ವಿದ್ಯುತ್ ಬಿಲ್ ಸಮಸ್ಯೆ: ಮೆಸ್ಕಾಂ ಜತೆ ಚರ್ಚೆ - ಸಚಿವ ಕೋಟ

Update: 2020-05-29 18:03 GMT

ಮಂಗಳೂರು, ಮೇ 29: ವಿದ್ಯುತ್ ಗ್ರಾಹಕರಿಗೆ ಅಧಿಕ ಬಿಲ್ ಬಂದಿರುವ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬರುತ್ತಿರುವ ಹಿನ್ನೆಲೆ ಯಲ್ಲಿ ಈ ಬಗ್ಗೆ ಸ್ಪಂದಿಸಲು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ದ.ಕ.ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ತನ್ನ ಕಚೇರಿಯಲ್ಲಿ ಶುಕ್ರವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು ಎರಡು ತಿಂಗಳ ಬಿಲ್‌ಗಳನ್ನು ಒಟ್ಟಿಗೆ ನೀಡಿದ್ದರೂ ನಿಗದಿತ ಸರಾಸರಿ ದರಕ್ಕಿಂತ ಹೆಚ್ಚು ಮೊತ್ತದ ಬಿಲ್ ಮೆಸ್ಕಾಂ ನೀಡಿರುವುದರ ಬಗ್ಗೆ ಸಾರ್ವಜನಿಕರ ಅಸಮಾಧಾನ ತನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಈಗಾಗಲೇ ಮೆಸ್ಕಾಂ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಶನಿವಾರ ಮತ್ತೊಮ್ಮೆ ಸಭೆ ನಡೆಸಿ ಗ್ರಾಹಕರಿಗೆ ಅನ್ಯಾಯವಾಗದಂತೆ ಗಮನಹರಿಸಲು ನಿರ್ದೇಶಿಸಲಾಗುವುದು ಎಂದರು.

ಮೀನುಗಾರಿಕೆ ಅವಧಿಯನ್ನು ಕೇಂದ್ರ ಸರಕಾರ ಜೂ.15ರವರೆಗೆ ವಿಸ್ತರಿಸಿ ಆದೇಶಿಸಿದೆ. ರಾಜ್ಯ ಸರಕಾರವೂ ಇದರನ್ವಯ ಕ್ರಮ ಕೈಗೊಂಡಿದೆ. ಈ ನಿಟ್ಟಿನಲ್ಲಿ ವಿಮಾ ಕಂಪೆನಿ ಸೇರಿದಂತೆ ಸಂಬಂಧಪಟ್ಟವರಿಗೆ ಸೂಕ್ತ ಸೂಚನೆ ನೀಡಲಾಗುವುದು ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ರಾಜ್ಯದಲ್ಲಿ ಒಳನಾಡ ಮೀನುಗಾರಿಕೆ ಅಭಿವೃದ್ಧಿಪಡಿಸಲು ಈಗಾಗಲೇ ಬೆಂಗಳೂರಿನಲ್ಲಿ ಸಭೆ ನಡೆಸಲಾಗಿದೆ. ಮುಂದಿನ 10 ವರ್ಷದಲ್ಲಿ ಮೀನುಮರಿ ಉತ್ಪಾದನೆ ಸಹಿತ ಈ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿಗೆ ಕಾರ್ಯಯೋಜನೆ ರೂಪಿಸಲಾಗುವುದು ಎಂದು ಸಚಿವರು ಹೇಳಿದರು.
ರಾಜ್ಯದಲ್ಲಿ ಜೂ.1ರಿಂದ ದೇವಸ್ಥಾನ, ಮಸೀದಿ, ಚರ್ಚ್ ಮತ್ತಿತರ ಧಾರ್ಮಿಕ ಸ್ಥಳಗಳನ್ನು ತೆರೆಯುವ ಬಗ್ಗೆ ಮುಖ್ಯಮಂತ್ರಿ ಘೋಷಿಸಿದ್ದಾರೆ. ಈ ಬಗ್ಗೆ ಕೇಂದ್ರ ಸರಕಾರದ ಅನುಮೋದನೆ ನಿರೀಕ್ಷೆಯಲ್ಲಿದ್ದೇವೆ ಎಂದು ಸಚಿವ ಕೋಟ ತಿಳಿಸಿದರು.

ಈ ಸಂದರ್ಭ ಜಿಪಂ ಸ್ಥಾಯಿ ಸಮಿತಿಯ ಅಧ್ಯಕ್ಷ ರವೀಂದ್ರ ಕಂಬಳಿ, ಜಿಪಂ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News