ಆನ್‌ಲೈನ್‌ನಲ್ಲಿ ಬೈಕ್ ಮಾರಲು ಹೋಗಿ 12 ಸಾವಿರ ರೂ. ಕಳೆದುಕೊಂಡ ಉಪ್ಪಿನಂಗಡಿಯ ಯುವಕ!

Update: 2020-05-30 09:29 GMT

ಉಪ್ಪಿನಂಗಡಿ, ಮೇ 30: ಆನ್‌ಲೈನ್ ವೆಬ್‌ಸೈಟ್ ಮೂಲಕ ಬೈಕ್ ಮಾರಲು ಮುಂದಾದ ಎಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಅಲ್ಲಿ ದೊರೆತ ಗ್ರಾಹಕನ ಮಾತಿನ ಮೋಡಿಗೆ ಸಿಲುಕಿ ತನ್ನ ಉಳಿತಾಯ ಖಾತೆಯಲ್ಲಿದ್ದ 12 ಸಾವಿರ ರೂ.ನ್ನು ಕಳೆದುಕೊಂಡ ಘಟನೆ ಬಜತ್ತೂರು ಗ್ರಾಮದಲ್ಲಿ ನಡೆದಿದೆ.

ಬಜತ್ತೂರು ನಿವಾಸಿ, ಅಂತಿಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಯುವಕ ತನ್ನ ಬೈಕನ್ನು ಮಾರಾಟ ಮಾಡಲು ಉದ್ದೇಶಿಸಿ ಓಎಲ್‌ಒಕ್ಸ್‌ನಲ್ಲಿ ಬೈಕ್‌ನ ವಿವರವನ್ನು ಅಪ್ಲೋಡ್ ಮಾಡಿದ್ದ. ಆ ಬಳಿಕ 8876992541 ನಂಬ್ರದ ಪೋನ್‌ನಿಂದ ಈತನಿಗೆ ವ್ಯಕ್ತಿಯೋರ್ವ ಕರೆ ಮಾಡಿ ತಾನು ಬೈಕ್ ಖರೀದಿಸಲಿಚ್ಛಿಸಿದ್ದು, ಹಣ ಹೇಗೆ ಕಳುಹಿಸಲಿ ಎಂದು ವಿಚಾರಿಸಿದ್ದಾನೆ. ಈ ವೇಳೆ ಫೋನ್ ಪೇ ಮುಖೇನ ಹಣ ಕಳುಹಿಸಿ ಎಂದು ವಿದ್ಯಾರ್ಥಿ ತಿಳಿಸಿದ್ದಾನೆ. ಬಳಿಕ ವಿದ್ಯಾರ್ಥಿಯ ವಾಟ್ಸ್ ಆ್ಯಪ್ ಗೆ ಗ್ರಾಹಕ ಕ್ಯೂ ಆರ್ ಕೋಡ್ ವೊಂದನ್ನು ಕಳುಹಿಸಿ ಅದನ್ನು ನಿಮ್ಮ ಫೋನ್ ಪೇಯಿಂದ ಸ್ಕ್ಯಾನ್ ಮಾಡಿದರೆ ನನ್ನ ಖಾತೆಯಿಂದ ನಿಮ್ಮ ಖಾತೆಗೆ ಹಣ ವರ್ಗಾವಣೆಯಾಗುತ್ತದೆ. ನಾಳೆ ಮುಂಜಾನೆ ನಾನು ಬಂದು ಬೈಕ್ ಪಡೆದುಕೊಂಡು ಹೋಗುವೆ ಎಂದು ತಿಳಿಸಿದ್ದಾನೆ.

ಈ ವೇಳೆ ಗ್ರಾಹಕ ತನ್ನ ಫೋನ್ ಪೇ ಕ್ಯೂ ಆರ್ ಕೋಡನ್ನು ಸ್ಕ್ಯಾನ್ ಮಾಡಬೇಕಾಗಿರುವಲ್ಲಿ ತಾನೇ ಗ್ರಾಹಕನ ಕ್ಯೂಆರ್ ಕೋಡನ್ನು ಸ್ಕ್ಯಾನ್ ಮಾಡಿದರೆ ತನ್ನ ಖಾತೆಯಿಂದಲೇ ಆತನ ಖಾತೆಗೆ ಜಮೆ ಆಗುವ ಬಗ್ಗೆ ವಿದ್ಯಾರ್ಥಿಗೆ ಸಂಶಯ ಬಂದಿದೆ. ಈ ಬಗ್ಗೆ ಗ್ರಾಹಕನ ಸೋಗಿನಲ್ಲಿ ಕರೆ ಮಾಡಿದ್ದ ವ್ಯಕ್ತಿಯಲ್ಲಿ ಪ್ರಶ್ನಿಸಿದ್ದನ್ನಾದರೂ, ಆತನ ಮಾತಿನ ಮೋಡಿಗೆ ಸಿಲುಕಿದ ವಿದ್ಯಾರ್ಥಿಯು ವಂಚಕ ಕಳುಹಿಸಿದ ಕ್ಯೂಆರ್ ಕೋಡನ್ನು ಸ್ಕ್ಯಾನ್ ಮಾಡಿದ್ದಾನೆ. ಕೂಡಲೇ ವಿದ್ಯಾರ್ಥಿಯ ಉಳಿತಾಯ ಖಾತೆಯಿಂದ 12 ಸಾವಿರ ರೂ. ಲಪಟಾಯಿಸಲ್ಪಟ್ಟಿದೆ.

ಈ ವಂಚನೆಯ ಬಗ್ಗೆ ವಿದ್ಯಾರ್ಥಿಯು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾನೆ.

ಒಟಿಪಿ ಪಡೆದು ವಂಚಿಸುವ ವಂಚನಾ ಜಾಲದ ಬಗ್ಗೆ ಜನತೆ ಜಾಗೃತರಾಗುತ್ತಿದ್ದಂತೆಯೇ ಫೋನ್ ಪೇ ವ್ಯವಸ್ಥೆಯ ಬಗ್ಗೆ ಪೂರ್ಣ ಅರಿವನ್ನು ಹೊಂದಿರದ ಮಂದಿಯನ್ನು ಮಾತಿನ ಮೋಡಿಯಲ್ಲಿ ವಂಚಿಸುವ ಜಾಲಗಳೂ ಇದೀಗ ಕಾರ್ಯೋನ್ಮುಖಗೊಂಡಿವೆ. ನಾಗರಿಕರು ಈ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News