ಉಡುಪಿ: ಹೊರರಾಜ್ಯದಿಂದ ಬಂದವರೇ 13 ಮಂದಿ ಕೊರೋನ ಪಾಸಿಟಿವ್

Update: 2020-05-30 14:46 GMT

ಉಡುಪಿ, ಮೇ 30: ಶನಿವಾರವೂ ಮಹಾರಾಷ್ಟ್ರ ರಾಜ್ಯದ ವಿವಿದೆಡೆಗಳಿಂದ ಉಡುಪಿ ಜಿಲ್ಲೆಗೆ ಆಗಮಿಸಿದ 12 ಮಂದಿ ಹಾಗೂ ತೆಲಂಗಾಣದಿಂದ ಬಂದ ಒಬ್ಬ ಬಾಲಕಿ ಕೊರೋನ ವೈರಸ್ ಸೋಂಕಿಗೆ ಪಾಸಿಟಿವ್ ಆಗಿದ್ದಾರೆ. ಇವರಲ್ಲಿ 9 ಮಂದಿ ಪುರುಷರು, ಇಬ್ಬರು ಮಹಿಳೆಯರು ಹಾಗೂ ಇಬ್ಬರು ಮಕ್ಕಳು ಸೇರಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಇದರಿಂದ ಜಿಲ್ಲೆಯಲ್ಲೀಗ ಒಟ್ಟು 177 ಮಂದಿಯಲ್ಲಿ ಕೊರೋನ ಸೋಂಕು ಪತ್ತೆಯಾದಂತಾಗಿದ್ದು, ಜಿಲ್ಲೆ ಈಗಲೂ ಐದನೇ ಸ್ಥಾನದಲ್ಲಿ ಮುಂದುವ ರಿದಿದೆ. ಇಂದಿನ ಒಳ್ಳೆಯ ಬೆಳವಣಿಗೆಯೊಂದರಲ್ಲಿ ಪಾಸಿಟಿವ್ ಬಂದು ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದ 45 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗಳಿಗೆ ತೆರಳಿದ್ದಾರೆ. ಇವರಲ್ಲಿ ನಾಲ್ವರು ಪೊಲೀಸ್ ಸಿಬ್ಬಂದಿಗಳು, 18 ಮಂದಿ ಮಕ್ಕಳೂ ಸೇರಿದ್ದಾರೆ.

ಈ ಮೂಲಕ ಚಿಕಿತ್ಸೆಯ ನಂತರ ಬಿಡುಗಡೆಗೊಂಡವರ ಸಂಖ್ಯೆ ಜಿಲ್ಲೆಯಲ್ಲಿ 50ಕ್ಕೇರಿದೆ. ಈಗ ಒಟ್ಟು 127 ಸಕ್ರಿಯ ಪ್ರಕರಣ ಜಿಲ್ಲೆಯಲ್ಲಿದ್ದು, ಇವರು ಕೋವಿಡ್ ಆಸ್ಪತ್ರೆಗಳಲ್ಲಿ ಸೋಂಕಿಗೆ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದರು.

ಶನಿವಾರ ಪಾಸಿಟಿವ್ ಬಂದ 13 ಮಂದಿಯಲ್ಲಿ 12 ಮಂದಿ ಮಹಾರಾಷ್ಟ್ರ ದಿಂದ ಊರಿಗೆ ಬಂದವರಾಗಿದ್ದಾರೆ. ಅಲ್ಲದೇ ತೆಲಂಗಾಣದಿಂದ ಹೆತ್ತವರೊಂದಿಗೆ ಬಂದ ಎರಡು ವರ್ಷದ ಬಾಲಕಿಯಲ್ಲೂ ಸೋಂಕು ಕಂಡುಬಂದಿದೆ. ಇವರೆಲ್ಲರನ್ನೂ ಈಗಾಗಲೇ ಚಿಕಿತ್ಸೆಗಾಗಿ ಕೋವಿಡ್ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಡಿಎಚ್‌ಓ ಹೇಳಿದರು.

ಇಂದು 44 ವರ್ಷ, 30, 41, 25, 40, 37, 47, 36 ಹಾಗೂ 40 ವರ್ಷದ ಪುರುಷರಲ್ಲಿ, 51 ಮತ್ತು 47 ವರ್ಷ ಪ್ರಾಯದ ಮಹಿಳೆಯರಲ್ಲಿ ಅಲ್ಲದೇ 15 ವರ್ಷದ ಬಾಲಕ ಮತ್ತು 2 ವರ್ಷ ಪ್ರಾಯದ ಬಾಲಕಿಯಲ್ಲಿ ಸೋಂಕು ಪತ್ತೆಯಾಗಿದೆ. ಇವರಲ್ಲಿ ಕುಂದಾಪುರ ತಾಲೂಕಿನ 4 , ಬ್ರಹ್ಮವರದ 2, ಬೈಂದೂರಿನ 6 ಹಾಗು  ಉಡುಪಿ ತಾಲೂಕಿನ 1 ಇದ್ದಾರೆ ಎಂದು ಡಾ.ಸೂಡ ತಿಳಿಸಿದರು.

