ಅಮೆರಿಕ: ಕರಿಯ ವ್ಯಕ್ತಿಯನ್ನು ಕೊಂದ ಪೊಲೀಸ್ ವಿರುದ್ಧ ಕೊಲೆ ಮೊಕದ್ದಮೆ

Update: 2020-05-30 15:41 GMT

ಮಿನಪೊಲಿಸ್ (ಅಮೆರಿಕ), ಮೇ 30: ಅಮೆರಿಕದ ಮಿನಸೋಟ ರಾಜ್ಯದ ಮಿನಪೊಲಿಸ್ ನಗರದಲ್ಲಿ ಇತ್ತೀಚೆಗೆ ಕರಿಯ ವ್ಯಕ್ತಿಯೋರ್ವನ ಬಂಧನದ ವೇಳೆ ಆತನನ್ನು ಉಸಿರುಗಟ್ಟಿಸಿ ಕೊಂದ ಆರೋಪದಲ್ಲಿ ಪೊಲೀಸ್ ಸಿಬ್ಬಂದಿಯೋರ್ವನನ್ನು ಶುಕ್ರವಾರ ಬಂಧಿಸಲಾಗಿದೆ ಹಾಗೂ ಆತನ ವಿರುದ್ಧ ಮೂರನೇ ದರ್ಜೆ ಕೊಲೆ ಆರೋಪವನ್ನು ಹೊರಿಸಲಾಗಿದೆ.

ಪೊಲೀಸ್ ಅಧಿಕಾರಿ ಡೆರೆಕ್ ಶಾವಿನ್ ಸೋಮವಾರ ಆರೋಪಿ 46 ವರ್ಷದ ಜಾರ್ಜ್ ಫ್ಲಾಯ್ಡ್ ರ ಕೈಗಳಿಗೆ ಕೋಳ ತೊಡಿಸಿ ಅವರನ್ನು ನೆಲಕ್ಕೆ ಕೆಡವಿ ಅವರ ಕುತ್ತಿಗೆಯ ಮೇಲೆ ಕನಿಷ್ಠ 5 ನಿಮಿಷಗಳ ಕಾಲ ಮೊಣಕಾಲಿಟ್ಟು ಕುಳಿತು ಉಸಿರುಗಟ್ಟಿಸಿ ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನು ತೋರಿಸುವ ಸ್ಫೋಟಕ ವೀಡಿಯೊವೊಂದು ಬಹಿರಂಗವಾದ ಸ್ವಲ್ಪವೇ ಹೊತ್ತಿನಲ್ಲಿ ಶಾವಿನ್ ಸೇರಿದಂತೆ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಅಮಾನತಿನಲ್ಲಿಡಲಾಗಿತ್ತು.

ಇದರ ಬೆನ್ನಿಗೇ ಮಿನಪೊಲಿಸ್ ಮತ್ತು ಅಮೆರಿಕದ ಇತರ ನಗರಗಳಲ್ಲಿ ಆಫ್ರಿಕನ್ ಅಮೆರಿಕನ್ನರ ವಿರುದ್ಧ ಪೊಲೀಸರು ನಡೆಸುತ್ತಿದ್ದಾರೆ ಎನ್ನಲಾದ ಅಮಾನುಷ್ ದೌರ್ಜನ್ಯದ ವಿರುದ್ಧ ಪ್ರತಿಭಟನೆಗಳು ನಡೆದವು. ಕೆಲವು ಸ್ಥಳಗಳಲ್ಲಿ ಪ್ರತಿಭಟನೆಗಳು ಹಿಂಸೆಗೆ ತಿರುಗಿದ್ದು ನೂರಾರು ಅಂಗಡಿಗಳು ಹಾನಿಗೊಂಡಿವೆ ಹಾಗೂ ಒಂದು ಪೊಲೀಸ್ ಠಾಣೆಗೆ ಪ್ರತಿಭಟನಕಾರರು ಬೆಂಕಿ ಕೊಟ್ಟಿದ್ದಾರೆ.

