​ದುಬೈಯಿಂದ ಬಂದ ಗರ್ಭಿಣಿಗೆ ಹಿಂಸೆ ಆರೋಪ: ತನಿಖೆಗೆ ಸಮಿತಿ ರಚನೆ

Update: 2020-05-29 17:59 GMT

ಮಂಗಳೂರು, ಮೇ 29: ದುಬೈಯಿಂದ ಮೇ 12ರಂದು ಮಂಗಳೂರಿಗೆ ಬಂದ ಪ್ರಥಮ ವಿಮಾನದಲ್ಲಿದ್ದ ಗರ್ಭಿಣಿಗೆ ಆದ ದೈಹಿಕ ಮತ್ತು ಮಾನಸಿಕ ಹಿಂಸೆಗೆ ಸಂಬಂಧಿಸಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣದ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಸ್ನೇಹಲ್ ಆರ್. ನೇತೃತ್ವದ 9 ಮಂದಿಯ ಸಮಿತಿಯೊಂದನ್ನು ದ.ಕ.ಜಿಲ್ಲಾಧಿಕಾರಿ ನೇಮಿಸಿದ್ದಾರೆ.

ಮೇ 12ರಂದು ದುಬೈಯಿಂದ ಮಂಗಳೂರಿಗೆ ಬಂದಿದ್ದ ವಿಮಾನದಲ್ಲಿದ್ದ ಈ ಗರ್ಭಿಣಿಯನ್ನು ನಗರದ ಖಾಸಗಿ ಹೊಟೇಲಿನ ಕ್ವಾರಂಟೈನ್ ಕೇಂದ್ರದಲ್ಲಿರಿಸಲಾಗಿತ್ತು. ಈ ಮಧ್ಯೆ ಖಾಸಗಿ ಆಸ್ಪತ್ರೆಗೆ ದಾಖಲಾತಿಗೆ ಅವಕಾಶ ಸಿಗದ ಕಾರಣ ಗರ್ಭಿಣಿಯ ಹೊಟ್ಟೆಯಲ್ಲೇ ಮಗು ಸಾವಿಗೀಡಾಗಿತ್ತು. ಇದಕ್ಕೆ ಲೇಡಿಗೋಶನ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಉಪ್ಪಿನಂಗಡಿಯ ಗಾಂಧಿಪಾರ್ಕ್‌ನ ಅಬ್ದುಲ್ ಅಝೀಝ್ ಬಸ್ತಿಕಾರ್ ಆರೋಪಿಸಿದ್ದರು. ಅಲ್ಲದೆ, ಈ ಬಗ್ಗೆ ಜಿಲ್ಲಾಧಿಕಾರಿಗೂ ದೂರು ನೀಡಿದ್ದರು.

ಕ್ವಾರಂಟೈನ್ ಅವಧಿ ಮುಗಿದ ಬಳಿಕ ಗರ್ಭಿಣಿ ವಾಸಿಸುತ್ತಿದ್ದ ಅಪಾರ್ಟ್‌ಮೆಂಟ್ ಪ್ರವೇಶಿಸಲು ನಿರಾಕರಿಸಿದ ಬಗ್ಗೆಯೂ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಜಿಲ್ಲಾಧಿಕಾರಿಗೆ ಅಝೀಝ್ ಬಸ್ತಿಕಾರ್ ದೂರು ನೀಡಿದ್ದರು. ಈ ಮಧ್ಯೆ ಮನಪಾ ಆಯುಕ್ತರು ಅಪಾರ್ಟ್‌ಮೆಂಟ್‌ನ ಅಸೋಸಿಯೇಶನ್‌ಗೆ ನೋಟಿಸ್ ಜಾರಿಗೊಳಿಸಿ ಮೂರು ದಿನದೊಳಗೆ ಉತ್ತರಿಸುವಂತೆ ಸೂಚಿಸಿದ್ದರು.

ಇವೆಲ್ಲದರ ಮಧ್ಯೆ ಪ್ರಕರಣದ ಬಗ್ಗೆ ತನಿಖೆ ನಡೆಸಿ ಸಮಗ್ರ ವರದಿ ಸಲ್ಲಿಸಲು ಜಿಲ್ಲಾಧಿಕಾರಿಯು ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News