ರಣಾಂಗಣವಾದ ಶ್ವೇತಭವನ ಆವರಣ: ಪ್ರತಿಭಟನಕಾರರು, ಪೊಲೀಸರ ನಡುವೆ ಘರ್ಷಣೆ

Update: 2020-06-01 16:43 GMT

ವಾಶಿಂಗ್ಟನ್, ಜೂ. 1: ಪೊಲೀಸರ ಬಂಧನದ ವೇಳೆ ಕರಿಯ ವ್ಯಕ್ತಿಯೋರ್ವ ಮೃತಪಟ್ಟಿರುವುದನ್ನು ಪ್ರತಿಭಟಿಸಿ ರವಿವಾರ ರಾತ್ರಿ ಅಮೆರಿಕದ ಅಧ್ಯಕ್ಷರ ಕಚೇರಿ ಶ್ವೇತಭವನದ ಹೊರಗೆ ಜನರು ಪ್ರದರ್ಶನ ನಡೆಸಿದಾಗ ಸ್ಥಳವು ವಸ್ತುಶಃ ರಣಾಂಗಣವಾಗಿ ಪರಿವರ್ತನೆಯಾಯಿತು. ಪ್ರತಿಭಟನಕಾರರು ದಾಂಧಲೆಗೆ ಮುಂದಾದಾಗ ಪೊಲೀಸರು ಅವರ ಮೇಲೆ ಬೆತ್ತ ಪ್ರಹಾರ ಮಾಡಿದರು.

ಪ್ರತಿಭಟನಕಾರರನ್ನು ಭಯೋತ್ಪಾದಕರು ಎಂಬುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಣ್ಣಿಸಿರುವುದರಿಂದ ಆಕ್ರೋಶಗೊಂಡ ಪ್ರತಿಭಟನಕಾರರು ಶ್ವೇತಭವನದ ಪಕ್ಕದ ಸಣ್ಣ ಉದ್ಯಾನವೊಂದರಲ್ಲಿ ಜಮಾಯಿಸಿ ಪ್ರತಿಭಟಿಸಿದರು.

ಉದ್ಯಾನವನದಲ್ಲಿ ಪ್ರತಿಭಟನೆಯ ವೇಳೆ ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ಹಿಂಸಾತ್ಮಕ ಸಂಘರ್ಷ ಆಗಾಗ ಸ್ಫೋಟಿಸಿತು. ಪ್ರತಿಭಟನಕಾರರು ಉದ್ಯಾನವನದಲ್ಲಿ ದೊಡ್ಡದಾಗಿ ಬೆಂಕಿ ಹೊತ್ತಿಸಿದರು ಹಾಗೂ ಸೊತ್ತುಗಳನ್ನು ಧ್ವಂಸಗೊಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸರು ಪ್ರತಿಭಟನಕಾರರತ್ತ ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದರು, ಮೆಣಸಿನ ಪುಡಿಯ ದ್ರಾವಣವನ್ನು ಸಿಂಪಡಿಸಿದರು ಹಾಗೂ ಗ್ರೆನೇಡ್‌ಗಳನ್ನು ಸಿಡಿಸಿದರು.

ಕಳೆದ ಸೋಮವಾರ ಜಾರ್ಜ್ ಫ್ಲಾಯ್ಡ್ ಎಂಬ ಕರಿಯ ವ್ಯಕ್ತಿಯನ್ನು ಬಿಳಿಯ ಪೊಲೀಸರು ಬಂಧಿಸುವ ವೇಳೆ ಆರೋಪಿಯ ಸಾವು ಸಂಭವಿಸಿತ್ತು. ಫ್ಲಾಯ್ಡ್ ಗೆ ಕೈತೋಳ ತೊಡಿಸಿದ ಪೊಲೀಸ್ ಸಿಬ್ಬಂದಿಯೊಬ್ಬ ಆತನನ್ನು ನೆಲಕ್ಕೆ ಕೆಡವಿ ಆತನ ಕುತ್ತಿಗೆಯ ಮೇಲೆ ಮಂಡಿಯೂರಿ ಕುಳಿತಿರುವುದನ್ನು ವೀಡಿಯೊವೊಂದು ತೋರಿಸಿದೆ. “ನನಗೆ ಉಸಿರಾಡಲು ಆಗುತ್ತಿಲ್ಲ, ಕುತ್ತಿಗೆಯಿಂದ ಕಾಲು ತೆಗೆಯಿರಿ” ಎಂದು ಪದೇ ಪದೇ ವಿನಂತಿಸಿದರೂ ಪೊಲೀಸ್ ಅಧಿಕಾರಿ ವಿಸುಕಾಡಲಿಲ್ಲ ಎನ್ನಲಾಗಿದೆ. ಪೊಲೀಸ್ ಸಿಬ್ಬಂದಿಯು ಒಂಬತ್ತು ನಿಮಿಷಗಳ ಬಳಿಕ ಕಾಲು ತೆಗೆದು ಏಳುವಂತೆ ಫ್ಲಾಯ್ಡ್ ಗೆ ಸೂಚಿಸಿದಾಗ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು.

