ಉಡುಪಿ: ಒಂದೇ ದಿನದಲ್ಲಿ 73 ಕೊರೋನ ಪಾಸಿಟಿವ್ ಪ್ರಕರಣ ಪತ್ತೆ ; 4 ಪೊಲೀಸ್ ಸಿಬ್ಬಂದಿಗಳಲ್ಲೂ ಸೋಂಕು

Update: 2020-06-01 15:25 GMT

ಉಡುಪಿ, ಜೂ.1: ಕರಾವಳಿ ಜಿಲ್ಲೆಗೆ ಮಳೆಗಾಲ ಕಾಲಿಡುವ ಮೊದಲೇ ಕೊರೋನ ವೈರಸ್‌ನ ಉಪಟಳ ಮಿತಿಮೀರುವ ಎಲ್ಲಾ ಲಕ್ಷಣ ಕಾಣಿಸುತ್ತಿದೆ. ಸೋಮವಾರ ಒಂದೇ ದಿನದಲ್ಲಿ ಒಟ್ಟು 73 ಮಂದಿಯಲ್ಲಿ ವೈರಸ್‌ನ ಸೋಂಕು ಪತ್ತೆಯಾಗುವ ಮೂಲಕ ಜಿಲ್ಲೆ ಹೊಸ ದಾಖಲೆ ಯನ್ನು ಬರೆದಿದೆ. ಈ ಮೂಲಕ ಸೋಂಕಿತರ ಸಂಖ್ಯೆ 260ಕ್ಕೇರಿದೆ.

ಜಿಲ್ಲೆಯೀಗ ಬೆಂಗಳೂರು ನಗರ, ಕಲಬುರಗಿ, ಯಾದಗಿರಿ ಹಾಗೂ ಮಂಡ್ಯದ ಬಳಿಕ ಐದನೇ ಸ್ಥಾನದಲ್ಲಿದೆ. ನಾಳೆ ಇನ್ನೂ ಹೆಚ್ಚು ಪಾಸಿಟಿವ್ ಪ್ರಕರಣ ಬರುವ ನಿರೀಕ್ಷೆ ಇದ್ದು, ಜಿಲ್ಲೆ ಮೂರು ಅಥವಾ ಎರಡನೇ ಸ್ಥಾನಕ್ಕೆ ನೆಗೆದರೂ ಅಚ್ಚರಿ ಇಲ್ಲ.

ಇಂದು ಸೋಂಕು ಪತ್ತೆಯಾದ 73 ಮಂದಿಯಲ್ಲಿ ಐವರು ಮಕ್ಕಳು ಸೇರಿದಂತೆ 51 ಮಂದಿ ಪುರುಷರು ಹಾಗೂ 21 ಮಂದಿ ಮಹಿಳೆಯರಿದ್ದಾರೆ. ಇವರೆಲ್ಲರೂ ಮನೆಯ ಕ್ವಾರಂಟೈನ್‌ನಲ್ಲಿದ್ದು ಈವರೆಗೆ 68 ಮಂದಿಯನ್ನು ಸಂಪರ್ಕಿಸಿ ಜಿಲ್ಲೆಯ ಮೂರು ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರ್ಪಡೆ ಗೊಳಿಸುವ ಕಾರ್ಯ ನಡೆಯುತ್ತಿದೆ. ಉಳಿದ ಐವರು ನಮ್ಮ ದೂರವಾಣಿ ಸಂಪರ್ಕಕ್ಕೆ ಇನ್ನೂ ಸಿಕ್ಕಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುಧೀರ್‌ ಚಂದ್ರ ಸೂಡ ತಿಳಿಸಿದ್ದಾರೆ.

ಈಗ ಮಾಹಿತಿ ಸಿಕ್ಕಿರುವ 68 ಮಂದಿಯಲ್ಲಿ ನಾಲ್ವರು ಡಿಎಆರ್‌ನ ಪೊಲೀಸ್ ಸಿಬ್ಬಂದಿಗಳಿದ್ದು, ಇನ್ನು ನಾಲ್ವರು ಕೊಲ್ಲಿ ರಾಷ್ಟ್ರಗಳಿಂದ ಬಂದವ ರಾಗಿದ್ದಾರೆ. ಇಂದು ಸಹ ಮಹಾರಾಷ್ಟ್ರದಿಂದ ಬಂದ ಒಟ್ಟು 65 ಮಂದಿ ಪಾಸಿಟಿವ್ ಆಗಿದ್ದಾರೆ ಎಂದು ಡಾ.ಸೂಡ ತಿಳಿಸಿದರು.

