ಕೋವಿಡ್-19 ರೋಗಿಯ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದ 18 ಜನರಲ್ಲಿ ಸೋಂಕು ಪತ್ತೆ

Update: 2020-05-30 15:48 GMT

ಥಾಣೆ(ಮಹಾರಾಷ್ಟ್ರ),ಮೇ 30: ಥಾಣೆ ಜಿಲ್ಲೆಯ ಉಲ್ಲಾಸನಗರದಲ್ಲಿ ಕೊರೋನ ವೈರಸ್ ಸೋಂಕಿನಿಂದ ಮೃತಪಟ್ಟಿದ್ದ 40ರ ಹರೆಯದ ಮಹಿಳೆಯೋರ್ವಳ ಅಂತ್ಯಸಂಸ್ಕಾರದಲ್ಲಿ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಪಾಲ್ಗೊಂಡಿದ್ದ 70 ಜನರ ಪೈಕಿ ಕನಿಷ್ಠ 18 ಜನರಲ್ಲಿ ಸೋಂಕು ದೃಢಪಟ್ಟಿದೆ.

ಮಹಿಳೆಯು ಕೋವಿಡ್-19 ಸೋಂಕಿಗೆ ತುತ್ತಾಗಿದ್ದಳು ಎನ್ನುವುದು ಆಕೆಯ ಸಾವಿನ ಬಳಿಕ ದೃಢಪಟ್ಟಿತ್ತು. ಮಹಿಳೆಯ ಶವವನ್ನು ಪ್ಯಾಕ್ ಮಾಡಿ ಕುಟುಂಬಸ್ಥರಿಗೆ ಒಪ್ಪಿಸಲಾಗಿತ್ತು ಮತ್ತು ಅದನ್ನು ತೆರೆಯದಂತೆ ಸೂಚಿಸಲಾಗಿತ್ತು. ಆದರೆ ಮೇ 25ರಂದು ಅಂತ್ಯವಿಧಿಗಳನ್ನು ನೆರವೇರಿಸಲು ಅವರು ಪ್ಯಾಕ್‌ನಿಂದ ಶವವನ್ನು ಹೊರಕ್ಕೆ ತೆಗೆದಿದ್ದರು ಎಂದು ಉಲ್ಲಾಸನಗರ ಮಹಾನಗರ ಪಾಲಿಕೆಯ ವಕ್ತಾರರು ತಿಳಿಸಿದರು.

ನಿಕಟ ಬಂಧುಗಳು ಸೇರಿದಂತೆ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದ 70 ಜನರನ್ನು ಕೊರೋನ ವೈರಸ್ ಪರೀಕ್ಷೆಗೊಳಪಡಿಸಿದ್ದು, ಶುಕ್ರವಾರ 18 ಜನರ ವರದಿಗಳು ಪಾಸಿಟಿವ್ ಆಗಿ ಬಂದಿವೆ. ಸಾಂಕ್ರಾಮಿಕ ರೋಗಗಳ ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕಾಗಿ ಮೃತ ಮಹಿಳೆಯ ಕುಟುಂಬದ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News