ಮೋದಿ ಆಡಳಿತಕ್ಕೆ ಕಲ್ಪನಾತೀತ ಸವಾಲುಗಳು, ಸಾಧನೆಗಳ ವರ್ಷ: ನಡ್ಡಾ

Update: 2020-05-30 16:12 GMT

ಹೊಸದಿಲ್ಲಿ, ಮೇ 30: ಕೊರೋನ ವೈರಸ್ ಹಾವಳಿ ವಿರುದ್ಧ ದೇಶ ನಡೆಸುತ್ತಿರುವ ಹೋರಾಟವನ್ನು ಪ್ರಧಾನಿ ನರೇಂದ್ರ ಮೋದಿ ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಪ್ರಶಂಸಿಸಿದ್ದಾರೆ. ಕೋವಿಡ್-19 ವಿರುದ್ಧ ಹೋರಾಟದಲ್ಲಿ ಜನಸಾಮಾನ್ಯರನ್ನು ಕೂಡಾ ಒಳಪಡಿಸಲಾಗುತ್ತಿದೆ ಎಂದರು.

ಮೋದಿ ಸರಕಾರದ ಎರಡನೆ ಅವಧಿಯ ಆಳ್ವಿಕೆಗೆ ಒಂದು ವರ್ಷ ಪೂರ್ಣ ಗೊಂಡಿರುವ ಹಿನ್ನೆಲೆಯಲ್ಲಿ ಶನಿವಾರ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಒಂದು ವರ್ಷದ ಅವಧಿಯು ಮೋದಿ ಸರಕಾರಕ್ಕೆ ಸಾಧನೆಗಳು ಹಾಗೂ ಕಲ್ಪನೆಗೂ ನಿಲುಕದ ಸವಾಲುಗಳಿಂದ ಕೂಡಿದ ವರ್ಷವಾಗಿತ್ತೆಂದು ನಡ್ಡಾ ಅಭಿಪ್ರಾಯಿಸಿದರು. ಕರೋನ ವೈರಸ್ ಸಾಂಕ್ರಾಮಿಕದ ವಿರುದ್ಧ ಜಗತ್ತಿನ ಅನೇಕ ಬಲಿಷ್ಠ ದೇಶಗಳು ನಿಸ್ಸಹಾಯಕ ವಾಗಿವೆಯಾದರೂ, ಭಾರತದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿರುವುದಾಗಿ ಅವರು ಹೇಳಿದರು.

ಕೊರೋನ ವೈರಸ್ ಹಾವಳಿ ನಿಯಂತ್ರಣಕ್ಕಾಗಿ ರಾಷ್ಟ್ರಾದ್ಯಂತ ಲಾಕ್‌ಡೌನ್ ಹೇರುವ ಕೇಂದ್ರ ಸರಕಾರದ ನಿರ್ಧಾರವನ್ನು ನಡ್ಡಾ ಪ್ರಶಂಸಿಸಿದರು. ಮೋದಿಯವರ ದಿಟ್ಟ ನಿರ್ಧಾರಗಳು ದೇಶವನ್ನು ಬಲಪಡಿಸಲು ನೆರವಾಗಿವೆ ಹಾಗೂ ‘ಒಂದು ದೇಶ ಒಂದು ಸಂವಿಧಾನ’ ಎಂಬ ಧ್ಯೇಯವನ್ನು ಜನತೆ ಅರಿತುಕೊಳ್ಳುವಂತೆ ಮಾಡಿವೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷರು ತಿಳಿಸಿದರು. ಸಂವಿಂಧಾನದ 370ನೇ ವಿಧಿಯ ರದ್ದತಿ, ಭಯೋತ್ಪಾದನೆ ವಿರೋಧಿ ಕಾನೂನುಗಳ ಬಲಪಡಿಸುವಿಕೆ ಹಾಗೂ ಬ್ಯಾಂಕುಗಳ ವಿಲೀನ ಇವು ಸರಕಾರ ಯಶಸ್ವಿ ಸಾಧನೆಗಳಾಗಿವೆ ಎಂದವರು ಹೇಳಿದರು.

ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕೈ ಪಕ್ಷವು ಅಯೋಧ್ಯೆಯ ವಿವಾದಿತ ನಿವೇಶನದ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಲು ವಿಳಂಬಿಸಿತ್ತು ಎಂದು ಹೇಳಿದರು. ಮೋದಿಯ ನಾಯಕತ್ವದಡಿಯಲ್ಲಿ ರಾಮಮಂದಿರ ನಿರ್ಮಾಣ ವಾಗಲಿದ್ದು, ಅದಕ್ಕಾಗಿ ಸರಕಾವು ಈಗಾಗಲೇ ಟ್ರಸ್ಟ್ ಒಂದನ್ನು ರಚಿಸಿದೆಯೆಂದು ಹೇಳಿದರು.

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು 303 ಸ್ಥಾನಗಳನ್ನು ಗೆಲ್ಲುವ ಮೂಲಕ ಭಾರೀ ಬಹುಮತದೊಂದಿಗೆ ಎರಡನೆ ಅವಧಿಗೆ ಅಧಿಕಾರಕ್ಕೇರಿತ್ತು. ಎರಡನೆ ಅವಧಿಗೆ ಪ್ರಧಾನಿಯಾಗಿ ನರೇಂದ್ರ ಮೋದಿಯವರು 2019ರ ಮೇ 30ರಂದು ಅಧಿಕಾರ ವಹಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News