ಇದರಿಂದ ಜಿಲ್ಲೆಯಲ್ಲೀಗ ಒಟ್ಟು 260 ಮಂದಿಯಲ್ಲಿ ಕೊರೋನ ಸೋಂಕು ಪತ್ತೆಯಾದಂತಾಗಿದೆ. ಇವರಲ್ಲಿ ಚಿಕಿತ್ಸೆಯ ನಂತರ ಬಿಡುಗಡೆ ಗೊಂಡವರ ಸಂಖ್ಯೆ 64.ಪಾಸಿಟಿವ್ ಆದ ಒಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದರೆ, ಒಟ್ಟಾರೆಯಾಗಿ 195 ಸಕ್ರಿಯ ಪ್ರಕರಣ ಜಿಲ್ಲೆಯಲ್ಲಿದೆ.

ಇಂದು ಪಾಸಿಟಿವ್ ಪತ್ತೆಯಾದವರಲ್ಲಿ ರೋಗದ ಗುಣಲಕ್ಷಣ ಇಲ್ಲದವರನ್ನು ಕುಂದಾಪುರ ಹಾಗೂ ಕಾರ್ಕಳದ ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಿದ್ದರೆ, ಕೊರೋನ ಲಕ್ಷಣ ಇರುವವರು, ಗರ್ಭಿಣಿಯರು, ಮಕ್ಕಳು ಹಾಗೂ 60ವರ್ಷ ಮೇಲ್ಪಟ್ಟ ಹಿರಿಯರನ್ನು ಉಡುಪಿಯ ಡಾ. ಟಿಎಂಎ ಪೈ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದರು.

570 ಸ್ಯಾಂಪಲ್ ನೆಗೆಟಿವ್: ಸೋಮವಾರ 643 ಸ್ಯಾಂಪಲ್‌ಗಳ ವರದಿ ಬಂದಿದ್ದು, ಇವುಗಳಲ್ಲಿ 73 ಪಾಸಿಟಿವ್ ಆಗಿವೆ. ಉಳಿದ 570 ಸೋಂಕಿಗೆ ನೆಗೆಟಿವ್ ಆಗಿವೆ. ಇಂದು ಕೇವಲ ಇಬ್ಬರ ಗಂಟಲುದ್ರವವನ್ನು ಪರೀಕ್ಷೆಗಾಗಿ ಪಡೆಯಲಾಗಿದ್ದು, ಒಬ್ಬರು ಉಸಿರಾಟದ ತೊಂದರೆ, ಇನ್ನೊಬ್ಬರು ಶೀತಜ್ವರದಿಂದ ಬಳಲುವವರು ಎಂದು ಡಿಎಚ್‌ಓ ತಿಳಿಸಿದರು.

ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಗಂಟಲುದ್ರವದ ಮಾದರಿಗಳ ಸಂಖ್ಯೆ ಈಗ 12,504ಕ್ಕೇರಿದೆ. ಇವುಗಳಲ್ಲಿ ಸೋಮವಾರ ದವರೆಗೆ ಒಟ್ಟು 5888ರ ಪರೀಕ್ಷಾ ವರದಿ ಬಂದಿವೆ. ಇದರಲ್ಲಿ 5628 ನೆಗೆಟಿವ್ ಆಗಿದ್ದರೆ, ಇಂದಿನ 73 ಸೇರಿ ಒಟ್ಟು 187 ಸ್ಯಾಂಪಲ್‌ಗಳು ಪಾಸಿಟಿವ್ ಆಗಿ ಬಂದಿವೆ. ಇನ್ನೂ 6616 ಸ್ಯಾಂಪಲ್‌ಗಳ ವರದಿ ಬರೇಕಾಗಿದೆ ಎಂದು ಅವರು ಹೇಳಿದರು.

ಇಂದು ರೋಗದ ಗುಣಲಕ್ಷಣದೊಂದಿಗೆ ಆರು ಮಂದಿ ಐಸೋಲೇಷನ್ ವಾರ್ಡಿಗೆ ದಾಖಲಾಗಿದ್ದಾರೆ. ತಲಾ ಮೂವರು ಪುರುಷರು ಮತ್ತು ಮಹಿಳೆ ಯರು ಇದರಲ್ಲಿ ಸೇರಿದ್ದಾರೆ. ಕೊರೋನ ಶಂಕಿತರು ಒಬ್ಬರು, ಉಸಿರಾಟದ ತೊಂದರೆಯವರು ಮೂವರು ಹಾಗೂ ಶೀತಜ್ವರದವರು ಇಬ್ಬರು ಇದರಲ್ಲಿ ಸೇರಿದ್ದಾರೆ.