ಮಾಜಿ ಪೊಲೀಸ್ ಅಧಿಕಾರಿ ಶಾವಿನ್‌ರನ್ನು ಬಂಧಿಸಿ ಅವರ ವಿರುದ್ಧ ಕೊಲೆ ಮತ್ತು ಹಲ್ಲೆ ಆರೋಪವನ್ನು ಹೊರಿಸಲಾಗಿದೆ ಎಂದು ಹೆನ್‌ಪಿನ್ ಕೌಂಟಿ ಪ್ರಾಸಿಕ್ಯೂಟರ್ ಮೈಕ್ ಫ್ರೀಮನ್ ಸುದ್ದಿಗಾರರಿಗೆ ತಿಳಿಸಿದರು.

ಅಮೆರಿಕದಾದ್ಯಂತ ಹಬ್ಬಿದ ಪ್ರತಿಭಟನೆ

ಮಿನಪೊಲಿಸ್ ನಗರದಲ್ಲಿ ಕರಿಯ ವ್ಯಕ್ತಿಯೊಬ್ಬರು ಪೊಲೀಸ್ ಕಸ್ಟಡಿಯಲ್ಲಿ ಮೃತರಾಗಿರುವುದನ್ನು ಪ್ರತಿಭಟಿಸಿ ನಡೆಯುತ್ತಿರುವ ಪ್ರತಿಭಟನೆ ಅಮೆರಿಕದಾದ್ಯಂತ ಹಬ್ಬಿದೆ. ಶುಕ್ರವಾರ ಸಾವಿರಾರು ಪ್ರತಿಭಟನಕಾರರು ನ್ಯೂಯಾರ್ಕ್‌ನ ಬಾರ್ಕ್‌ಲೇಸ್ ಸೆಂಟರ್‌ನ ಆವರಣಕ್ಕೆ ನುಗ್ಗಿ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭದಲ್ಲಿ ಪೊಲೀಸರು ನೂರಾರು ಮಂದಿಯನ್ನು ಬಂಧಿಸಿದರು. ಕೈಕೋಳ ಹಾಕಲ್ಪಟ್ಟ ಪ್ರತಿಭಟನಕಾರರನ್ನು ಪೊಲೀಸರು ಅಟ್ಲಾಂಟಿಕ್ ಅವೆನ್ಯೂನಲ್ಲಿ ಸಾಲುಗಟ್ಟಿ ನಿಂತ ಬಸ್‌ಗಳಿಗೆ ತುಂಬಿಸಿದರು.

ಪೊಲೀಸರು ಚೋಕ್‌ಹೋಲ್ಡ್ (ಕುತ್ತಿಗೆಯನ್ನು ಬಿಗಿಹಿಡಿಯುವುದು) ಪಟ್ಟನ್ನು ಬಳಸುವುದನ್ನು ನಿಷೇಧಿಸಿ ಕಾನೂನು ತರಬೇಕು ಎಂಬುದಾಗಿ ಮ್ಯಾನ್‌ಹಟನ್‌ನಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಕಾರರು ಸರಕಾರವನ್ನು ಒತ್ತಾಯಿಸಿದರು.

ಮ್ಯಾನ್‌ಹಟನ್ ನಗರದಲ್ಲಿ 2014ರಲ್ಲಿ ಪೊಲೀಸ್ ಅಧಿಕಾರಿಯೊಬ್ಬ ಚೋಕ್‌ಹೋಲ್ಡ್ ಪಟ್ಟು ಪ್ರಯೋಗಿಸಿದಾಗ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಮೃತಪಟ್ಟ ವ್ಯಕ್ತಿ ಕೂಡ ಆಫ್ರಿಕನ್ ಅಮೆರಿಕನ್ ಆಗಿದ್ದರು.

ಅಟ್ಲಾಂಟ, ಮಿನಪೊಲಿಸ್, ಡೆಟ್ರಾಯಿಟ್, ಡೆನ್ವರ್, ಹ್ಯೂಟನ್, ಲೂಸ್‌ವಿಲ್ ನಗರಗಳಲ್ಲೂ ಪ್ರತಿಭಟನೆಗಳು ನಡೆದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News