ಗೃಹರಕ್ಷಕರಿಗೆ ಸರಕಾರದಿಂದ ದ್ರೋಹ : ಸಿಐಟಿಯು ಆರೋಪ

Update: 2020-05-31 17:46 GMT

ಮಂಗಳೂರು, ಮೇ 31: ಹಲವು ವರ್ಷಗಳಿಂದ ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ಹಗಲು ರಾತ್ರಿ ಎನ್ನದೆ ಕರ್ತವ್ಯ ನಿರ್ವಹಿಸುತ್ತಿದ್ದ ಗೃಹ ರಕ್ಷಕದಳ ಸಿಬ್ಬಂದಿಗಳನ್ನು ಕರ್ತವ್ಯದಿಂದ ರಾಜ್ಯ ಸರಕಾರ ಜೂನ್ ರಿಂದ ಮುಕ್ತಗೊಳಿಸಿ ಆದೇಶಿಸುವ ಮೂಲಕ ದ್ರೋಹ ಎಸಗಿದೆ ಎಂದು ಸಿಐಟಿಯು ಬೆಳ್ತಂಗಡಿ ತಾಲೂಕು ಸಮಿತಿ ಆರೋಪಿಸಿದೆ.

ಗೃಹ ರಕ್ಷಕದಳದ ಸಿಬ್ಬಂದಿಗಳು ಹಗಲು ರಾತ್ರಿ, ಮಳೆ, ಗಾಳಿ, ಬಿಸಿಲು ಎನ್ನದೆ ಪೊಲೀಸ್ ಠಾಣೆಗಳಲ್ಲಿ ಹಲವು ವರ್ಷಗಳಿಂದ ದುಡಿಯುತ್ತಿದ್ದರು. ಈಗ ಏಕಾಏಕಿ ರಾಜ್ಯ ಸರಕಾರ ಅವರನ್ನು ಪೊಲೀಸ್ ಠಾಣೆಗಳ ಸೇವೆಯಿಂದ ಕಿತ್ತೆಸೆಯುವ ಮೂಲಕ ಬೀದಿಗೆಸೆಯುತ್ತಿರುವುದು ಖಂಡನೀಯ. ಅತ್ಯಂತ ಬಡ ಕುಟುಂಬಗಳಿಗೆ ಸೇರಿದ ವಿದ್ಯಾವಂತ ನಿರುದ್ಯೋಗಿ ಯುವಕ /ಯುವತಿಯರ ಉದ್ಯೋಗಕ್ಕಾಗಿ ಗೃಹ ರಕ್ಷಕದಳದಲ್ಲಿ ದುಡಿಯುತ್ತಿ ದ್ದರು. ಇದರಿಂದಾಗಿ ಹಲವು ಕುಟುಂಬಗಳ ಜೀವನ ಸಾಗುತ್ತಿತ್ತು. ಆದರೆ ರಾಜ್ಯ ಸರಕಾರ ಕೊರೋನ ಲಾಕ್‌ಡೌನ್ ಸಂದರ್ಭದಲ್ಲಿ ಅವರ ಸೇವೆಯನ್ನು ಶ್ಲಾಘಿಸುವ ಬದಲಾಗಿ ಅವರ ಅನ್ನದ ಬಟ್ಟಲನ್ನು ಕಸಿಯುವ ಮೂಲಕ ದ್ರೋಹ ಬಗೆದಿದೆ. ಸರಕಾರ ತನ್ನ ಆದೇಶವನ್ನು ಹಿಂದಕ್ಕೆ ಪಡೆದು ಗೃಹ ರಕ್ಷಕದಳದ ಸಿಬ್ಬಂದಿಯನ್ನು ಪುನಃ ನಿಯೋಜಿಸೇಕು ಎಂದು ಸಮಿತಿ ಆಗ್ರಹಿಸಿದೆ.

ಸರಕಾರ ಈ ಬಗ್ಗೆ ನಿರ್ಲಕ್ಷ ತಾಳಿದರೆ ಹೋರಾಟ ಮಾಡುವುದಾಗಿ ಸಿಐಟಿಯು ಬೆಳ್ತಂಗಡಿ ತಾಲೂಕು ಸಮಿತಿಯ ಅಧ್ಯಕ್ಷ ನ್ಯಾಯವಾದಿ ಶಿವ ಕುಮಾರ್ ಎಸ್.ಎಂ., ಕಾರ್ಯದರ್ಶಿ ವಸಂತ ನಡ, ಉಪಾಧ್ಯಕ್ಷ ಶೇಖರ್ ಲಾಯಿಲ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News