ಉಡುಪಿ: ಕೊರೋನಮುಕ್ತರಾದ 18 ಮಕ್ಕಳು ಸಹಿತ 45 ಮಂದಿ ಆಸ್ಪತ್ರೆಯಿಂದ ಬಿಡುಗಡೆ

Update: 2020-05-30 08:30 GMT

ಉಡುಪಿ, ಮೇ 30: ಕೊರೋನ ಸೋಂಕಿನೊಂದಿಗೆ ಉಡುಪಿಯ ಟಿ.ಎಂ. ಎ.ಪೈ ಕೋವಿಡ್-19 ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ 18 ಮಕ್ಕಳು ಸಹಿತ ಒಟ್ಟು 45 ಮಂದಿ ಸಂಪೂರ್ಣ ಗುಣಮುಖರಾಗಿ ಶನಿವಾರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಈ ಹಿನ್ನೆಲೆಯಲ್ಲಿ ಕೊರೋನ ಗೆದ್ದ ಒಂದು ವರ್ಷದ ಮಗು ಸಹಿತ ಒಟ್ಟು 18 ಮಕ್ಕಳಿಗೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ವಿಶೇಷ ಉಡುಗೊರೆ ಹಾಗೂ ಚಾಕಲೇಟ್ ವಿತರಿಸಿ, ಬೀಳ್ಕೊಟ್ಟರು. ಇಂದು ಬಿಡುಗಡೆ ಹೊಂದಿದವರಲ್ಲಿ ಬಹುತೇಕ ಮಹಾರಾಷ್ಟ್ರ ಹಾಗೂ ದುಬೈಯಿಂದ ಆಗಮಿಸಿದವರು ಇದ್ದಾರೆ.

ಬಳಿಕ ಮಾತನಾಡಿದ ಜಿಲ್ಲಾಧಿಕಾರಿ, ಕೊರೋನ ಯುದ್ಧ ಗೆದ್ದ ಮಕ್ಕಳಿಗೆ ಶುಭ ಕೋರುವ ಉದ್ದೇಶದಿಂದ ಈ ರೀತಿ ಬೀಳ್ಕೋಡಲಾಯಿತು. ಕುಂದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಹುತೇಕ ಮಂದಿ ಗುಣಮುಖರಾಗಿದ್ದು, ಮೇ 31ರಂದು ಬಿಡುಗಡೆಯಾಗಲಿದ್ದಾರೆ. ಆದುದರಿಂದ ಸಾರ್ವಜನಿಕರು ಆತಂಕ ಪಡಬೇಕಾದ ಅಗತ್ಯ ಇಲ್ಲ ಎಂದು ಹೇಳಿದರು.

ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು 164 ಕೊರೋನ ಸೋಂಕಿತರ ಪೈಕಿ 50 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದಂತಾಗಿದೆ.

ಈ ಸಂದರ್ಭದಲ್ಲಿ ಡಿಎಚ್‌ಓ ಡಾ.ಸುಧೀರ್‌ಚಂದ್ರ ಸೂಡಾ, ಕೋವಿಡ್ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್, ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್, ಮಣಿಪಾಲ ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಕೋವಿಡ್ ಆಸ್ಪತ್ರೆಯ ನೋಡೆಲ್ ಅಧಿಕಾರಿ ಡಾ.ಶಶಿ ಕಿರಣ್ ಮೊದಲಾದವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News