ಏರ್ ಇಂಡಿಯಾ ಸಿಬ್ಬಂದಿಗೆ ಹಾರಾಟಕ್ಕೆ ಮುನ್ನ ಕೋವಿಡ್-19 ನೆಗೆಟಿವ್ ವರದಿ ಕಡ್ಡಾಯ

Update: 2020-05-31 13:39 GMT

ಹೊಸದಿಲ್ಲಿ,ಮೇ 31: ತನ್ನ ಪೈಲಟ್‌ಗಳು ಮತ್ತು ಕ್ಯಾಬಿನ್ ಸಿಬ್ಬಂದಿ ಹಾರಾಟ ಕರ್ತವ್ಯವನ್ನು ನಿರ್ವಹಿಸುವ ಮುನ್ನ ಕೋವಿಡ್-19 ಪರೀಕ್ಷೆಗೊಳಗಾಗುವುದನ್ನು ಮತ್ತು ನೆಗೆಟಿವ್ ವರದಿ ಹೊಂದಿರುವುದನ್ನು ಏರ್ ಇಂಡಿಯಾ ಕಡ್ಡಾಯಗೊಳಿಸಿದೆ. ಶನಿವಾರ ದಿಲ್ಲಿ-ಮಾಸ್ಕೋ ಹಾರಾಟದಲ್ಲಿದ್ದ ತನ್ನ ಪೈಲಟ್ ಕೊರೋನ ವೈರಸ್ ಸೋಂಕಿಗೆ ತುತ್ತಾಗಿದ್ದು ಪತ್ತೆಯಾದ ಬಳಿಕ ಏರ್ ಇಂಡಿಯಾ ಈ ಆದೇಶವನ್ನು ಹೊರಡಿಸಿದೆ.

ವಂದೇ ಭಾರತ ಅಭಿಯಾನದಡಿ ರಷ್ಯಾದಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರನ್ನು ಸ್ವದೇಶಕ್ಕೆ ವಾಪಸ್ ಕರೆತರಲು ಏರ್‌ಇಂಡಿಯಾದ ವಿಮಾನವು ಶನಿವಾರ ಬೆಳಿಗ್ಗೆ ದಿಲ್ಲಿಯಿಂದ ಮಾಸ್ಕೋಕ್ಕೆ ಪ್ರಯಾಣ ಆರಂಭಿಸಿತ್ತು. ಆದರೆ ವಿಮಾನ ಟೇಕ್ ಆಫ್ ಆದ ಬಳಿಕ ಅದರ ಪೈಲಟ್ ಸೋಂಕು ಹೊಂದಿದ್ದು ಗ್ರೌಂಡ್ ಸಿಬ್ಬಂದಿಗೆ ಗೊತ್ತಾಗಿತ್ತು. ಹೀಗಾಗಿ ಮಾರ್ಗಮಧ್ಯದಿಂದಲೇ ವಿಮಾನವನ್ನು ದಿಲ್ಲಿಗೆ ವಾಪಸ್ ಕರೆಸಲಾಗಿತ್ತು. ಸಿಬ್ಬಂದಿಗಳ ಹಾರಾಟ ಪೂರ್ವ ಕೋವಿಡ್-19 ಪರೀಕ್ಷಾ ವರದಿಗಳನ್ನು ಪರಿಶೀಲಿಸುವ ತಂಡದ ಕಣ್ತಪ್ಪಿನಿಂದ ಈ ಪ್ರಮಾದ ಸಂಭವಿಸಿತ್ತು.

ಕೋವಿಡ್-19 ಪರೀಕ್ಷೆಗಾಗಿ ಸಂಸ್ಥೆಯು ಸಾಕಷ್ಟು ವೆಚ್ಚವನ್ನು ಮಾಡುತ್ತಿದೆ,ಶ್ರಮವನ್ನೂ ಹಾಕುತ್ತಿದೆ. ಇದು ಇತ್ತೀಚಿಗೆ ಸಂಸ್ಥೆಯು ಕೈಗೊಂಡಿರುವ ಪ್ರಕ್ರಿಯೆಯಾಗಿದ್ದರಿಂದ ಮತ್ತು ಕಚೇರಿಯಲ್ಲಿ ಸಿಬ್ಬಂದಿಗಳ ಕೊರತೆಯಿಂದಾಗಿ ಈ ವಿಷಯದಲ್ಲಿ ಕಣ್ತಪ್ಪು ಸಂಭವಿಸಿರುವ ಸಾಧ್ಯತೆಯಿದೆ ಎಂದು ಏರ್ ಇಂಡಿಯಾದ ಕಾರ್ಯಕಾರಿ ನಿರ್ದೇಶಕ (ಕಾರ್ಯಾಚರಣೆಗಳು) ಕ್ಯಾ.ಆರ್.ಎಸ್.ಸಂಧು ಅವರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News