ಜೂ.1ರಿಂದ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಖಾಸಗಿ ಬಸ್ ಸಂಚಾರ ಆರಂಭ: ಕೆನರಾ ಬಸ್ ಮಾಲಕರ ಸಂಘ

Update: 2020-05-30 11:19 GMT

ಉಡುಪಿ : ಕೋವಿಡ್- 19 ಲಾಕ್‌ಡೌನ್‌ನಿಂದಾಗಿ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಖಾಸಗಿ ಬಸ್ ಸಂಚಾರವು ಜೂ.1ರಿಂದ ಪುನಾರಂಭಗೊಳ್ಳಲಿದೆ ಎಂದು ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ತಿಳಿಸಿದ್ದಾರೆ.

ಉಡುಪಿಯ ಲಿಗಾಡೋ ಹೊಟೇಲಿನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯವನ್ನು ಪ್ರಕಟಿಸಿದರು. ಎರಡು ಜಿಲ್ಲೆಗಳಲ್ಲಿರುವ ಸುಮಾರು 2000 ಸರ್ವಿಸ್ ಬಸ್‌ಗಳ ಪೈಕಿ ಆರಂಭದಲ್ಲಿ ಶೇ. 25ರಷ್ಟು ಬಸ್‌ಗಳು ರಸ್ತೆಗೆ ಇಳಿಯಲಿದ್ದು, ಮುಂದಿನ ವಾರದೊಳಗೆ ಬಹುತೇಕ ಬಸ್‌ಗಳು ಓಡಾಟ ಆರಂಭಿಸಲಿವೆ ಎಂದರು.

ದ.ಕ. ಜಿಲ್ಲೆಯಲ್ಲಿನ ಒಟ್ಟು 320 ಸಿಟಿಬಸ್‌ಗಳ ಪೈಕಿ 135 ಬಸ್‌ಗಳು ಮತ್ತು ಉಡುಪಿ ನಗರದ 85 ಸಿಟಿಬಸ್‌ಗಳ ಪೈಕಿನ 22 ಬಸ್‌ಗಳು ಸಂಚಾರ ಆರಂಭಿಸಲಿವೆ. ಪ್ರತಿ 15-20ನಿಮಿಷಗಳಿಗೊಮ್ಮೆ ಬಸ್ ಸಂಚಾರ ಇರಲಿದೆ. ಸದ್ಯ ಸರಕಾರದ ಆದೇಶದಂತೆ ಬೆಳಗ್ಗೆ 7ಗಂಟೆಯಿಂದ ಸಂಜೆ 7ಗಂಟೆಯವರೆಗೆ ಬಸ್ ಸಂಚಾರ ಇರಲಿದೆ. ಮುಂದಿನ ಲಾಕ್‌ಡೌನ್‌ನಲ್ಲಿ ರಾತ್ರಿ ಸಮಯ ಈ ಎಲ್ಲ ಬಸ್‌ಗಳಲ್ಲಿ ಸರಕಾರ ಸೂಚಿಸಿರುವ ಎಲ್ಲ ಷರತ್ತು ಗಳನ್ನು ಪಾಲಿಸಲಾಗುವುದು ಎಂದು ಅವರು ಹೇಳಿದರು.

ಶೇ.15ರಷ್ಟು ಬಸ್ ‌ದರ ಹೆಚ್ಚಳ

ಸರಕಾರದ ಜೊತೆ ನಡೆಸಿದ ಮಾತುಕತೆಯಂತೆ ಶೇ.15ರಷ್ಟು ಬಸ್ ‌ದರದಲ್ಲಿ ಹೆಚ್ಚಳ ಮಾಡಲಾಗಿದೆ. ಅದರಂತೆ ಮಣಿಪಾಲ-ಉಡುಪಿ-ಮಂಗಳೂರಿಗೆ 85 ರೂ.(ಹಿಂದಿನ ದರ 68ರೂ.), ಉಡುಪಿ- ಮಂಗಳೂರು 80 ರೂ.(67ರೂ.), ಕಾರ್ಕಳ- ಪಡುಬಿದ್ರೆ-ಮಂಗಳೂರು 65 ರೂ.(55 ರೂ.), ಕುಂದಾಪುರ- ಉಡುಪಿ-ಮಂಗಳೂರು 120ರೂ.(100 ರೂ.), ಕುಂದಾಪುರ- ಉಡುಪಿ 55ರೂ.(45), ಕಾರ್ಕಳ- ಮೂಡಬಿದ್ರೆ- ಮಂಗಳೂರು 62 ರೂ.(52 ರೂ.), ಉಡುಪಿ-ಹಿರಿಯಡ್ಕ-ಕಾರ್ಕಳ 45 ರೂ.(40 ರೂ.) ನಿಗದಿ ಪಡಿಸಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ನಾಯಕ್ ಕುಯಿಲಾಡಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಸದಾನಂದ ಛಾತ್ರ, ದ.ಕ. ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News