ಸರೋಜ ಕುಟುಂಬಕ್ಕೆ ಸಜೀಪ ಹಾಜಿ ಅಬ್ದುಲ್ ಖಾದರ್ ಫ್ಯಾಮಿಲಿ ಟ್ರಸ್ಟ್ ನಿಂದ ನೆರವು

Update: 2020-05-30 16:55 GMT

ಬಂಟ್ವಾಳ: ಅಸ್ಪತ್ರೆಯ ಬಿಲ್ ವಾವತಿಸಲು ಹಣವಿಲ್ಲದೆ ಒಂದು ತಿಂಗಳಿನಿಂದ ಡಿಶ್ಚಾರ್ಜ್ ಆಗದೆ ಆಸ್ಪತ್ರೆಯಲ್ಲಿ ಬಾಕಿಯಾಗಿ ಸಂಕಷ್ಟಕ್ಕೆ ಒಳಗಾದ ಸರೋಜ ಎಂಬ ಮಹಿಳೆಗೆ ನೆರವಾಗುವ ಮೂಲಕ ಸಜೀಪ ಹಾಜಿ ಅಬ್ದುಲ್ ಖಾದರ್ ಫ್ಯಾಮಿಲಿ ಅಸೋಸಿಯೇಷನ್ ನ ಸದಸ್ಯರು ಮಾನವೀಯತೆ ಮೆರೆದಿದ್ದಾರೆ.

ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೃಷ್ಣಾಪುರ ನಿವಾಸಿ ಸರೋಜಾ ಎಂಬ ಮಹಿಳೆ ಯನ್ನು ಮೂರು ತಿಂಗಳ ಹಿಂದೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದು ತಿಂಗಳ ಹಿಂದೆಯೇ ಮಹಿಳೆ ಗುಣಮುಖರಾಗಿ ದ್ದರೂ ಆಸ್ಪತ್ರೆಯಿಂದ ಬಿಡುಗಡೆಯಾಗಲು ಬಿಲ್ ಪಾವತಿಸಲು ಹಣವಿಲ್ಲದೆ ಕುಟುಂಬ ಸಂಕಷ್ಟಕ್ಕೆ ಒಳಗಾಗಿತ್ತು. ಇದರಿಂದಾಗಿ ರೋಗಿ ಆಸ್ಪತ್ರೆಯಲ್ಲಿಯೇ ಉಳಿದಿದ್ದರು.

ಬಿಲ್ ಪಾವತಿಸಲು ಹಣವಿಲ್ಲದೆ ಆಸ್ಪತ್ರೆಯಲ್ಲಿ ಮಹಿಳೆ ಬಾಕಿಯಾಗಿರುವ ವಿಷಯ ತಿಳಿದು ತಕ್ಷಣ ಸ್ಪಂದಿಸಿದ ಆಲ್ ಇಂಡಿಯಾ ಮುಸ್ಲಿಮ್ ಡೆವಲಪ್ಮೆಂಟ್ ಫೋರಮ್ ಇದರ ರಾಜ್ಯ ಉಪಾಧ್ಯಕ್ಷ ಅಬೂಬಕರ್ ಸಜಿಪ, ಅವರ ಫ್ಯಾಮಿಲಿ ಟ್ರಸ್ಟ್ ಆದ ಸಜಿಪ ಹಾಜಿ ಅಬ್ದುಲ್ ಖಾದರ್ ಫ್ಯಾಮಿಲಿ ಅಸೋಸಿಯೇಷನ್ ನಿಂದ ಬಿಲ್ ಭರಿಸುವ ಭರವಸೆ ನೀಡಿ ಕುಟುಂಬವನ್ನು ಸಂತೈಸಿದರು.

ಟ್ರಸ್ಟ್ ನ ಅಧ್ಯಕ್ಷ ಎಂ.ಕೆ.ಅಬ್ದುಲ್ ಖಾದರ್ ಹಾಜಿ ಹಾಗೂ ಟ್ರಸ್ಟ್ ನ ಸದಸ್ಯರೂ ಆದ ಎಸ್. ಅಬೂಬಕ್ಕರ್ ಸಜೀಪ ಖುದ್ದಾಗಿ ಆಸ್ಪತ್ರೆಗೆ ತೆರಳಿ ಬಿಲ್ ಪಾವತಿಸಿ ಮಹಿಳೆಯನ್ನು ತಮ್ಮದೇ ಕಾರಿನಲ್ಲಿ ಮೂಡಿಗೆರೆಗೆ ಕರೆದುಕೊಂಡು ಹೋಗಿ ಕುಟುಂಬಕ್ಕೆ ಒಂದು ತಿಂಗಳಿಗೆ ಬೇಕಾದ ಆಹಾರ ಸಾಮಗ್ರಿಗಳನ್ನು ಕೊಡುವ ಮೂಲಕ ಮಾನವೀಯತೆ ಮರೆದಿದ್ದಾರೆ.

ಮೂರು ತಿಂಗಳ ಸಂಪೂರ್ಣ ವೈದ್ಯಕೀಯ ಮೊತ್ತವನ್ನು ಪಾವತಿಸಿ ಮಹಿಳೆಯನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿರುವ ಸಜೀಪ ಹಾಜಿ ಅಬ್ದುಲ್ ಖಾದರ್  ಫ್ಯಾಮಿಲಿ ಅಸೋಸಿಯೇಶನ್ ಮಾನವೀಯ ಸೇವೆ ಸಮಾಜಕ್ಕೆ ಮಾದರಿಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.

ಯಾವುದೇ ಜಾತಿ ಧರ್ಮ ನೋಡದೆ ಸದಾ ಜೀವಪರ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಅಸೋಸಿಯೇಷನ್ ನ ಕಾರ್ಯದ ಬಗ್ಗೆ ಮಹಿಳೆಯ ಮನೆಯಾದ ಮೂಡಿಗೆರೆ ಕೃಷ್ಣಾಪುರ ಪರಿಸರದ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅಲ್ಲಿನ ಸ್ಥಳೀಯ ಮುಖಂಡರು ಮೂಡಿಗೆರೆ ಹ್ಯಾಂಡ್ ಫೋಸ್ಟ್ ಬಳಿ ಮಂಗಳೂರಿನಿಂದ ಮಹಿಳೆಯನ್ನು ಕರೆದುಕೊಂಡು ಹೋದ ತಂಡವನ್ನು ಸ್ವಾಗತಿಸಿ ಗೌರವಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News