​ಅಮೆರಿಕದಲ್ಲಿ ವ್ಯಾಪಕವಾದ ನಾಗರಿಕ ಅಶಾಂತಿ

Update: 2020-05-30 03:55 GMT

ವಾಷಿಂಗ್ಟನ್, ಮೇ 30: ಈಗಾಗಲೇ ಕೊರೋನ ವೈರಸ್ ಸಾಂಕ್ರಾಮಿಕದಿಂದ ಕಂಗೆಟ್ಟಿರುವ ಅಮೆರಿಕಕ್ಕೆ ಇದೀಗ ಮತ್ತೊಂದು ಆಘಾತ ಎದುರಾಗಿದೆ. ಬಿಳಿಯ ಪೊಲೀಸ್ ಅಧಿಕಾರಿಯೊಬ್ಬರು ಕರಿಯ ವ್ಯಕ್ತಿಯನ್ನು ಹಾಡಹಗಲೇ ಹತ್ಯೆ ಮಾಡಿದ್ದಾರೆ ಎಂದು ಆಪಾದಿಸಿ ಮಿನ್ನೆಯಾಪೊಲೀಸ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ದೇಶಾದ್ಯಂತ ನಾಗರಿಕ ಅರಾಜಕತೆ ಸ್ಫೋಟಕ್ಕೆ ಕಾರಣವಾಗಿದೆ. ಪ್ರತಿಭಟನೆ ದೇಶದ ಇತರ ಭಾಗಗಳಿಗೂ ಹಬ್ಬಿದೆ.

ಇದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಗಮನ ಸೆಳೆದಿದ್ದು, ಡೆಮಾಕ್ರಟಿಕ್ ಪ್ರಾಯೋಜಿತ ಈ ಅರಾಜಕತೆಯನ್ನು ನಿಯಂತ್ರಿಸಲು ಸೇನೆಯನ್ನು ನಿಯೋಜಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ವೆನ್ ಲೂಟಿಂಗ್ ಸ್ಟಾರ್ಟ್ಸ್, ದ ಶೂಟಿಂಗ್ ಸ್ಟಾರ್ಟ್ಸ್ ಎಂದು ಟ್ವಿಟ್ಟರ್‌ನಲ್ಲಿ ಟ್ರಂಪ್ ಗುಡುಗಿದ್ದಾರೆ.

ಇದನ್ನು ಹಿಂಸೆಯ ವೈಭವೀಕರಣ ಎಂದು ಟ್ವಿಟರ್ ವರ್ಗೀಕರಿಸಿದ್ದು, ಇದು ಟ್ರಂಪ್ ಹಾಗೂ ಸಾಮಾಜಿಕ ಜಾಲತಾಣ ದಿಗ್ಗಜರ ನಡುವಿನ ಸಂಘರ್ಷ ಮತ್ತಷ್ಟು ಹೆಚ್ಚಲು ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳು ಕಾನೂನು ಕ್ರಮದಿಂದ ರಕ್ಷಣೆ ಪಡೆಯುವುದನ್ನು ದುರ್ಬಲಗೊಳಿಸುವ ಆಡಳಿತಾತ್ಮಕ ಆದೇಶ ಹೊರಡಿಸಲು ಟ್ರಂಪ್ ಮುಂದಾಗಿದ್ದಾರೆ.

ನ್ಯೂಯಾರ್ಕ್, ಲಾಸ್‌ ಏಂಜಲೀಸ್, ಮಿಯಾಮಿ, ದೆನ್ವೆರ್ ಮತ್ತು ಇತರ ನಗರಗಳಿಗೆ ಪ್ರತಿಭಟನೆ ಹಬ್ಬಿದ್ದು, ಹಾಡಹಗಲೇ ನಡೆದ ಈ ಹತ್ಯೆಯ ವಿರುದ್ಧ ನಾಗರಿಕ ಹಕ್ಕುಗಳ ಕಾರ್ಯಕರ್ತರು ಖಂಡಿಸಿದ್ದಾರೆ. ನಂತರ ಮಿನ್ನಾವೊಪೊಲೀಸ್‌ನಲ್ಲಿ ನಡೆದ ಘಟನಾವಳಿಗಳು ದೇಶದಲ್ಲಿ ಜನಾಂಗೀಯ ವಿಭಜನೆಯ ಸಂಕೇತ ನೀಡಿವೆ. 46 ವರ್ಷ ವಯಸ್ಸಿನ ಜಾರ್ಜ್ ಲಾಯ್ಡಿ ಎಂಬುವವರ ಕುತ್ತಿಗೆಯ ಮೇಲೆ ಬಿಳಿಯ ಪೊಲೀಸ್ ಅಧಿಕಾರಿ ಡೆರಿಕ್ ಚೌವಿನ್ ಮೊಣಕಾಲೂರಿ ಒತ್ತುತ್ತಿರುವುದು, ಆಗ ವ್ಯಕ್ತಿ ಉಸಿರಾಡಲು ಸಾಧ್ಯವಾಗುತ್ತಿಲ್ಲ ಎಂದು ಅಂಗಲಾಚುತ್ತಿರುವ ದೃಶ್ಯ ಕಪ್ಪುಜನರನ್ನು ಕೆರಳಿಸಿದೆ. ಪೊಲೀಸ್ ಅಧಿಕಾರಿಯನ್ನು ವಜಾ ಮಾಡಿದ್ದರೂ, ಜನಾಕ್ರೋಶ ಮಾತ್ರ ತಣಿದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News