ಉಡುಪಿ: ಕೊರೋನ ಮುಕ್ತರಾದ ನಾಲ್ವರು ಪೊಲೀಸರಿಗೆ ಐಜಿಪಿಯಿಂದ ಅಭಿನಂದನೆ

Update: 2020-05-30 11:58 GMT

ಉಡುಪಿ, ಮೇ 30: ಮಂಗಳೂರು ಪಶ್ಚಿಮ ವಲಯ ವ್ಯಾಪ್ತಿಯಲ್ಲಿರುವ ಎಲ್ಲ ಪೊಲೀಸರನ್ನು ಕೊರೋನ ಪರೀಕ್ಷೆಗೆ ಒಳಪಡಿಸುವುದರ ಜೊತೆಗೆ ಎಲ್ಲ ಪೊಲೀಸ್ ಠಾಣೆಗಳನ್ನು ಹಂತಹಂತವಾಗಿ ಸ್ಯಾನಿಟೈಸ್ ಮಾಡಲಾಗುವುದು ಎಂದು ಮಂಗಳೂರು ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರಾಯ್ ತಿಳಿಸಿದ್ದಾರೆ.

ಉಡುಪಿಯ ಟಿ.ಎಂ.ಎ.ಪೈ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೊರೋನ ಮುಕ್ತರಾಗಿ ಇಂದು ಬಿಡುಗಡೆ ಹೊಂದುತ್ತಿರುವ ಜಿಲ್ಲೆಯ ಎಎಸ್ಸೈ ಸಹಿತ ನಾಲ್ವರು ಪೊಲೀಸರಿಗೆ ಹೂಗುಚ್ಛ ನೀಡಿ, ಶುಭ ಕೋರಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡುತಿದ್ದರು.

ಪೊಲೀಸರು ಸಾರ್ವಜನಿಕ ಸಂಪರ್ಕದಲ್ಲಿ ಕೆಲಸ ಮಾಡುವುದರಿಂದ ಹೆಚ್ಚಿನ ಅಪಾಯ ಇರುತ್ತದೆ. ಇದರಿಂದಾಗಿ ನಮ್ಮ ನಾಲ್ಕು ಮಂದಿ ಪೊಲೀಸರಿಗೆ ಕೊರೋನ ಪಾಸಿಟಿವ್ ಬಂದಿದೆ. ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದ್ದು, ಇದೀಗ ಅವರ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದೆ. ಇಲ್ಲಿಂದ ಬಿಡುಗಡೆ ಯಾದ ಬಳಿಕ ಇವರು ಮತ್ತೆ 14 ದಿನಗಳ ಕಾಲ ಹೋಮ್ ಕ್ವಾರಂಟೇನ್‌ಗೆ ಒಳಗಾಗಲಿದ್ದಾರೆ ಎಂದರು.

ಈ ನಾಲ್ವರು ಪೊಲೀಸರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಜಿಲ್ಲೆಯ ಒಟ್ಟು 113 ಪೊಲೀಸರು ಇದೀಗ ಕ್ವಾರಂಟೈನ್‌ನಲ್ಲಿದ್ದಾರೆ. ಇವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಯನ್ನು ಕಳುಹಿಸಲಾಗಿದ್ದು, ಇನ್ನು ವರದಿ ಬಂದಿಲ್ಲ. ಈ ನಾಲ್ವರು ಸೋಂಕಿತರಿಗೆ ಯಾರ ಸಂಪರ್ಕ ದಿಂದ ಕೊರೋನ ಬಂದಿದೆ ಎಂಬುದು ಹೇಳಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ದನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಡಿವೈಎಸ್ಪಿ ಜೈಶಂಕರ್, ಕೋವಿಡ್ ಆಸ್ಪತ್ರೆಯ ನೊಡೇಲ್ ಅಧಿಕಾರಿ ಡಾ.ಶಶಿಕಿರಣ್ ಹಾಜರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News