ಅದರ ಬೆನ್ನಿಗೇ, ಕರಿಯ ವರ್ಣೀಯರ ವಿರುದ್ಧ ಅಮೆರಿಕದ ಆಡಳಿತ ವ್ಯವಸ್ಥೆಯಲ್ಲಿ ಬೇರು ಬಿಟ್ಟಿರುವ ಪೂರ್ವಾಗ್ರಹವನ್ನು ಪ್ರತಿಭಟಿಸಿ ಜನರು ಭಾರೀ ಸಂಖ್ಯೆಯಲ್ಲಿ ಬೀದಿಗಿಳಿದಿದ್ದಾರೆ.

ಅಂಗಡಿಗಳನ್ನು ದೋಚಿದ ಲೂಟಿಕೋರರು

ಫಿಲಡೆಲ್ಫಿಯದಲ್ಲಿ ರವಿವಾರ ಲೂಟಿಕೋರರು ಅಂಗಡಿಗಳನ್ನು ದೋಚಿದ್ದಾರೆ.

ಲಾಸ್ ಏಂಜಲಿಸ್‌ನ ಉಪನಗರ ಸಾಂತಾ ಮೋನಿಕದ ಸಮುದ್ರ ಬದಿಯ ಶಾಪಿಂಗ್ ಸೆಂಟರ್‌ನಲ್ಲೂ ಅಂಗಡಿಗಳನ್ನು ದೋಚಲಾಗಿದೆ ಎಂದು ವರದಿಯಾಗಿದೆ. ಲಾಸ್ ಏಂಜಲಿಸ್‌ನಲ್ಲಿ ಪೊಲೀಸರು ರವಿಚಾರ ಸಂಜೆ 4 ಗಂಟೆಯಿಂದ ಸೋಮವಾರ ಮುಂಜಾನೆಯವರೆಗೆ ಕರ್ಫ್ಯೂ ವಿಧಿಸಿದ್ದಾರೆ.

ಟ್ರಂಪ್‌ರನ್ನು ಭೂಗತ ಬಂಕರ್‌ಗೆ ಕರೆದೊಯ್ದ ಭದ್ರತಾ ಸಿಬ್ಬಂದಿ

ಪ್ರತಿಭಟನಕಾರರು ಶ್ವೇತಭವನದ ಹೊರಗೆ ಜಮಾಯಿಸಲು ಆರಂಭಿಸುತ್ತಿದ್ದಂತೆಯೇ, ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಅವರ ರಕ್ಷಣಾ ಸಿಬ್ಬಂದಿ ಶ್ವೇತಭವನದ ಭೂಗತ ಬಂಕರ್‌ಗೆ ಕರೆದೊಯ್ದರು ಎಂದು ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.

ಬಂಕರ್‌ನಲ್ಲಿ ಸುಮಾರು ಒಂದು ಗಂಟೆ ಕಳೆದ ಬಳಿಕ, ಅವರನ್ನು ಮತ್ತೆ ಮೇಲೆ ತರಲಾಯಿತು ಎಂದು ಮೂಲವೊಂದನ್ನು ಉಲ್ಲೇಖಿಸಿ ಪತ್ರಿಕೆ ತಿಳಿಸಿದೆ.

ಆದರೆ, ಟ್ರಂಪ್ ಜೊತೆಗೆ ಅವರ ಪತ್ನಿ ಹಾಗೂ ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಮತ್ತು ಕಿರಿಯ ಮಗ ಬ್ಯಾರನ್ ಟ್ರಂಪ್‌ರನ್ನೂ ಭೂಗತ ಬಂಕರ್‌ಗೆ ಕರೆದೊಯ್ಯಲಾಯಿತೇ ಎನ್ನುವುದು ಗೊತ್ತಾಗಿಲ್ಲ.

ಅಮೆರಿಕ ನೋವಿನಲ್ಲಿದೆ: ಜೋ ಬೈಡನ್

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಜೋ ಬೈಡನ್ ರವಿವಾರ ಡೆಲವೇರ್‌ನಲ್ಲಿನ ಜನಾಂಗೀಯ ತಾರತಮ್ಯ ವಿರೋಧಿ ಪ್ರತಿಭಟನೆಯ ಸ್ಥಳಕ್ಕೆ ಭೇಟಿ ನೀಡಿದರು.

‘‘ನಾವು ಈಗ ನೋವು ಅನುಭವಿಸುತ್ತಿರುವ ದೇಶವಾಗಿದ್ದೇವೆ. ಆದರೆ, ಈ ನೋವು ನಮ್ಮನ್ನು ನಾಶಗೊಳಸಲು ಬಿಡಬಾರದು’’ ಎಂದು ಬಳಿಕ ಟ್ವಿಟರ್‌ನಲ್ಲಿ ಅವರು ಹೇಳಿದರು. ಪ್ರತಿಭಟನಾ ಸ್ಥಳದಲ್ಲಿ ಕರಿಯ ಕುಟುಂಬವೊಂದರ ಜೊತೆ ತಾನು ಮಾತನಾಡುತ್ತಿರುವ ಚಿತ್ರವೊಂದನ್ನು ಅವರು ಈ ಸಂದೇಶದ ಜೊತೆಗೆ ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News