ಕಂಕನಾಡಿ: ತಾತ್ಕಾಲಿಕ ಮಾರುಕಟ್ಟೆಗೆ ವ್ಯಾಪಾರಿಗಳ ಸ್ಥಳಾಂತರ

Update: 2020-05-29 17:41 GMT

ಮಂಗಳೂರು, ಮೇ 29: ನಗರದ 2ನೆ ಅತೀ ದೊಡ್ಡ ಮಾರುಕಟ್ಟೆ ಎಂಬ ಖ್ಯಾತಿಗೊಳಗಾಗಿರುವ ಕಂಕನಾಡಿಯ ಮಾರುಕಟ್ಟೆಯನ್ನು ಕೆಡವಿ ಹೊಸ ಮಾರುಕಟ್ಟೆ ನಿರ್ಮಿಸುವ ಸಲುವಾಗಿ ಪಕ್ಕದಲ್ಲೇ ನಿರ್ಮಿಸಲಾದ ತಾತ್ಕಾಲಿಕ ಮಾರುಕಟ್ಟೆಗೆ ವ್ಯಾಪಾರಿಗಳು ಸ್ಥಳಾಂತರಗೊಂಡಿದ್ದಾರೆ.

ತಾತ್ಕಾಲಿಕ ಮಾರುಕಟ್ಟೆಯು ಎರಡು ತಿಂಗಳ ಹಿಂದೆಯೇ ಸಿದ್ಧಗೊಂಡಿದ್ದರೂ ಕೂಡ ಕೊರೋನ-ಲಾಕ್‌ಡೌನ್ ಹಿನ್ನೆಲೆಯಲ್ಲಿ ಸ್ಥಳಾಂತರ ಪ್ರಕ್ರಿಯೆಗೆ ಚಾಲನೆ ಸಿಕ್ಕಿರಲಿಲ್ಲ. ಈ ಮಧ್ಯೆ ಹಳೆಯ ಮಾರುಕಟ್ಟೆಯನ್ನು ಕೆಡಹುವ ಕಾಮಗಾರಿಯೂ ಸ್ಥಗಿತಗೊಂಡಿತ್ತು. ಹಂತ ಹಂತದ ಲಾಕ್‌ ಡೌನ್ ಸಡಿಲಿಕೆಯಾಗುತ್ತಲೇ ಹಳೆಯ ಮಾರುಕಟ್ಟೆಯಿಂದ ವ್ಯಾಪಾರಿಗಳು ತಾತ್ಕಾಲಿಕ ಮಾರುಕಟ್ಟೆಗೆ ಸ್ಥಳಾಂತರಗೊಂಡಿದ್ದರೆ, ಇತ್ತ ಹಳೆಯ ಮಾರುಕಟ್ಟೆಯನ್ನು ಕೆಡಹುವ ಕೆಲಸವನ್ನೂ ಆರಂಭಿಸಲಾಗಿದೆ.

ಹಳೆಯ ಕಟ್ಟಡ: ಸುಮಾರು 17 ವರ್ಷದ ಹಿಂದೆ ನಿರ್ಮಾಣಗೊಂಡ ಈ ಮಾರುಕಟ್ಟೆಯ ಕಟ್ಟಡವು ಕಳಪೆ ಕಾಮಗಾರಿಗೆ ಸಾಕ್ಷಿಯಾಗಿತ್ತು. ಯಾವುದೇ ಮೂಲಭೂತ ಸೌಕರ್ಯವಿಲ್ಲದ ಕಾರಣ ಇಲ್ಲಿನ ವ್ಯಾಪಾರಿಗಳಿಗೆ ಮಾತ್ರವಲ್ಲ, ಗ್ರಾಹಕರಿಗೆ ಕೂಡ ಅನನುಕೂಲವಾಗಿತ್ತು. ಇದನ್ನು ಕೆಡವಿ ಹೊಸ ಮಾರುಕಟ್ಟೆ ನಿರ್ಮಿಸಬೇಕು ಎಂದು ಕಂಕನಾಡಿ ಮಾರುಕಟ್ಟೆ ವರ್ತಕರ ಸಂಘವು ಮನಪಾ, ಜಿಲ್ಲಾಡಳಿತ, ಸಚಿವರು, ಅಧಿಕಾರಿಗಳಿಗೆ ಮನವಿ ಸಲ್ಲಿಸಿತ್ತು.

ಈ ಮಧ್ಯೆ ಸುಮಾರು 40 ಕೋ. ರೂ. ವೆಚ್ಚದಲ್ಲಿ ಕೆಯುಐಎಫ್‌ಡಿಸಿ ಮೂಲಕ ಹೈಟೆಕ್ ಮಾರ್ಕೆಟ್ ನಿರ್ಮಿಸಲು ಸ್ಥಳೀಯ ಕಾರ್ಪೊರೇಟರ್ ನವೀನ್ ಡಿಸೋಜ ಪ್ರಯತ್ನ ಪಟ್ಟರು. ಅದರ ಫಲವಾಗಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಯುಟಿ ಖಾದರ್ ಮಾರುಕಟ್ಟೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. ಇದೀಗ ಹಳೆಯ ಮಾರುಕಟ್ಟೆ ಕೆಡವಲಾಗುತ್ತಿದೆ. ತಾತ್ಕಾಲಿಕ ಮಾರುಕಟ್ಟೆಯಲ್ಲಿ ವ್ಯಾಪಾರ ಆರಂಭಗೊಂಡಿದೆ.

ತಾತ್ಕಾಲಿಕ ಮಾರುಕಟ್ಟೆಯಲ್ಲಿ ಯಾವ ಸಮಸ್ಯೆಯೂ ಇಲ್ಲ. ಕುಡಿಯಲು ನೀರು, ಶೌಚಾಲಯ, ವಿದ್ಯುತ್ ಹೀಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಗಾಳಿ-ಬೆಳಕು ಕೂಡ ಇದೆ. ವ್ಯಾಪಾರಕ್ಕೆ ಯೋಗ್ಯವಾದ ಸ್ಥಳಾವಕಾಶ ಕಲ್ಪಿಸಲಾಗಿದೆ. ಗ್ರಾಹಕರು ಮುಕ್ತವಾಗಿ ವ್ಯವಹರಿಸಬಹುದಾಗಿದೆ. ಆದಾಗ್ಯೂ ಕೊರೋನ ಹಿನ್ನೆಲೆಯಲ್ಲಿ ಸುರಕ್ಷಿತ ಅಂತರವನ್ನು ಎಲ್ಲರೂ ಕಾಪಾಡಬೇಕಿದೆ ಎಂದು ಕಂಕನಾಡಿ ಮಾರುಕಟ್ಟೆ ವರ್ತಕರ ಸಂಘದ ಅಧ್ಯಕ್ಷ ಅಲಿ ಹಸನ್ ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News