ಎರಡು ದಿನಗಳಲ್ಲಿ ರಾಜ್ಯಕ್ಕೆ ಮುಂಗಾರು ಪ್ರವೇಶ : ಹವಾಮಾನ ಇಲಾಖೆ

Update: 2020-06-01 13:45 GMT

ಮಂಗಳೂರು : ಈ ಬಾರಿ ಜೂನ್ ಒಂದರದು ಮುಂಗಾರು ಕೇರಳ ತೀರವನ್ನು ಪ್ರವೇಶಿಸಿದೆ. ಮುಂದಿನ ಎರಡು ಮೂರು ದಿನಗಳಲ್ಲಿ ಮಂಗಳೂರು ಸೇರಿದಂತೆ ರಾಜ್ಯದ ಪಶ್ಚಿಮ ಕರಾವಳಿಯ ಮೂಲಕ ರಾಜ್ಯವನ್ನು ಪ್ರವೇಶಿಸಲಿದೆ ಎಂದು  ಹವಾಮಾನ ಇಲಾಖೆ ತಿಳಿಸಿದೆ.

ಸಾಮಾನ್ಯವಾಗಿ ಜೂನ್ ಒಂದರಂದು ಕೇರಳಕ್ಕೆ ಮುಂಗಾರು ಪ್ರವೇಶಿಸಬಹುದೆಂದು ನಿರೀಕ್ಷೆ ಮಾಡಲಾಗುತ್ತದೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಮುಂಗಾರು ಕೆಲ ದಿನಗಳ ಕಾಲ ವಿಳಂಬವಾಗುತ್ತಿದೆ. ಆದರೆ ಈ ಬಾರಿ ಮುಂಗಾರು ಅಂದಾಜಿಸಲಾದ ಎರಡು ದಿನಗಳಿಗೆ ಮುಂಚಿತವಾಗಿ ಈಶಾನ್ಯ ಮಾರುತದ ಮೂಲಕ ಅಂಡಮಾನ್ ನಿಕೋಬಾರ್ ದ್ವೀಪಗಳನ್ನು ಹಾದು ಕೇರಳಕ್ಕೆ ಕಾಲಿಟ್ಟಿದೆ. ಈ ದಶಕದಲ್ಲಿ ಇದು ಎರಡನೇ ಬಾರಿ ಈ ರೀತಿ ಜೂನ್ ಒಂದರಂದೇ ಆಗಮಿಸಿದಂತಾಗುತ್ತದೆ. ಮುಂಗಾರು ನಿರಂತರವಾದರೆ ಮುಂದಿನ ನಾಲ್ಕು ತಿಂಗಳು ರಾಜ್ಯದಲ್ಲಿ ಮಳೆಗಾಲದ ನಿರೀಕ್ಷೆ ಮಾಡಲಾಗಿದೆ. ಈ ಹಿಂದೆ 2013ರಲ್ಲಿ ಜೂನ್ ಒಂದರಂದು ಕೇರಳ ಪ್ರವೇಶಿಸಿತ್ತು. ಪ್ರಸ್ತುತ ಕೇರಳದ 9 ಜಿಲ್ಲೆಗಳಲ್ಲಿ ಭಾರೀ ಮಳೆಯ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದೇ ವೇಳೆ ಅರಬ್ಬಿ ಸಮುದ್ರದಲ್ಲಿ ರೂಪುಗೊಂಡಿರುವ ವಾಯುಭಾರ ಕುಸಿತದಿಂದ  ಚಂಡಮಾರುತ ರೂಪುಗೊಳ್ಳುವ ಸಾಧ್ಯತೆ ಇದೆ. ಈ ಚಂಡಮಾರುತ ಕೂಡ ಮುಂಗಾರುವಿನ ಚಲನೆಗೆ ಪೂರಕವಾಗಿದೆಯೆಂದು ಹವಾಮಾನ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News