ಕರಾವಳಿಗೆ ಕಾಲಿಟ್ಟ ಮಿಡತೆ ಹಾವಳಿ !

Update: 2020-05-31 05:50 GMT
 ರೆಂಜಿಲಾಡಿಯಲ್ಲಿ ಕಾಣಿಸಿಕೊಂಡ ಮಿಡತೆಗಳ ಗುಂಪು

ಮಂಗಳೂರು/ಕಡಬ: ದೇಶದ ಉತ್ತರ ಭಾರತದಲ್ಲಿ ಕೃಷಿಕರನ್ನು ಕಂಗೆಡಿಸಿದ ಮಿಡತೆಗಳ ಹಾವಳಿ ಇದೀಗ ಕರಾವಳಿಗೆ ಕಾಲಿಟ್ಟಿದೆ. ಎರಡು ದಿನಗಳ ಹಿಂದೆ ಪಶ್ಚಿಮ ಘಟ್ಟದ ತಪ್ಪಲಿನ ರೆಂಜಿಲಾಡಿ ಗ್ರಾಮಾಂತರ ಪ್ರದೇಶದಲ್ಲಿ ಕಾಣಿಸಿಕೊಳ್ಳು ವುದರೊಂದಿಗೆ ಕೃಷಿಕರಿಗೆ ಆತಂಕ ಉಂಟುಮಾಡಿದೆ.

ಎಪ್ರಿಲ್ 11ರಂದು ರಾಜಸ್ಥಾನದ ಮರು ಭೂಮಿಯಲ್ಲಿ ಕಾಣಿಸಿಕೊಂಡ ಬೃಹತ್ ಮಿಡತೆಗಳ ದಂಡು ಉತ್ತರ ಭಾರತದ ಮಧ್ಯಪ್ರದೇಶ, ಪಂಜಾಬ್, ಉತ್ತರ ಪ್ರದೇಶ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಕಾಣಿಸಿ ಕೊಂಡಿತ್ತು. ಕೆಲವು ದಿನಗಳ ಹಿಂದೆ ದ.ಕ. ಜಿಲ್ಲೆಯ ಹತ್ತಿರದ ಕೊಡಗು ಜಿಲ್ಲೆಯಲ್ಲಿಯೂ ಸಣ್ಣ ಪ್ರಮಾಣದ ಮಿಡತೆಗಳ ದಂಡು ಕಾಣಿಸಿಕೊಂಡು ಕಾಫಿ ತೋಟದ ಎಲೆಗಳನ್ನು ತಿಂದು ಹಾನಿ ಮಾಡುತ್ತಿರುವ ಬಗ್ಗೆ ವರದಿಯಾಗಿತ್ತು. ಇದೀಗ ದ.ಕ. ಜಿಲ್ಲೆಯ ಕಡಬ ತಾಲೂಕಿನ ನೂಜಿ ಬಾಳ್ತಿಲ ಗ್ರಾಪಂ ವ್ಯಾಪ್ತಿಯ ರೆಂಜಿಲಾಡಿಯ ಕೃಷಿಕರೊಬ್ಬರ ತೋಟದಲ್ಲಿ ಕಾಣಿಸಿ ಕೊಂಡು ಕೃಷಿಕರಲ್ಲಿ ಆತಂಕವನ್ನುಂಟು ಮಾಡಿದೆ. ನೂಜಿಬಾಳ್ತಿಲ ಗ್ರಾಮದ ರೆಂಜಿಲಾಡಿ ಆನಂದ ಏರಾ ಎಂಬವರ ತೋಟದಲ್ಲಿ ಮಿಡತೆಗಳ ಗುಂಪು ಕಂಡುಬಂದಿದೆ. ಗುಂಪು, ಗುಂಪಾಗಿ ಆಗಮಿಸುವ ಮಿಡತೆಗಳು ಮರದ ಎಲೆಗಳನ್ನು ತಿನ್ನುತ್ತಿವೆ.ಸಾಮಾನ್ಯವಾಗಿ ಸಂಜೆ ಸಮಯದಲ್ಲಿ ಈ ಮಿಡತೆಗಳ ಗುಂಪು ಕಾಣಸಿಗುತ್ತಿದ್ದು, ಪರಿಸರವಾಸಿಗಳನ್ನು ಆತಂಕ ಕ್ಕೀಡುಮಾಡಿದೆ. ಅಲ್ಲದೆ ಬೆಳ್ತಂಗಡಿ ತಾಲೂಕಿನಲ್ಲೂ ಮಿಡತೆ ಹಾವಳಿ ಕಂಡುಬಂದಿದ್ದು, ಬೆಳ್ತಂಗಡಿ ತಾಲೂಕಿನ ಶಿರ್ಲಾಲು ನಿವಾಸಿ ಅನೀಶ್ ಎಂಬವರ ತೋಟದಲ್ಲಿಯೂ ಮಿಡತೆಗಳ ರಾಶಿ ಕಂಡುಬಂದಿದೆ.

ಇತ್ತೀಚೆಗೆ ಉತ್ತರ ಭಾರತದ ಮರುಭೂಮಿಯಲ್ಲಿ ಕಾಣಿಸಿಕೊಂಡ ಮಿಡತೆಗಳಿಗಿಂತ ಇದು ಭಿನ್ನವಾಗಿದೆ. ಮಿಡತೆಗಳಲ್ಲಿ ಸಾವಿರಾರು ಪ್ರಭೇದಗಳಿವೆ ಅವುಗಳ ಪೈಕಿ ಇದು ಒಂದು. ಈ ಮಿಡತೆಗಳು ಸ್ಥಳೀಯ ಪರಿಸರದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಮಿಡತೆಗಳಾಗಿವೆ ಎಂದು ಕೀಟತಜ್ಞರು ಮಾಹಿತಿ ನೀಡಿದ್ದಾರೆ. ಜಿಲ್ಲೆಯ ರೆಂಜಿಲಾಡಿ ಗ್ರಾಪಂನಲ್ಲಿ ಮಿಡತೆಗಳ ಹಾವಳಿ ಕಂಡು ಬಂದಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಬಂದಿದೆ. ಸ್ಥಳೀಯ ಪರಿಸರದಲ್ಲಿ ಕಾಣಿಸಿಕೊಳ್ಳುವ ಮಿಡತೆಗಳು ರೆಂಜಿಲಾಡಿ ಪರಿಸರದಲ್ಲಿ ಕಂಡು ಬಂದಿದೆ. ಈ ಬಗ್ಗೆ ಕೃಷಿಕರು ಆತಂಕ ಪಡಬೇಕಾಗಿಲ್ಲ. ಈ ಬಗ್ಗೆ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ.

ಡಾ. ಸೆಲ್ವಮಣಿ,  ಸಿಇಒ ದ.ಕ. ಜಿಲ್ಲಾ ಪಂಚಾಯತ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News