ವಿವಿಧ ಬೇಡಿಕೆ ಈಡೇರಿಸಲು ದ.ಕ.ಸಾಮಿಲ್ಲರ್ಸ್‌ ಅಸೋಸಿಯೇಶನ್ ಮನವಿ

Update: 2020-05-30 17:22 GMT

ಮಂಗಳೂರು, ಮೇ 30: ಕೊರೋನ-ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಾಮಿಲ್ ಉದ್ಯಮವು ಅಪಾರ ನಷ್ಟ ಅನುಭವಿಸುತ್ತಿದ್ದು, ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿವೆ. ಹಾಗಾಗಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಗಳೂರು ಇವರಿಗೆ ದ.ಕ.ಸಾಮಿಲ್ಲರ್ಸ್‌ ಅಸೋಸಿಯೇಶನ್ ಮನವಿ ಸಲ್ಲಿಸಿದೆ

ಜಿಲ್ಲೆಯಲ್ಲಿ ಮರವನ್ನು ಆಧಾರಿತ 174 ಮಿಲ್‌ಗಳಿವೆ. ಫ್ಲೈವುಡ್ ಫ್ಯಾಕ್ಟರಿಗಳು ಅರಣ್ಯ ಇಲಾಖೆಯಿಂದ ಪರವಾನಿಗೆ ಪಡೆದು ಕಾನೂನುಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ. ಲೈಸನ್ಸ್ ಶುಲ್ಕ ಮತ್ತು ತೆರಿಗೆಯನ್ನು ಕ್ರಮಬದ್ಧವಾಗಿ ಪಾವತಿಸುತ್ತಾ ಬಂದಿವೆ. ಕೊರೋನ-ಲಾಕ್‌ಡೌನ್ ಸಂದರ್ಭ ಮಿಲ್ ಕೂಡ ಬಂದ್ ಆಗಿವೆ. ಇಲ್ಲಿ ದುಡಿಯುವ ಸಾವಿರಾರು ಕಾರ್ಮಿಕರಿಗೆ ಸರಕಾರ ಯಾವುದೇ ಪರಿಹಾರ ಘೋಷಣೆ ಮಾಡದಿದ್ದರೂ ಕೂಡ ಮಿಲ್‌ನ ಮಾಲಕರೇ ವೇತನ ನೀಡಿ ಅವರು ಬೀದಿಪಾಲಾಗದಂತೆ ನೋಡಿಕೊಂಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಮದರ ಮಿಲ್‌ಗಳು ಆರ್ಥಿಕವಾಗಿ ಚೇತರಿಸಿಕೊಳ್ಳಲು ಅಶಕ್ತವಾಗಿದೆ. ಹಾಗಾಗಿ ಅರಣ್ಯ ಇಲಾಖೆಯಿಂದ ಪರವನಿಗೆಯನ್ನು ಪಡೆದು ನಡೆಸುತ್ತಿರುವ ಉದ್ದಿಮೆಗಳ ಲೈಸನ್ಸನ್ನು ಮುಂದಿನ 5 ವರ್ಷಕ್ಕೆ ಯಾವುದೇ ಶುಲ್ಕವನ್ನು ಪಡೆಯದೆ ನವೀಕರಿಸಲು ಸೂಚಿಸಬೇಕು (ಚಾಲ್ತಿಯಲ್ಲಿರುವ ನಿಯಮಾನುಸಾರ ಲೈಸನ್ಸನ್ನು 5 ವರ್ಷಕ್ಕೆ ನವೀಕರಿಸಲು ಅವಕಾಶವಿರುತ್ತದೆ), ವಿದ್ಯುಚ್ಛಕ್ತಿ ಇಲಾಖೆಯು ಉದ್ದಿಮೆಗಳಲ್ಲಿ ವಿದ್ಯುಚ್ಛಕ್ತಿ ಸ್ಥಾವರಗಳ ಕನಿಷ್ಟ ಶುಲ್ಕವನ್ನು ವಸೂಲು ಮಾಡುವುದನ್ನು ತಡೆಹಿಡಿಯಬೇಕು, ಪಂಚಾಯತ್/ಮುನ್ಸಿಪಾಲಿಟಿ/ನಗರಪಾಲಿಕೆ ಇತ್ಯಾದಿ ಸ್ಥಳೀಯಾಡಳಿತ ಸಂಸ್ಥೆಗಳು ನೀಡಿರುವ ಉದ್ದಿಮೆ ಪರವಾನಿಗೆಯನ್ನು ಯಾವುದೇ ಶುಲ್ಕವನ್ನು ಪಡೆಯದೆ ನವೀಕರಿಸಿಕೊಳ್ಳಲು ಅದೇಶಿಸಬೇಕು, ಸರಕಾರವು ಕಾರ್ಮಿಕರಿಗೆ, ರಿಕ್ಷಾ ಚಾಲಕರಿಗೆ, ಟೈಲರ್‌ಗಳಿಗೆ, ಮೀನುಗಾರರಿಗೆ, ಕ್ಷೌರಿಕರಿಗೆ, ಕೂಲಿಯಾಳುಗಳಿಗೆ, ವಲಸೆ ಬಂದವರಿಗೆ ಮತ್ತಿತರರಿಗೆ ಕೊರೋನ ಅವಧಿಯಲ್ಲಿ ಸೂಕ್ತ ಪರಿಹಾರವನ್ನು ನೀಡಿದೆ. ಹಾಗೇ ಸಾಮಿಲ್‌ಗಳ ಕಾರ್ಮಿಕರಿಗೆ ಕೂಡ ಸೂಕ್ತ ಪರಿಹಾರ ಕಲ್ಪಿಸಲು ಮುಂದಾಗಬೇಕು ಎಂದು ಅಸೋಯೇಶನ್ ಮನವಿ ಮಾಡಿದೆ.

ದ.ಕ.ಸಾಮಿಲ್ಲರ್ಸ್‌ ಅಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ಅಝೀಝ್ ಹಾಜಿ, ಪ್ರಧಾನ ಕಾರ್ಯದರ್ಶಿ ವಿಶ್ವನಾಥ ನಾಯಕ, ಉಪಾಧ್ಯಕ್ಷ ಮುಹಮ್ಮದ್ ಫೈಝಲ್,ಕೋಶಾಧಿಕಾರಿ ಗೋವಿಂದ್ ಎಲ್.ಪಟೇಲ್ ಮನವಿ ಸಲ್ಲಿಸಿದ ನಿಯೋಗದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News