10-15 ದಿನಗಳ ನಂತರ ಸಾರ್ವಜನಿಕರಿಗೆ ‘ಶ್ರೀಕೃಷ್ಣ ದರ್ಶನ’

Update: 2020-05-29 14:55 GMT

ಉಡುಪಿ, ಮೇ 29: ರಾಜ್ಯ ಸರಕಾರ ರಾಜ್ಯದ ವಿವಿಧ ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನಗಳಲ್ಲಿ ಜೂನ್ 1ರಿಂದ ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸುವ ಘೋಷಣೆ ಮಾಡಿದ್ದರೂ, ಉಡುಪಿ ಶ್ರೀಕೃಷ್ಣ ಮಠದಲ್ಲಿ ಇನ್ನು 10-15 ದಿನಗಳ ನಂತರ ಸಂದರ್ಭಾನು ಸಾರ ಕೊರೋನ ಪರಿಣಾಮವನ್ನು ಗಮನಿಸಿ, ಇತರ ಮಠಾಧೀಶರ ಸಹಮತ ಹಾಗೂ ಸಲಹೆ- ಸೂಚನೆಗಳನ್ನು ಪಡೆದು ಶ್ರೀಕೃಷ್ಣ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಪರ್ಯಾಯ ಶ್ರೀಅದಮಾರು ಮಠದ ಶ್ರೀಈಶಪ್ರಿಯತೀರ್ಥರು ತಿಳಿಸಿದ್ದಾರೆ.

ಜೂನ್ 1ರಿಂದ ಎಲ್ಲಾ ದೇವಸ್ಥಾನಗಳು ದೇವರ ದರ್ಶನಕ್ಕೆ ಅವಕಾಶ ನೀಡಿದರೂ, ಆಚಾರ್ಯ ಮಧ್ವರು ಮಾಡಿದ ಸಂಪ್ರದಾಯದ ರಕ್ಷಣೆಯೂ ಆದ್ಯ ಕರ್ತವ್ಯವಾಗಿರುವುದರಿಂದ ಶ್ರೀಕೃಷ್ಣ ಮಠದಲ್ಲಿ ಮುಂದಿನ 10-15 ದಿನಗಳ ನಂತರ ಸಂದರ್ಭಾನುಸಾರ ಕೊರೋನ ಪರಿಣಾಮವನ್ನು ಗಮನಿಸಿ ಹಿಂದಿನ ದಿನಗಳಂತೆ ಭಕ್ತರಿಗೆ ಮುಕ್ತವಾಗಿ ದರ್ಶನ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಶ್ರೀಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಸ್ತುತ ಕೋವಿಡ್-19 ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಈ ಸಂದರ್ಭ ದಲ್ಲಿ ಶ್ರೀಕೃಷ್ಣ ಮಠದ ಪರಂಪರೆ ಉಳಿಸುವ ದೃಷ್ಟಿಯಿಂದ ಈ ದಿನಗಳಲ್ಲಿ ಭಕ್ತರಿಗೆ ಶ್ರೀಕೃಷ್ಣ ಮಠದ ಒಳಗೆ ಪ್ರವೇಶ ನೀಡದೇ ಜಿಲ್ಲಾಡಳಿತದ ಆದೇಶವನ್ನು ಪಾಲಿಸಿ ಕೊಂಡು ಬರಲಾಗುತ್ತಿದೆ. ಭಕ್ತರಿಗೆ ಹೊರಗಿನಿಂದಲೇ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಶ್ರೀಕೃಷ್ಣ ಮಠದಲ್ಲಿ ಅಗತ್ಯದ ಸೇವಾ ಪರಿಚಾರಕರು ಮಾತ್ರ ಮಠದೊಳಗಿದ್ದು, ಪೂಜಾ ಕೈಂಕರ್ಯ ಸಂಪ್ರದಾಯಬದ್ಧವಾಗಿ ನಡೆಯುತ್ತಿದೆ. ಶ್ರೀಕೃಷ್ಣ ಮಠದಲ್ಲಿ ಅಷ್ಟಮಠದ ಯತಿಗಳೇ ಪೂಜೆ ನಡೆಸುವ ಸಂಪ್ರದಾಯವಿದ್ದು, ಪೂಜಾ ಕೈಂಕರ್ಯಗಳಿಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ ಜೂನ್ ಮಧ್ಯಾವಧಿಯ ಬಳಿಕ ಇತರ ಮಠಾಧೀಶರ ಸಹಮತದೊಂದಿಗೆ ಅವರ ಸಲಹೆ ಸೂಚನೆಗಳನ್ನು ಅನುಸರಿಸಿ ಭಕ್ತರಿಗೆ ಈ ಹಿಂದಿನಂತೆ ಮುಕ್ತವಾದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಶ್ರೀಈಶಪ್ರಿಯ ತೀರ್ಥರು ತಿಳಿಸಿದ್ದಾರೆ.

ಭಕ್ತರ ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದ್ದು, ಮಠದ ಭಕ್ತರು ಎಂದಿನಂತೆ ಸಹಕಾರ ನೀಡುವಂತೆ ವಿನಂತಿಸುವುದಾಗಿ ಪರ್ಯಾಯ ಅದಮಾರು ಮಠದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News