‘ಪಾಕ್ ಗೂಢಚಾರಿ’ಎಂಬ ಆತಂಕ ಸೃಷ್ಟಿಸಿದ್ದ ಪಾರಿವಾಳದ ಬಿಡುಗಡೆ

Update: 2020-05-30 16:19 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಮೇ 30: ಜಮ್ಮು-ಕಾಶ್ಮೀರದ ಕಥುವಾ ಜಿಲ್ಲೆಯ ಅಂತರರಾಷ್ಟ್ರೀಯ ಗಡಿಗೆ ಸಮೀಪದ ಚದ್ವಾಲ್ ಪ್ರದೇಶದಲ್ಲಿ ಕಳೆದ ರವಿವಾರ ಪತ್ತೆಯಾಗಿದ್ದ ಪಾರಿವಾಳವನ್ನು ಬಿಡುಗಡೆಗೊಳಿಸಲಾಗಿದೆ. ಕಾಲಿನಲ್ಲಿ ಗುಲಾಬಿ ವರ್ಣದ ಗುರುತು ಮತ್ತು ಟ್ಯಾಗ್ ಹೊಂದಿದ್ದ ಈ ಪಾರಿವಾಳವು ‘ಪಾಕಿಸ್ತಾನದ ಗೂಢಚಾರಿ’ಯಾಗಿರಬಹುದು ಎಂಬ ಶಂಕೆ,ಆತಂಕವನ್ನು ಸೃಷ್ಟಿಸಿತ್ತು. ಇದು ತನ್ನ ಸಾಕುಪಕ್ಷಿ ಎಂದು ಪಾಕಿಸ್ತಾನಿ ಗ್ರಾಮಸ್ಥನೋರ್ವ ಹೇಳಿಕೊಂಡಿದ್ದು,ಶಂಕಾಸ್ಪದವಾದ ಯಾವುದೂ ಕಂಡು ಬರದಿದ್ದರಿಂದ ಗುರುವಾರ ಅದು ಪತ್ತೆಯಾಗಿದ್ದ ಸ್ಥಳದಿಂದಲೇ ಅದನ್ನು ಬಿಡುಗಡೆಗೊಳಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಗಳು ತಿಳಿಸಿದರು.

 ಪಾರಿವಾಳದ ಪಾಕಿಸ್ತಾನಿ ಮಾಲಿಕನೆನ್ನಲಾಗಿರುವ ಗಡಿಗೆ ಸಮೀಪದ ಗ್ರಾಮವೊಂದರ ನಿವಾಸಿ ಹಬೀಬುಲ್ಲಾ ಅದೊಂದು ಅಮಾಯಕ ಪಕ್ಷಿ ಎಂದು ಸುದ್ದಿಸಂಸ್ಥೆಗೆ ತಿಳಿಸಿದ್ದ ಮತ್ತು ಅದನ್ನು ಬಿಡುಗಡೆ ಗೊಳಿಸುವಂತೆ ಭಾರತವನ್ನು ಆಗ್ರಹಿಸಿದ್ದ. ಪಾರಿವಾಳದ ಕಾಲಿನಲ್ಲಿದ್ದ ಉಂಗುರದ ಮೇಲೆ ಕೆತ್ತಲಾಗಿದ್ದ ಅಂಕಿಗಳು ಕಾಶ್ಮೀರದಲ್ಲಿಯ ಭಯೋತ್ಪಾದಕರಿಗಾಗಿ ಕೋಡ್‌ಗಳಾಗಿವೆ ಎಂಬ ಆರೋಪವನ್ನು ನಿರಾಕರಿಸಿದ್ದ ಆತ,ತನ್ನ ಪಾರಿವಾಳವು ಇತ್ತೀಚಿಗೆ ಪಾರಿವಾಳಗಳ ಹಾರಾಟ ಸ್ಪರ್ಧೆಯಲ್ಲಿ ಭಾಗವಹಿಸಿತ್ತು ಮತ್ತು ಅದರ ಕಾಲಿನ ಮೇಲಿನ ಅಂಕಿಗಳು ತನ್ನ ಮೊಬೈಲ್ ಸಂಖ್ಯೆಯಾಗಿದೆ ಎಂದು ತಿಳಿಸಿದ್ದ.

  ಪೊಲೀಸರ ದಾಖಲೆಗಳಂತೆ ಈ ಪಾರಿವಾಳವು ಕಳೆದ ರವಿವಾರ ಸಂಜೆ ಏಳು ಗಂಟೆಯ ಸುಮಾರಿಗೆ ಗೀತಾದೇವಿ ಎಂಬಾಕೆಯ ಮನೆಯೊಳಗೆ ನುಗ್ಗಿತ್ತು. ಅದನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಕಾಲಿನಲ್ಲಿ ಉಂಗುರ ಕಂಡುಬಂದಿತ್ತು. ಶಂಕೆಗೊಂಡ ಆಕೆ ಅದನ್ನು ಬಿಎಸ್‌ಎಫ್ ಅಧಿಕಾರಿಗಳಿಗೆ ಒಪ್ಪಿಸಿದ್ದು,ಅವರು ಬಳಿಕ ಹಿರಾ ನಗರ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದರು.

ಈ ಹಿಂದೆಯೂ ಪಾಕಿಸ್ತಾನದಿಂದ ಸಂದೇಶಗಳನ್ನು ಹೊತ್ತು ಬಂದಿದ್ದ ಇಂತಹ ಪಕ್ಷಿಗಳು ಕಾಶ್ಮೀರದಲ್ಲಿ ಪತ್ತೆಯಾಗಿದ್ದವು.

ಇದು ಅಂತರರಾಷ್ಟ್ರೀಯ ಗಡಿಗೆ ಸಮೀಪವಿರುವುದರಿಂದ ಸೂಕ್ಷ್ಮ ಪ್ರದೇಶವಾಗಿದೆ. ಈ ಮಾರ್ಗವಾಗಿ ನುಸುಳುವಿಕೆಯೂ ಸಾಮಾನ್ಯವಾಗಿದೆ. ಗಡಿಯಾಚೆಯ ಜನರು ಸಂದೇಶಗಳನ್ನು ರವಾನಿಸಲು ಪಕ್ಷಿಗಳನ್ನು ಬಳಸುತ್ತಾರೆ. ಸಾಮಾನ್ಯವಾಗಿ ಅವುಗಳನ್ನು ಯಾರೂ ಶಂಕಿಸುವುದಿಲ್ಲ. ಒಂದಿನಿತೂ ಸುಳಿವು ನೀಡದೆ ಈ ಪಕ್ಷಿಗಳು ತಮ್ಮ ಕೆಲಸವನ್ನು ಮಾಡುತ್ತವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News