ಕೊರೋನದಿಂದಾಗಿ ಜಗತ್ತಿಗೆ 8.5 ಟ್ರಿಲಿಯ ಡಾಲರ್ ನಷ್ಟ: ಆಂಟೋನಿಯೊ ಗುಟೆರಸ್ ಎಚ್ಚರಿಕೆ

Update: 2020-05-29 18:04 GMT

ವಿಶ್ವಸಂಸ್ಥೆ, ಮೇ 29: ನೂತನ-ಕೊರೋನ ವೈರಸ್ ಸಾಂಕ್ರಾಮಿಕವು ಊಹಿಸಲಾಗದಷ್ಟು ವಿನಾಶವನ್ನು ಸೃಷ್ಟಿಸುತ್ತದೆ ಹಾಗೂ ಐತಿಹಾಸಿಕ ಪ್ರಮಾಣದಲ್ಲಿ ಹಸಿವೆ ಮತ್ತು ಬರ ಪರಿಸ್ಥಿತಿಯನ್ನು ಉಂಟು ಮಾಡುತ್ತದೆ ಎಂದು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಹೇಳಿದ್ದಾರೆ ಹಾಗೂ ಈ ಮಹಾ ಸಾಂಕ್ರಾಮಿಕದ ವಿರುದ್ಧ ದೇಶಗಳು ಒಟ್ಟಾಗಿ ಒಗ್ಗಟ್ಟಿನಿಂದ ಹೋರಾಡದಿದ್ದರೆ ಜಗತ್ತು 8.5 ಟ್ರಿಲಿಯ ಡಾಲರ್ (ಸುಮಾರು 640 ಲಕ್ಷ ಕೋಟಿ ರೂಪಾಯಿ) ನಷ್ಟವನ್ನು ಅನುಭವಿಸಲಿದೆ ಎಂದು ಎಚ್ಚರಿಸಿದ್ದಾರೆ. ಈ ಪರಿಸ್ಥಿತಿಯನ್ನು ನಾವು ನಿವಾರಿಸಿಕೊಳ್ಳಬೇಕು.

ಇತ್ತೀಚಿನ ದಶಕಗಳ ಅಗಾಧ ತಾಂತ್ರಿಕ ಮತ್ತು ವೈಜ್ಞಾನಿಕ ಪ್ರಗತಿಗಳ ಹೊರತಾಗಿಯೂ, ಕಣ್ಣಿಗೆ ಕಾಣದ ವೈರಸ್‌ನಿಂದಾಗಿ ನಾವು ಈಗ ಅಭೂತಪೂರ್ವ ಮಾನವೀಯ ಬಿಕ್ಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡಿದ್ದೇವೆ ಎಂದು ಅವರು ಗುರುವಾರ ಉನ್ನತ ಮಟ್ಟದ ಸಭೆಯೊಂದನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು.

ಈ ಅಭೂತಪೂರ್ವ ಬಿಕ್ಕಟ್ಟಿಗೆ ಜಗತ್ತು ಏಕತೆ ಮತ್ತು ಒಗ್ಗಟ್ಟಿನಿಂದ ಪ್ರತಿಕ್ರಿಯಿಸಬೇಕಾದ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.

ನಾವು ಈಗ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಕೋವಿಡ್-19 ಸಾಂಕ್ರಾಮಿಕವು ಜಗತ್ತಿನಾದ್ಯಂತ ಊಹಿಸಲಾಗದಷ್ಟು ಪ್ರಮಾಣದಲ್ಲಿ ವಿನಾಶ ಮತ್ತು ಸಂಕಷ್ಟವನ್ನು ಸೃಷ್ಟಿಸುತ್ತದೆ. ಐತಿಹಾಸಿಕ ಪ್ರಮಾಣದಲ್ಲಿ ಹಸಿವು ಮತ್ತು ಬರ ಜಗತ್ತನ್ನು ವ್ಯಾಪಿಸುತ್ತದೆ. ಹೆಚ್ಚುವರಿಯಾಗಿ 6 ಕೋಟಿ ಜನರು ಬಡತನದ ಅಂಚಿಗೆ ತಲುಪುತ್ತಾರೆ. ಜಗತ್ತಿನ ಸುಮಾರು ಅರ್ಧದಷ್ಟು ಕೆಲಸಗಾರರಿಗೆ, ಅಂದರೆ ಸುಮಾರು 160 ಕೋಟಿ ಜನರು ಜೀವನೋಪಾಯದಿಂದ ವಂಚಿತರಾಗುತ್ತಾರೆ ಎಂದು ಆಂಟೋನಿಯೊ ಗುಟೆರಸ್ ಹೇಳಿದರು.

ಸಾಂಕ್ರಾಮಿಕದಿಂದಾಗಿ ಜಗತ್ತು 8.5 ಟ್ರಿಲಿಯ ಡಾಲರ್ ನಷ್ಟಕ್ಕೆ ಗುರಿಯಾಗುತ್ತದೆ ಎಂದು ಅವರು ಎಚ್ಚರಿಸಿದರು. ಇದು 1930ರ ಮಹಾ ಆರ್ಥಿಕ ಕುಸಿತದ ಂತರದ ಬೃಹತ್ ಆರ್ಥಿಕಾಘಾತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News