ಉಡುಪಿ : ಉತ್ತರ ಪ್ರದೇಶದ 910 ಮಂದಿ ಕಾರ್ಮಿಕರು ಹುಟ್ಟೂರಿಗೆ

Update: 2020-05-30 14:49 GMT

ಉಡುಪಿ, ಮೇ 30: ಉಡುಪಿ, ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗಗಳಿಂದ ಒಟ್ಟು 910 ವಲಸೆ ಕಾರ್ಮಿಕರು ಇಂದು ಸಂಜೆ ಉಡುಪಿ ಇಂದ್ರಾಳಿಯ ಕೊಂಕಣ ರೈಲು ನಿಲ್ದಾಣದಿಂದ ಉತ್ತರ ಪ್ರದೇಶದ ಗೋರಖ್‌ಪುರಕ್ಕೆ ಹೊರಟ ಶ್ರಮಿಕ್ ವಿಶೇಷ ರೈಲಿನಲ್ಲಿ ಹುಟ್ಟೂರಿಗೆ ಪ್ರಯಾಣ ಬೆಳೆಸಿದರು.

ಉಡುಪಿ ಜಿಲ್ಲಾಡಳಿತ ವ್ಯವಸ್ಥೆಗೊಳಿಸಿದ ಈ ರೈಲು ಸಂಜೆ 5:00ಗಂಟೆಗೆ ಉಡುಪಿಯಿಂದ ಗೋರಖ್‌ಪುರದತ್ತ ಪ್ರಯಾಣ ಬೆಳೆಸಿತು. ಇದು ಸೋಮವಾರ ಜೂನ್ 1ರಂದು ಬೆಳಗ್ಗೆ 8:30ಕ್ಕೆ ಗೋರಖ್‌ಪುರ ತಲುಪುವ ನಿರೀಕ್ಷೆ ಇದೆ ಎಂದು ಕೊಂಕಣ ರೈಲ್ವೆಯ ಅಧಿಕಾರಿಗಳು ತಿಳಿಸಿದ್ದಾರೆ.

1600 ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದ್ದ ಈ ಶ್ರಮಿಕ್ ರೈಲು ಅರ್ಧದಷ್ಟು ಮಾತ್ರ ತುಂಬುವಂತಾಯಿತು. ಇದರಲ್ಲಿ ಶಿವಮೊಗ್ಗ ಜಿಲ್ಲೆಯಿಂದ ಬಂದ ಸುಮಾರು 300 ಮಂದಿ ವಲಸೆ ಕಾರ್ಮಿಕರಿದ್ದರೆ ಉಳಿದ ಸುಮಾರು 600 ಮಂದಿ ಉಡುಪಿ ಮತ್ತು ದಕ್ಷಿಣ ಕನ್ನಡಕ್ಕೆ ಸೇರಿದ ವರಾಗಿದ್ದರು ಎಂದು ಕೊಂಕಣ ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಾರಿ ಸುಧಾ ಕೃಷ್ಣಮೂರ್ತಿ ತಿಳಿಸಿದ್ದಾರೆ.

ಕೊರೋನ ನಿಯಂತ್ರಣಕ್ಕಾಗಿ ಮಾರ್ಚ್ ತಿಂಗಳಲ್ಲಿ ಕೇಂದ್ರ ಸರಕಾರ ದೇಶಾದ್ಯಂತ ಲಾಕ್‌ಡೌನ್ ಘೋಷಿಸಿದ ಬಳಿಕ ಮಾಡಲು ಕೆಲಸವಿಲದೇ, ಕೈಯಲ್ಲಿ ಕಾಸು ಇಲ್ಲದೇ ಇವರೆಲ್ಲ ಹುಟ್ಟೂರಿಗೆ ತೆರಳಲು ಕಾತರದಿಂದಿದ್ದು ಸತತ ಪ್ರಯತ್ನ ನಡೆಸಿದ್ದರು. ಜಿಲ್ಲಾಡಳಿತದ ವತಿಯಿಂದ ಈಗಾಗಲೇ ಕೆಲವು ಶ್ರಮಿಕ್ ರೈಲುಗಳು ಉತ್ತರ ಭಾರತದ ಹಲವು ರಾಜ್ಯಗಳಿಗೆ ಸಾವಿರಾರು ಮಂದಿ ವಲಸೆ ಕಾರ್ಮಿಕರನ್ನು ಕರೆದೊಯ್ದಿದೆ. ಇದೀಗ ಉತ್ತರ ಪ್ರದೇಶ ಮೂಲದ 900 ಮಂದಿ ಇಂದು ತಮ್ಮ ಹುಟ್ಟೂರಿಗೆ ತೆರಳುವ ಅವಕಾಶ ಪಡೆದರು.

ಉತ್ತರ ಪ್ರದೇಶ ಹಾಗೂ ಇತರ ರಾಜ್ಯಗಳಿಗೆ ತೆರಳುವವರಿಗಾಗಿ ನಗರದ ಕಡಿಯಾಳಿಯ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಪರಾಹ್ನದ ಊಟದ ವ್ಯವಸ್ಥೆ ಮಾಡಿತ್ತು. ರೈಲ್ವೆ ನಿಲ್ದಾಣದಲ್ಲಿ ಇವರು ಸುರಕ್ಷತಾ ಅಂತರವನ್ನು ಕಾಪಾಡಿ ಕೊಂಡಿದ್ದು ಗಮನ ಸೆಳೆಯಿತು. ಎಲ್ಲರೂ ಮಾಸ್ಕ್‌ಗಳನ್ನು ಧರಿಸಿದ್ದರಲ್ಲದೇ, ರೈಲು ನಿಲ್ದಾಣ ಪ್ರವೇಶಕ್ಕೆ ಮುನ್ನ ಆರೋಗ್ಯ ತಪಾಸಣೆಗೆ ಒಳಗಾದರು.

ಮಾಡಲು ಕೆಲಸವಿಲ್ಲದೇ, ಕೈಯಲ್ಲಿ ಕಾಸಿಲ್ಲದೇ, ಊಟ-ತಿಂಡಿಗೂ ಪರದಾಟ ನಡೆಸಬೇಕಾದ ಪರಿಸ್ಥಿತಿ ಬಂದಿತ್ತು. ಹೀಗಾಗಿ ಸದ್ಯಕ್ಕೆ ಊರಿಗೆ ತೆರಳುವುದೇ ನಮಗೆ ಉಳಿದಿದ್ದ ದಾರಿಯಾಗಿದೆ. ತಮ್ಮ ಹಳ್ಳಿಗಳ ಪರಿಸ್ಥಿತಿಯನ್ನು ನೋಡಿ ಕೊಂಡು ಇಲ್ಲಿಗೆ ಮರಳುವ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ ಎಂದು ಹಲವು ಯುವಕರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News