ಉಡುಪಿ: ಕ್ವಾರಂಟೈನ್‌ನಿಂದ 7,142 ಮಂದಿ ಮನೆಗೆ

Update: 2020-05-29 16:47 GMT

 ಉಡುಪಿ, ಮೇ 29: ಹೊರದೇಶ ಹಾಗೂ ಹೊರರಾಜ್ಯಗಳಿಂದ ಲಾಕ್‌ಡೌನ್ ಸಂದರ್ಭದಲ್ಲಿ ಬಂದು ಜಿಲ್ಲೆಯ ವಿವಿಧ ಸಾಂಸ್ಥಿಕ ಹಾಗೂ ಸರಕಾರಿ ಕ್ವಾರಂಟೈನ್ ಕೇಂದ್ರಗಳಲ್ಲಿದ್ದ 7,142 ಮಂದಿಯನ್ನು ರಾಜ್ಯ ಸರಕಾರ ಕಳುಹಿಸಿದ ಹೊಸ ಸುತ್ತೋಲೆಯ ಹಿನ್ನೆಲೆಯಲ್ಲಿ ಗುರುವಾರ ಬಿಡುಗಡೆಗೊಳಿಸಲಾಗಿದೆ.

ಹೊರ ದೇಶ ಹಾಗೂ ಹೊರರಾಜ್ಯಗಳಿಂದ ಬಂದವರು ಒಂದು ವಾರ ಕ್ವಾರಂಟೈನ್ ವಾಸವನ್ನು ಮುಗಿಸಿದ್ದು, ಅವರಲ್ಲಿ ಯಾವುದೇ ಕೊರೋನ ರೋಗ ಲಕ್ಷಣವಿಲ್ಲದೇ ಇದ್ದರೆ ಬಿಡುಗಡೆಗೊಳಿಸಲು ಹೊಸ ಸುತ್ತೋಲೆಯಲ್ಲಿ ಅವಕಾಶ ನೀಡಲಾಗಿದೆ. ಅದರಂತೆ ಜಿಲ್ಲೆಯಲ್ಲಿ ನಿನ್ನೆ ಒಂದೇ ದಿನ 7000ಕ್ಕೂ ಅಧಿಕ ಮಂದಿಯನ್ನು ಬಿಡುಗಡೆಗೊಳಿಸಿ ಕೆಲವು ಶರತ್ತುಗಳೊಂದಿಗೆ ಮನೆಗೆ ಕಳುಹಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 8195 ಮಂದಿ ವಿವಿಧ ಕ್ವಾರಂಟೈನ್ ಕೇಂದ್ರಗಳಲ್ಲಿದ್ದು ಇವರಲ್ಲಿ 7142 ಮಂದಿ ಗುರುವಾರ ಬಿಡುಗಡೆಗೊಂಡಿದ್ದಾರೆ. ಉಳಿದಿರುವ 1053 ಮಂದಿಯಲ್ಲಿ ಇನ್ನಷ್ಟು ಮಂದಿಯನ್ನು ಇಂದು ಬಿಡುಗಡೆ ಮಾಡಲಾಗಿದೆ. ಅವರ ಸರಿಯಾದ ಸಂಖ್ಯೆ ಇನ್ನೂ ತನ್ನ ಕೈಸೇರಿಲ್ಲ ಎಂದು ಡಾ.ಸೂಡ ತಿಳಿಸಿದರು.

ನಿನ್ನೆ ಬಿಡುಗಡೆಗೊಂಡವರಲ್ಲಿ ಕುಂದಾಪುರ ತಾಲೂಕಿನಲ್ಲಿದ್ದ 1576 ಮಂದಿಯಲ್ಲಿ 1563 ಮಂದಿ, ಬೈಂದೂರು ತಾಲೂಕಿನ 2549 ಮಂದಿಯಲ್ಲಿ 2343, ಕಾರ್ಕಳ ಮತ್ತು ಹೆಬ್ರಿ ತಾಲೂಕಿನ 2450 ಮಂದಿಯಲ್ಲಿ 1832, ಕಾಪು ತಾಲೂಕಿನ 478 ಮಂದಿಯಲ್ಲಿ 367, ಬ್ರಹ್ಮಾವರ ತಾಲೂಕಿನ 530 ಮಂದಿಯಲ್ಲಿ 457 ಹಾಗೂ ಉಡುಪಿ ತಾಲೂಕಿನ 612 ಮಂದಿಯಲ್ಲಿ 580 ಮಂದಿ ಕ್ವಾರಂಟೈನ್ ಕೇಂದ್ರದಿಂದ ಬಿಡುಗಡೆಗೊಂಡು ಹೋಮ್ ಕ್ವಾರಂಟೈನ್‌ಗೆ ತೆರಳಿದ್ದಾರೆ ಎಂದು ಅವರು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News