ಬಾಲಕನಿಗೆ ಹಲ್ಲೆ, ಜೀವ ಬೆದರಿಕೆ ಪ್ರಕರಣ: ಪ್ರಮುಖ ಆರೋಪಿ ಬಜರಂಗದಳ ಮುಖಂಡ ಸೆರೆ

Update: 2020-05-29 14:42 GMT
ದಿನೇಶ

ಬಂಟ್ವಾಳ, ಮೇ 29:  ಬಾಲಕನನ್ನು ಅಪಹರಿಸಿ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿ ದರೋಡೆ ನಡೆಸಿದ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರ ವಿಶೇಷ ತಂಡ ಯಶಸ್ವಿಯಾಗಿದೆ.

ಬಜರಂಗದಳದ ಮುಖಂಡ, ಕನ್ಯಾನ ನಿವಾಸಿ ದಿನೇಶ (25) ಬಂಧಿತ ಆರೋಪಿ. ಪ್ರಕರಣದಲ್ಲಿ ಈತನ ಜತೆ ಇದ್ದ ಇತರ ಮೂವರನ್ನು ಪೊಲೀಸರು ಕಾನೂನು ಕ್ರಮಕ್ಕೆ ಒಳಪಡಿಸಿದ್ದಾರೆ.

ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಕುಡ್ತಮುಗೇರು ಎಂಬಲ್ಲಿನ ಬಾಲಕನೊಬ್ಬನನ್ನು ಆತನ ಮನೆ ಸಮೀಪದ ಅಂಗಡಿಯೊಂದರ ಬಳಿ ಎ. 21ರಂದು ಅಡ್ಡಗಟ್ಟಿ ದ್ವಿಚಕ್ರ ವಾಹನದಲ್ಲಿ ಅಪಹರಿಸಿ ಕಾಡುಮಠ ಸರಕಾರಿ ಶಾಲೆಯ ಮೈದಾನದಲ್ಲಿ ಹಲ್ಲೆ ನಡೆಸಿದ್ದಾರೆ. ಅವಾಚ್ಯ ಶಬ್ದಗಳಿಂದ ಬೈದು ಪೊಲೀಸರಿಗೆ ದೂರು ನೀಡದಂತೆ ಜೀವ ಬೆದರಿಕೆ ಹಾಕಿದ್ದಾರೆ. ಜೈ ಶ್ರೀರಾಮ್ ಹೇಳುವಂತೆ ಬಲವಂತಪಡಿಸಿರುವುದಲ್ಲದೆ ಬಾಲಕನ ಜೇಬಿನಲ್ಲಿದ್ದ ಹಣವನ್ನು ದೋಚಿದ್ದಾರೆ ಎಂದು ದೂರಲಾಗಿದೆ.

ಬಂಧಿತ ಆರೋಪಿ ದಿನೇಶ್ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣ ಇದ್ದು ರೌಡಿ ಶೀಟರ್ ಆಗಿದ್ದಾನೆ. ಕೆಲವು ಸಮಯದ ಹಿಂದೆ ಬಾಯಾರಿನಲ್ಲಿ ಧರ್ಮ ಗುರುವಿಗೆ ಹಲ್ಲೆ ನಡೆಸಿರುವ ಆರೋಪವೂ ಈತನ ಮೇಲಿದೆ.

ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಲಕ್ಷ್ಮೀ ಪ್ರಸಾದ್ ಮಾರ್ಗದರ್ಶನದಲ್ಲಿ ಡಿವೈಎಸ್‍ಪಿ ವೆಲೆಂಟನ್ ಡಿಸೋಜ, ವೃತ್ತ ನಿರೀಕ್ಷಕ ಟಿ. ಡಿ. ನಾಗರಾಜ್ ನಿರ್ದೇಶನದಂತೆ ಡಿಸಿಐಬಿ ಪಿಐ ಚೆಲುವರಾಜ್, ಬಂಟ್ವಾಳ ಸಂಚಾರಿ ಠಾಣೆಯ ಉಪನಿರೀಕ್ಷಕ ರಾಜೇಶ್ ಕೆ.ವಿ., ಸಿಬ್ಬಂದಿಯಾದ ಉದಯ ರೈ, ತಾರಾನಾಥ, ಸೋನ್ಸ್, ಸುರೇಶ್ ಅವರ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News