ಚೀನಾ ಗಡಿಯಲ್ಲಿ ಏನಾಗುತ್ತಿದೆ ಎಂದು ದೇಶಕ್ಕೆ ತಿಳಿಸಿ: ಕೇಂದ್ರಕ್ಕೆ ರಾಹುಲ್ ಗಾಂಧಿ ಆಗ್ರಹ

Update: 2020-05-29 17:08 GMT

ಹೊಸದಿಲ್ಲಿ, ಮೇ 29: ಚೀನಾ ಗಡಿಯಲ್ಲಿ ಏನಾಗುತ್ತಿದೆ ಎನ್ನುವುದನ್ನು ದೇಶಕ್ಕೆ ಸ್ಪಷ್ಟಪಡಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರವನ್ನು ಆಗ್ರಹಿಸಿದ್ದಾರೆ.

 ಭಾರತ-ಚೀನಾ ಗಡಿಯಲ್ಲಿ ಮಿಲಿಟರಿ ಬಿಕ್ಕಟ್ಟಿನ ಕುರಿತು ಸರಕಾರದ ನಿರಂತರ ಮೌನವು ಕೊರೋನ ವೈರಸ್ ವಿರುದ್ಧ ಹೋರಾಟದ ಈ ಸಮಯದಲ್ಲಿ ಭಾರೀ ಊಹಾಪೋಹಗಳಿಗೆ ಮತ್ತು ಅನಿಶ್ಚಿತತೆಗೆ ಕಾರಣವಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಎರಡು ದಿನಗಳ ಹಿಂದಷ್ಟೇ ಕಾಂಗ್ರೆಸ್ ಪಕ್ಷವು ಲಡಾಖ್‌ನಲ್ಲಿಯ ಸ್ಥಿತಿ ಮತ್ತು ಚೀನಾದೊಂದಿಗಿನ ಉದ್ವಿಗ್ನತೆಯನ್ನು ಗಂಭೀರ ರಾಷ್ಟ್ರೀಯ ಕಳವಳದ ವಿಷಯವೆಂದು ಬಣ್ಣಿಸಿತ್ತು ಮತ್ತು ದೇಶವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಹಾಗೂ ಜನತೆಯ ಕಳವಳಗಳನ್ನು ನಿವಾರಿಸುವಂತೆ ಸರಕಾರಕ್ಕೆ ಕರೆ ನೀಡಿತ್ತು.

ಚೀನಾದೊಂದಿಗೆ ಗಡಿಯಲ್ಲಿನ ಸ್ಥಿತಿಯ ಬಗ್ಗೆ ಸರಕಾರದ ಮೌನವು ಈ ಬಿಕ್ಕಟ್ಟಿನ ಸಮಯದಲ್ಲಿ ಭಾರೀ ಊಹಾಪೋಹಗಳು ಮತ್ತು ಅನಿಶ್ಚಿತತೆಗೆ ಇಂಬು ನೀಡುತ್ತಿದೆ. ನಿಜಕ್ಕೂ ಏನು ನಡೆಯುತ್ತಿದೆ ಎನ್ನುವುದನ್ನು ಸರಕಾರವು ದೇಶಕ್ಕೆ ಸ್ಪಷ್ಟಪಡಿಸಬೇಕು ಎಂದು ರಾಹುಲ್ ಶುಕ್ರವಾರ ಟ್ವೀಟಿಸಿದ್ದಾರೆ.

ಮಂಗಳವಾರವೂ ಇಂತಹುದೇ ಮನವಿಯನ್ನು ಮಾಡಿಕೊಂಡಿದ್ದ ಅವರು,ಈ ನಿರ್ಣಾಯಕ ಕಾಲಘಟ್ಟದಲ್ಲಿ ಪಾರದರ್ಶಕತೆಯ ಅಗತ್ಯವಿದೆ ಎಂದು ಸರಕಾರಕ್ಕೆ ನೆನಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News