ಖಾಸಗಿ ಬಸ್ಸು ಚಾಲಕ, ನಿರ್ವಾಹಕರಿಗೆ ಆರೋಗ್ಯದ ಸುರಕ್ಷತೆ ಕಲ್ಪಿಸಿ: ಜೆ.ಆರ್.ಲೋಬೊ ಆಗ್ರಹ

Update: 2020-05-30 09:13 GMT

ಮಂಗಳೂರು, ಮೇ 30: ದ.ಕ. ಜಿಲ್ಲೆಯಲ್ಲಿ ಜೂನ್ 1ರಿಂದ ಖಾಸಗಿ ಬಸ್ಸುಗಳ ಓಡಾಟ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಬಸ್ಸುಗಳ ಸಂಚಾರ ಸಾಮಾನ್ಯ ಜನರಿಗೆ ಅತೀ ಅಗತ್ಯವಾಗಿರುತ್ತದೆ. ಆದರೆ ಬಸ್ಸುಗಳನ್ನು ಆರಂಭಿಸುವ ಸಂದರ್ಭದಲ್ಲಿ ಕೆಲವು ಜಾಗರೂಕತೆಯನ್ನು ಜನರು ಹಾಗೂ ಜಿಲ್ಲಾಡಳಿತ ವಹಿಸಬೇಕು. ಮುಖ್ಯವಾಗಿ ಬಸ್ಸುಗಳ ಚಾಲಕರು ಹಾಗೂ ನಿರ್ವಾಹಕರ ಆರೋಗ್ಯದ ಬಗ್ಗೆ ಜಿಲ್ಲಾಡಳಿತ ಮತ್ತು ಮಾಲಕರು ಕಾಳಜಿ ವಹಿಸಬೇಕು ಎಂದು ಮಾಜಿ ಶಾಸಕ ಜೆ.ಆರ್.ಲೋಬೊ ಒತ್ತಾಯಿಸಿದ್ದಾರೆ.

ಬಸ್ಸುಗಳಲ್ಲಿ ಪ್ರಯಾಣಿಸುವವರ ಬಗ್ಗೆಯೂ ಕೂಡಾ ಜಾಗ್ರತೆ ವಹಿಸಬೇಕು. ಬಸ್ಸುಗಳಲ್ಲಿ ಪ್ರಯಾಣಿಸುವವರ ಆರೋಗ್ಯದ ಬಗ್ಗೆ ಯಾವುದೇ ಮಾಹಿತಿಗಳು ಬಸ್ಸಿನ ನಿರ್ವಾಹಕರಿಗೆ ಇಲ್ಲದಿರುವುದರಿಂದ, ನಿರ್ವಾಹಕರು ಬಹಳ ಎಚ್ಚರದಿಂದ ಕಾರ್ಯ ನಿರ್ವಹಿಸಬೇಕು. ಮುಖ್ಯವಾಗಿ ಮಾಲಕರು ಬಸ್ಸಿನ ಚಾಲಕ ಹಾಗೂ ನಿರ್ವಾಹಕರ ಬಗ್ಗೆ ತೀರ್ವ ಕಾಳಜಿ ವಹಿಸಬೇಕು. ಅವರಿಗೆ ಬೇಕಾದ ಆರೋಗ್ಯ ಸುರಕ್ಷತಾ ಕಿಟ್ , ಆರೋಗ್ಯ ವಿಮಾ ಸೌಲಭ್ಯ ಒದಗಿಸಬೇಕು ಎಂದವರು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

 ಬಸ್ಸುಗಳ ಚಾಲಕರು, ನಿರ್ವಾಹಕರು ಬಡಪಾಯಿಗಳಾಗಿದ್ದು, ಅವರು ಕೋವಿಡ್ ಲಾಕ್ ಡೌನ್ ನಿಂದಾಗಿ ಆರ್ಥಿಕತೆಯ ತೀರ್ವ ತೊಂದರೆಯಲ್ಲಿದ್ದಾರೆ. ಈಗಾಗಲೇ ಸಾಲಬಾಧೆಗಳಿಂದ ತತ್ತರಿಸಿ ಹೋಗಿ, ತಮ್ಮ ಜೀವನವನ್ನು ಸಾಗಿಸಲು ಹರಸಾಹಸ ಪಡುತ್ತಿದ್ದಾರೆ. ಆದ್ದರಿಂದ ಇಂತಹ ಸಂಕಷ್ಟದ ಸಮಯದಲ್ಲಿ ಸರಕಾರ ಹಾಗೂ ಜಿಲ್ಲಾಡಳಿತ ಈ ಬಗ್ಗೆ ವಿಶೇಷವಾಗಿ ಒತ್ತು ನೀಡಿ, ಬಸ್ಸು ಚಾಲಕ, ನಿರ್ವಾಹಕರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಅವರಿಗೆ ಬೇಕಾಗುವ ಅಗತ್ಯತೆಗಳನ್ನು ಒದಗಿಸಿ, ಬಸ್ಸುಗಳ ಸಂಚಾರವನ್ನು ಸುಗಮ ರೀತಿಯಲ್ಲಿ ಸಂಚರಿಸುವಂತೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಮಾಜಿ ಶಾಸಕ ಜೆ.ಆರ್.ಲೋಬೊ ಸರಕಾರವನ್ನು ಮತ್ತು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News