗಿದೆ ಎಂದು ಡಾ.ಸೂಡ ತಿಳಿಸಿದರು.

ಈವರೆಗೆ ಸಂಗ್ರಹಿಸಿದ 10,969 ಮಾದರಿಗಳಲ್ಲಿ 4950ರ ಪರೀಕ್ಷಾ ವರದಿ ಮಾತ್ರ ಬಂದಿವೆ. ಇವುಗಳಲ್ಲಿ 4786 ನೆಗೆಟಿವ್ ಆಗಿದ್ದರೆ, ಒಟ್ಟು 164 ಸ್ಯಾಂಪಲ್‌ಗಳು ಪಾಸಿಟಿವ್ ಆಗಿ ಬಂದಿವೆ. ಇನ್ನೂ 6019 ಸ್ಯಾಂಪಲ್‌ಗಳ ವರದಿ ಬರಬೇಕಾಗಿದೆ ಎಂದು ಅವರು ವಿವರಿಸಿದರು.

ಶಂಕಿತ ನೋವೆಲ್ ಕೊರೋನ ಸೋಂಕಿನ ಪರೀಕ್ಷೆಗಾಗಿ ಇಂದು 10 ಮಂದಿ ಐಸೋಲೇಶನ್ ವಾರ್ಡಿಗೆ ದಾಖಲಾಗಿದ್ದಾರೆ. ಇವರಲ್ಲಿ ನಾಲ್ವರು ಪುರುಷರು ಹಾಗೂ ಆರು ಮಂದಿ ಮಹಿಳೆಯರು. ನಾಲ್ವರು ಕೊರೋನ ಶಂಕಿತರು, ನಾಲ್ವರು ತೀವ್ರತರದ ಉಸಿರಾಟ ತೊಂದರೆಯವರು ಹಾಗೂ ಇಬ್ಬರು ಶೀತಜ್ವರದ ಬಾಧೆಯ ಪರೀಕ್ಷೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿವಿಧ ಆಸ್ಪತ್ರೆಗಳ ಐಸೋಲೇಶನ್ ವಾರ್ಡಿನಿಂದ ಇಂದು 4ಮಂದಿ ಬಿಡುಗಡೆಗೊಂಡಿದ್ದು, 70 ಮಂದಿ ಇನ್ನೂ ವೈದ್ಯರ ನಿಗಾದಲ್ಲಿದ್ದಾರೆ.

ಜಿಲ್ಲೆಯಲ್ಲಿ ಕೊರೋನ ಸೋಂಕಿನ ಗುಣಲಕ್ಷಣದ 14 ಮಂದಿ ಇಂದು ನೊಂದಣಿ ಗೊಂಡಿದ್ದು, ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಒಟ್ಟು 4924 ಮಂದಿಯನ್ನು ಕೊರೋನ ತಪಾಸಣೆಗಾಗಿ ನೋಂದಣಿ ಮಾಡಿಕೊಂಡಂತಾಗಿದೆ. ಜಿಲ್ಲೆಯಲ್ಲಿ ಈಗಲೂ 37 ಮಂದಿ ಹೋಮ್ ಕ್ವಾರಂಟೈನ್ ‌ನಲ್ಲೂ, 328 ಮಂದಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಹಾಗೂ 91 ಮಂದಿ ಆಸ್ಪತ್ರೆ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಡಾ. ಸುಧೀರ್ ‌ಚಂದ್ರ ಸೂಡ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News