118 ನೆಗೆಟಿವ್: ಕೋವಿಡ್ -19 ಸೋಂಕಿನ ಪರೀಕ್ಷೆಗಾಗಿ ಕಳುಹಿಸಿದ ಶಂಕಿತರ ಗಂಟಲು ದ್ರವದ ಮಾದರಿಗಳಲ್ಲಿ ಶನಿವಾರ 13 ಮಾದರಿಗಳು ಪಾಸಿಟಿವ್ ಫಲಿತಾಂಶವನ್ನು ನೀಡಿದ್ದರೆ, ಒಟ್ಟು 118 ವರದಿಗಳು ನೆಗೆಟಿವ್ ಆಗಿವೆ. ಇಂದಿನ ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಈವರೆಗೆ 177 ಪಾಸಿಟಿವ್ ಫಲಿತಾಂಶ ಬಂದಂತಾಗಿದೆ. ಇವುಗಳಲ್ಲಿ ಈಗ 127 ಸಕ್ರೀಯ ವಾಗಿದ್ದು, ಉಳಿದವರೆಲ್ಲ ಆಸ್ಪತ್ರೆಯಿಂದ ಬಿಡುಗಡೆ ಗೊಂಡಿದ್ದಾರೆ. ಜಿಲ್ಲೆಯಲ್ಲಿ ಒಬ್ಬರು ಮಾತ್ರ ಕೋವಿಡ್‌ಗೆ ಬಲಿಯಾಗಿದ್ದಾರೆ ಎಂದರು.

32 ಸ್ಯಾಂಪಲ್ ಮಾತ್ರ ಸಂಗ್ರಹ: ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಗಂಟಲು ದ್ರವದ ಮಾದರಿಗಳ ಸಂಖ್ಯೆ ಈಗ 11,001. ಇಂದು ಸಂಗ್ರಹಿಸಲಾದ ಮಾದರಿಗಳ ಸಂಖ್ಯೆ 32 ಮಾತ್ರ. ಇವುಗಳು ಎಲ್ಲವೂ ಕೊರೋನ ಹಾಟ್‌ಸ್ಪಾಟ್‌ಗಳಿಂದ ಬಂದವರದ್ದಾಗಿದೆ ಎಂದು ಡಾ.ಸೂಡ ತಿಳಿಸಿದರು. ಈವರೆಗೆ ಸಂಗ್ರಹಿಸಿದ 11,001 ಮಾದರಿಗಳಲ್ಲಿ 5081ರ ಪರೀಕ್ಷಾ ವರದಿ ಮಾತ್ರ ಬಂದಿವೆ. ಇವುಗಳಲ್ಲಿ 4904 ನೆಗೆಟಿವ್ ಆಗಿದ್ದರೆ, ಒಟ್ಟು 177 ಸ್ಯಾಂಪಲ್‌ಗಳು ಪಾಸಿಟಿವ್ ಆಗಿ ಬಂದಿವೆ. ಇನ್ನೂ 5920 ಸ್ಯಾಂಪಲ್‌ಗಳ ವರದಿ ಬರಬೇಕಾಗಿದೆ ಎಂದು ಅವರು ಹೇಳಿದರು.

ಶಂಕಿತ ನೋವೆಲ್ ಕೊರೋನ ಸೋಂಕಿನ ಪರೀಕ್ಷೆಗಾಗಿ ಇಂದು 7 ಮಂದಿ ಐಸೋಲೇಶನ್ ವಾರ್ಡಿಗೆ ದಾಖಲಾಗಿದ್ದಾರೆ. ಇವರಲ್ಲಿ ನಾಲ್ವರು ಪುರುಷರು ಹಾಗೂ ಮೂವರು ಮಹಿಳೆಯರು. ಒಬ್ಬರು ಕೊರೋನ ಶಂಕಿತರು, ನಾಲ್ವರು ತೀವ್ರತರದ ಉಸಿರಾಟ ತೊಂದರೆಯವರು ಹಾಗೂ ಇಬ್ಬರು ಶೀತಜ್ವರದ ಬಾಧೆಯ ಪರೀಕ್ಷೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿವಿಧ ಆಸ್ಪತ್ರೆಗಳ ಐಸೋಲೇಶನ್ ವಾರ್ಡಿನಿಂದ ಇಂದು 13ಮಂದಿ ಬಿಡುಗಡೆಗೊಂಡಿದ್ದು, 64 ಮಂದಿ ಇನ್ನೂ ವೈದ್ಯರ ನಿಗಾದಲ್ಲಿದ್ದಾರೆ.

ಜಿಲ್ಲೆಯಲ್ಲಿ ಕೊರೋನ ಸೋಂಕಿನ ಗುಣಲಕ್ಷಣದ 12 ಮಂದಿ ಇಂದು ನೊಂದಣಿಗೊಂಡಿದ್ದು, ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಒಟ್ಟು 4936 ಮಂದಿಯನ್ನು ಕೊರೋನ ತಪಾಸಣೆಗಾಗಿ ನೋಂದಣಿ ಮಾಡಿಕೊಂಡಂತಾಗಿದೆ. ಜಿಲ್ಲೆಯಲ್ಲಿ ಈಗಲೂ 55 ಮಂದಿ ಹೋಮ್ ಕ್ವಾರಂಟೈನ್‌ ನಲ್ಲೂ, 134 ಮಂದಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಹಾಗೂ 67 ಮಂದಿ ಆಸ್ಪತ್ರೆ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಡಾ.ಸುಧೀರ್ ‌ಚಂದ್ರ ಸೂಡ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News