‘ನಾವೇನು ಪ್ರಾಣಿಗಳೇ’: ಆಹಾರ, ನೀರಿಲ್ಲದೆ ಆಸ್ಪತ್ರೆಯಲ್ಲಿ ಕೊರೋನ ಸೋಂಕಿತರ ಪ್ರತಿಭಟನೆ

Update: 2020-05-29 17:15 GMT

ಲಕ್ನೋ,ಮೇ29: ಉತ್ತರಪ್ರದೇಶದ ಪ್ರಯಾಗ್‌ರಾಜ್ ಜಿಲ್ಲೆಯ ಸರಕಾರಿ ಆಸ್ಪತ್ರೆ ಯಲ್ಲಿ ಆಹಾರ ಹಾಗೂ ನೀರಿನ ಕೊರತೆಯನ್ನು ಪ್ರತಿಭಟಿಸಿ ಕೋವಿಡ್-19 ರೋಗಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು. ಸೋಂಕು ಪೀಡಿತರ ಪ್ರತಿಭಟನೆಯ ಮೂರು ನಿಮಿಷಗಳ ವಿಡಿಯೋ, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ರಾಜ್ಯದ ಕೊಟ್ವಾ ಬನಿ ಪಟ್ಟಣದಲ್ಲಿರುವ ಕೋವಿಡ್-19 ಆಸ್ಪತ್ರೆಯಲ್ಲಿ ಈ ಪ್ರತಿಭಟನೆ ನಡೆದಿದೆ. ತಮ್ಮನ್ನು ಪ್ರಾಣಿಗಳಂತೆ ನೋಡಿಕೊಳ್ಳಲಾಗುತ್ತಿದೆ ಎಂದು ರೋಗಿಯೊಬ್ಬ ದೂರುತ್ತಿರುವುದನ್ನು ವಿಡಿಯೋವನ್ನು ತೋರಿಸಲಾಗಿದೆ. ‘‘ ನಾವೇನು ಪ್ರಾಣಿಗಳೇ, ನಮಗೆ ನೀರು ಬೇಡವೇ, ಜನರು ನೀರಿಲ್ಲದೆ ಸಾಯುತ್ತಿದ್ದಾರೆ’’ ಎಂದು ಆತ ಕಿಡಿಕಾರುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಸುಮಾರು ಎರಡು ತಾಸುಗಳ ಕಾಲ ಆಸ್ಪತ್ರೆಯಲ್ಲಿ ನೀರು ಪೂರೈಕೆಯನ್ನು ಮರುಸ್ಥಾಪಿಸಲು ಆಸ್ಪತ್ರೆಯ ಆಡಳಿತ ವಿಫಲವಾದ ಸಂದರ್ಭ ಈ ಘಟನೆ ನಡೆದಿರುವುದಾಗಿ ಹೇಳಲಾಗಿದೆ.

   ಆಸ್ಪತ್ರೆಯಲ್ಲಿ ತಮಗೆ ಸಮರ್ಪಕ ಆಹಾರವನ್ನು ಕೂಡಾ ಒದಗಿಸಲಾಗುತ್ತಿಲ್ಲ. ಅರ್ಧಬೆಂದ ಆಹಾರವನ್ನು ನೀಡಲಾಗುತ್ತಿದೆ ಎಂದು ರೋಗಿಗಳು ದೂರಿದ್ದಾರೆ ಇದೇ ಪರಿಸ್ಥಿತಿ ಮುಂದುವರಿದಲ್ಲಿ ತಾವು ಆಸ್ಪತ್ರೆ ತೊರೆಯುವುದಾಗಿ ರೋಗಿಗಳು ಬೆದರಿಕೆ ಹಾಕಿರುವುದು ದೃಶ್ಯಗಳು ವಿಡಿಯೋದಲ್ಲಿ ದಾಖಲಾಗಿವೆ.

 ಈ ನಡುವೆ ಪ್ರಯಾಗರಾಜ್‌ನ ಮುಖ್ಯ ವೈದ್ಯಾಧಿಕಾರಿ ಅವರು ಹೇಳಿಕೆಯೊಂದನ್ನು ನೀಡಿ, ಕೇವಲ ಎರಡು ತಾಸುಗಳೊಳಗೆ ನೀರು ಪೂರೈಕೆಯ ಸಮಸ್ಯೆಯನ್ನು ಸರಿಪಡಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ವಿದ್ಯುತ್ ಪೂರೈಕೆಯಲ್ಲಿನ ಲೋಪದೋಷದಿಂದಾಗಿ ಈ ಸಮಸ್ಯೆಯುಂಟಾಗಿತ್ತೆಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News