ಉಡುಪಿ ಜಿಪಂನಿಂದ 400.15 ಲಕ್ಷ ರೂ. ಕ್ರಿಯಾ ಯೋಜನೆ

Update: 2020-05-30 15:30 GMT

ಉಡುಪಿ, ಮೇ 30: ಉಡುಪಿ ಜಿಲ್ಲಾ ಪಂಚಾಯತ್‌ಗೆ 15ನೇ ಹಣಕಾಸು ಯೋಜನೆಯಡಿ ಹಂಚಿಕೆಯಾಗಿರುವ 400.15 ಲಕ್ಷ ರೂ ಅನುದಾನದ ವಿಂಗಡಣೆ, ಕ್ರಿಯಾಯೋಜನೆ ತಯಾರಿಗೆ ಅನುಮತಿ ನೀಡುವ ಕುರಿತಂತೆ ಜಿಪಂ ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ವಿಶೇಷ ಸಾಮಾನ್ಯ ಸಭೆ ಶನಿವಾರ ಮಣಿಪಾಲ ಜಿಪಂ ಸಭಾಂಗಣದಲ್ಲಿ ನಡೆಯಿತು.

ಮಾರ್ಗಸೂಚಿಯಂತೆ ಉಡುಪಿ ಜಿಪಂಗೆ ಬಿಡುಗಡೆಯಾಗಿರುವ ಒಟ್ಟು ಅನುದಾನದಲ್ಲಿ ಶೇ.50 ನಿರ್ಬಂಧಿತ ಅನುದಾನ ಮತ್ತು ಶೇ.50 ಅನಿರ್ಬಂಧಿತ ಯೋಜನೆಗಳಿಗಾಗಿ ಕ್ರಿಯಾ ಯೋಜನೆ ತಯಾರಿಸಬೇಕಿದೆ. ಒಟ್ಟು ಅನುದಾನ ದಲ್ಲಿ ಶೇ.25ನ್ನು ಪ.ಜಾತಿ ಮತ್ತು ಪಂಗಡ ಮತ್ತು ಶೇ.5ನ್ನು ವಿಕಲಚೇತನರ ಕಲ್ಯಾಣ ಕಾರ್ಯಕ್ರಮಗಳಿಗೆ ಮೀಸಲಿಡುವಂತೆ ದಿನಕರಬಾಬು ತಿಳಿಸಿದರು.

ನಿರ್ಬಂಧಿತ ಅನುದಾನ ಸುಮಾರು 2.07 ಕೋಟಿ ರೂ.ಗಳಷ್ಟಿದ್ದು, ಇದರಲ್ಲಿ ಕುಡಿಯುವ ನೀರು ಯೋಜನೆಗಳಿಗಾಗಿ 1.035 ಕೋಟಿ, ನೈರ್ಮಲ್ಯಕ್ಕೆ 1.035 ಕೋಟಿ ಮೊತ್ತದ ಕ್ರಿಯಾ ಯೋಜನೆ ಹಾಗೂ ಅನಿರ್ಬಂಧಿತ ಅನುದಾನದಲ್ಲಿ 2.07 ಕೋಟಿ ರೂ. ಮೊತ್ತದ ವಿವಿಧ ಕಾಮಗಾರಿಗಳಿಗಾಗಿ ಕ್ರಿಯಾಯೋಜನೆ ತಯಾರಿಸುವಂತೆ ಸೂಚಿಸಿದರು.

ಜಿಪಂನ 2019-20ನೇ ಸಾಲಿನ ಅನುದಾನದಲ್ಲಿ 13 ಕೋಟಿ ರೂ ವೆಚ್ಚ ವಾಗದೇ ಲ್ಯಾಪ್ಸ್ ಆಗಿದ್ದು, ಕಾಮಗಾರಿ ಮುಕ್ತಾಯಗೊಂಡು ಬಿಲ್ಲು ಸಲ್ಲಿಸಿದ್ದರೂ ಸಹ ಸಂಬಂಧಪಟ್ಟವರಿಗೆ ಹಣ ಪಾವತಿಯಾಗದೇ ಲ್ಯಾಪ್ಸ್ ಆಗಿದೆ. ಈ ಕುರಿತು ಸಂಬಂಧಪಟ್ಟವರ ವಿರುದ್ದ ಕ್ರಮಕೈಗೊಳ್ಳುವಂತೆ ಅಧ್ಯಕ್ಷರಾದಿಯಾಗಿ ಎಲ್ಲಾ ಸದಸ್ಯರುಕೋರಿದರು. ಈಗಾಗಲೇ ಸಂಬಂದಪಟ್ಟವರಿಗೆ ಶೋಕಾಸ್ ನೋಟೀಸ್ ನೀಡಲಾಗಿದ್ದು, ಪ್ರಾಥಮಿಕ ತನಿಖೆ ನಡೆಯುತ್ತಿದೆ. ತನಿಖೆಯ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಿಇಓ ಪ್ರೀತಿ ಗೆಹ್ಲೋಟ್ ತಿಳಿಸಿದರು.

ಜಿಪಂ ಸಿಬ್ಬಂದಿಯೊಬ್ಬರಿಗೆ ಕೊರೋನಾ ಪಾಸಿಟಿವ್ ಪ್ರಕರಣದಲ್ಲಿ ಆತನ ಹೆಸರು, ವಿಳಾಸದ ಸಮೇತ ವರದಿ ಪ್ರಸಾರವಾದ ಬಗ್ಗೆ ತೀವ್ರ ಅಸಮಧಾನ ವ್ಯಕ್ತಪಡಿಸಿದ ಸದಸ್ಯೆ ಗೀತಾಂಜಲಿ ಸುವರ್ಣ, ಸಿಬ್ಬಂದಿಯ ಪರೀಕ್ಷಾ ವರದಿಯಲ್ಲಿ ಪದೇ ಪದೇ ಗೊಂದಲ ಸೃಷ್ಟಿ ಮಾಡಿದ್ದರಿಂದ, ಆತ ಮಾನಸಿಕವಾಗಿ ಝರ್ಜರಿತ ನಾಗಿದ್ದು, ಈ ಸಂದರ್ಭದಲ್ಲಿ ವರದಿಯ ಬಗ್ಗೆ ವಿಚಾರಿಸಿದಾಗ ಸಂಬಂದಪಟ್ದ ವೈದ್ಯರೂ ಸಹ ತಮಗೆ ಸರಿಯಾದ ಮಾಹಿತಿ ನೀಡಿಲ್ಲ ಎಂದರು.

ಪ್ರಸ್ತುತ ಮಾನಸಿಕವಾಗಿ ನೊಂದಿರುವ ಯುವಕನಿಗೆ ಜಿಪಂನಿಂದ ದೈರ್ಯ ತುಂಬವ ಕೆಲಸ ಆಗಬೇಕು ಮತ್ತು ಆತ ಪುನಃ ಇಲ್ಲಿಯೇ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡಬೇಕು ಎಂದು ಗೀತಾಂಜಲಿ ಸುವರ್ಣ ಒತ್ತಾಯಿಸಿದರು. ಉಪಾಧ್ಯಕ್ಷೆ ಶಿಲ್ಪಾ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶೋಭಾ ಜಿ ಪುತ್ರನ್, ಪ್ರತಾಪ್ ಹೆಗ್ಡೆ ಮಾರಾಳಿ, ಸುಮಿತ್ ಶೆಟ್ಟಿ, ಜಿಪಂ ಉಪಕಾರ್ಯದರ್ಶಿ ಕಿರಣ್ ಫಡ್ನೇಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News