ಉಡುಪಿ: ಕ್ವಾರಂಟೈನ್ ಮುಗಿಸಿ ಮನೆಗೆ ಬಂದ ಸಹೋದರರಿಗೆ ನೆರೆಹೊರೆಯವರ ತಡೆ !

Update: 2020-05-29 17:26 GMT

ಉಡುಪಿ ಮೇ, 29: ಕೊರೋನ ಪರೀಕ್ಷೆಯ ವರದಿ ಬರಲಿಲ್ಲ ಎಂಬ ಕಾರಣಕ್ಕೆ 14 ದಿನಗಳ ಕಾಲ ಕ್ವಾರೆಂಟೈನ್ ಕೇಂದ್ರದಲ್ಲಿದ್ದ ಇಬ್ಬರು ಸಹೋದರರಿಗೆ ಮನೆಗೆ ಬಾರದಂತೆ ನೆರೆಹೊರೆಯವರು ತಡೆಯೊಡ್ಡಿರುವ ಘಟನೆ ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಮೇ 29ರಂದು ಬೆಳಗ್ಗೆ ನಡೆದಿದೆ.

ಬಸ್ ನಿಲ್ದಾಣದಲ್ಲಿ ಅಸಹಾಯಕರಾಗಿ ಕುಳಿತಿದ್ದ 20 ವರ್ಷದೊಳಗಿನ ಈ ಇಬ್ಬರು ವಿದ್ಯಾರ್ಥಿ ಸಹೋದರರಿಗೆ ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ, ತುರ್ತಾಗಿ ಶಾಲೆಯೊಂದರಲ್ಲಿ ನೆಲೆ ಕಲ್ಪಿಸಿದ್ದಾರೆ. ಈ ಮೂಲಕ ಈ ವಿದ್ಯಾರ್ಥಿಗಳು ಮತ್ತೊಮ್ಮೆ ಕ್ವಾರಂಟೇನ್‌ಗೆ ಒಳಗಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

14 ದಿನಗಳ ಹಿಂದೆ ಹೊರಜಿಲ್ಲೆಯಿಂದ ಆಗಮಿಸಿದ್ದ ಈ ಯುವಕರಿಬ್ಬರಿಗೆ ಕೊರೋನ ಸಹಾಯವಾಣಿಯವರು ಮನೆಯಲ್ಲಿಯೇ ಉಳಿದುಕೊಂಡು, ಹೊರಗೆ ಬಾರದಂತೆ ಸೂಚಿಸಿದ್ದರು. ಆ ವೇಳೆ ನೆರೆಹೊರೆಯವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆದುದರಿಂದ ಬಳಿಕ ಯುವಕರನ್ನು ಸರಕಾರಿ ಕ್ವಾರಂಟೈನ್ ನಲ್ಲಿ ಇರಿಸಿ, ಅವರ ಗಂಟಲ ದ್ರವದ ಮಾರಿಯನ್ನು ಪರೀಕ್ಷೆಗೆ ಕಳಿಸಲಾಗಿತ್ತು.

ಕ್ವಾರಂಟೈನ್ ಅವಧಿ ಮುಗಿದ ಹಿನ್ನೆಲೆಯಲ್ಲಿ ಇವರನ್ನು ಮನೆಗೆ ಕಳುಹಿಸ ಲಾಗಿತ್ತು. ಅದರಂತೆ ಇಂದು ಬೆಳಗ್ಗೆ ಮನೆಗೆ ಬಂದ ಇವರನ್ನು ಪರೀಕ್ಷೆಯ ಫಲಿತಾಂಶ ಬಂದಿಲ್ಲ ಎಂಬ ಕಾರಣಕ್ಕೆ ನೆರೆಹೊರೆಯವರು ತಡೆಯೊಡ್ಡಿದರು. ಇವರು ವರದಿ ಬರುವವರೆಗೆ ಮನೆಗೆ ಬರುವುದು ಬೇಡ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ಗೊಂದಲಕ್ಕೊಳಗಾದ ಸಹೋದರರು, ಬಸ್ ನಿಲ್ದಾಣದಲ್ಲಿ ದುಃಖಿತರಾಗಿ ಕೂತಿದ್ದರು. ಈ ಬಗ್ಗೆ ಮಾಹಿತಿ ತಿಳಿದ ವಿಶು ಶೆಟ್ಟಿಯವರು ಇವರಿಗೆ ಶಾಲೆಯಲ್ಲಿ ಇರಲು ವ್ಯವಸ್ಥೆ ಕಲ್ಪಿಸಿದರು.

‘ಇಂತಹ ಪ್ರಕರಣಗಳಿಂದ ದುರಂತಗಳು ಸಂಭವಿಸಬಹುದು. ಈ ಬಗ್ಗೆ ಸರಿಯಾದ ಮಾಹಿತಿ ಸಾರ್ವಜನಿಕರಿಗೆ ನೀಡುವ ಮೂಲಕ ಕ್ವಾರಂಟೈನ್ ಮುಗಿದವರಿಗೆ ಆಗುವ ತೊಂದರೆಯನ್ನು ತಪ್ಪಿಸುವ ಕೆಲಸ ಸಂಬಂಧಪಟ್ಟವರು ಮಾಡಬೇಕಾಗಿದೆ. ಸಾರ್ವಜನಿಕರು ಈ ವಿಚಾರದಲ್ಲಿ ತಾಳ್ಮೆ ಯಿಂದ ವರ್ತಿಸ ಬೇಕು. ಕ್ವಾರಂಟೈನ್ ನಲ್ಲಿರುವ ಶಂಕಿತರನ್ನು ಜಾಗೃತ ಗೊಳಿಸಬೇಕೆ ಹೊರತು ಗದರಿಸುವ ಹಾಗೂ ಬೆದರಿಸುವ ಕೆಲಸ ಮಾಡಬಾರದು.’ ಎಂದು ವಿಶು ಶೆಟ್ಟಿ ಅಂಬಲಪಾಡಿ ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News