ವಿವಿಧ ಆಸ್ಪತ್ರೆಗಳ ಐಸೋಲೇಶನ್ ವಾರ್ಡಿನಿಂದ ಇಂದು 10 ಮಂದಿ ಬಿಡುಗಡೆಗೊಂಡಿದ್ದು, 65 ಮಂದಿ ಇನ್ನೂ ವೈದ್ಯರ ನಿಗಾದಲ್ಲಿದ್ದಾರೆ. ಈವರೆಗೆ ಒಟ್ಟು 719 ಮಂದಿ ಐಸೋಲೇಷನ್ ವಾರ್ಡಿನಿಂದ ಬಿಡುಗಡೆಗೊಂಡಿದ್ದಾರೆ ಎಂದರು.

ಜಿಲ್ಲೆಯಲ್ಲಿ ಕೊರೋನ ಸೋಂಕಿನ ಗುಣಲಕ್ಷಣದ 14 ಇಂದು ನೊಂದಣಿ ಗೊಂಡಿದ್ದು, ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 4955 ಮಂದಿ ಯನ್ನು ಕೊರೋನ ತಪಾಸಣೆಗಾಗಿ ನೋಂದಣಿ ಮಾಡಿಕೊಂಡಂತಾಗಿದೆ. 3995 ಮಂದಿ (ಇಂದು 126) 28 ದಿನಗಳ ನಿಗಾವಣೆ ಹಾಗೂ 4776 ಮಂದಿ 14 ದಿನಗಳ ನಿಗಾವಣೆಯನ್ನು ಪೂರೈಸಿದ್ದಾರೆ.

ಜಿಲ್ಲೆಯಲ್ಲಿ ಈಗ 61 ಮಂದಿ ಹೋಮ್ ಕ್ವಾರಂಟೈನ್‌ನಲ್ಲೂ, 87 ಮಂದಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಹಾಗೂ 53 ಮಂದಿ ಆಸ್ಪತ್ರೆ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಡಾ. ಸುಧೀರ್ ‌ಚಂದ್ರ ಸೂಡ ತಿಳಿಸಿದರು.

ಪೊಲೀಸ್ ಇಲಾಖೆಗೆ ಮತ್ತೊಂದು ಆಘಾತ

ಕೊರೋನ ವಿರುದ್ಧದ ಹೋರಾಟದಲ್ಲಿ ‘ಕೊರೋನ ವಾರಿಯರ್’ ಎನಿಸಿರುವ ಪೊಲೀಸ್ ಸಿಬ್ಬಂದಿಗಳಲ್ಲಿ ನಾಲ್ವರು ಇಂದು ಮತ್ತೆ ಕೊರೋನ ಸೋಂಕಿಗೆ ಪಾಸಿಟಿವ್ ಆಗಿದ್ದಾರೆ. ಜಿಲ್ಲಾ ಸಶಸ್ತ್ರ ಪೊಲೀಸ್ ಮೀಸಲು ಪಡೆಯ (ಡಿಎಆರ್) ಡಿವೈಎಸ್ಪಿ ಇದರಲ್ಲಿ ಸೇರಿರುವುದು ಇಲಾಖೆಯಲ್ಲಿ ಆಘಾತ ಮೂಡಿಸಿದೆ.

ಡಿಎಆರ್‌ನ ಡಿವೈಎಸ್ಪಿ ಸೇರಿದಂತೆ ಒಟ್ಟು ನಾಲ್ವರು ಡಿಎಆರ್ ಸಿಬ್ಬಂದಿಗಳು ಇಂದಿನ ಪಾಸಿಟಿವ್‌ನಲ್ಲಿ ಸೇರಿದ್ದಾರೆ. ನಿನ್ನೆ ಶಂಕರನಾರಾಯಣ ಠಾಣೆಯ ಮಹಿಳಾ ಪೊಲೀಸ್ ಒಬ್ಬರು ಪಾಸಿಟಿವ್ ಆಗಿದ್ದರು. ಇದಕ್ಕೆ ಮೊದಲು ಅಜೆಕಾರು, ಕಾರ್ಕಳ ಗ್ರಾಮಾಂತರ ಹಾಗೂ ಬ್ರಹ್ಮಾವರ ಠಾಣೆಯ ಸಿಬ್ಬಂದಿ ಗಳಲ್ಲದೇ ಎಸ್ಪಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತಿದ್ದ ಒಬ್ಬ ಡಿಎಆರ್ ಸಿಬ್ಬಂದಿಗೂ ಸೋಂಕು ತಗಲಿತ್ತು.

ಇಂದು ಡಿಎಆರ್‌ನ ನಾಲ್ವರಿಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ, ಕೇಂದ್ರ ಕಚೇರಿಯನ್ನು ಸ್ಯಾನಟೈಸ್ ಮಾಡಲಾಯಿತು. ಅಲ್ಲದೇ ಅವರು ವಾಸವಾಗಿದ್ದ ಕ್ವಾರ್ಟರ್ಸ್‌ನ್ನು ಸೀಲ್‌ಡೌನ್ ಮಾಡಲಾಗಿದ್ದು, ಅವರೆಲ್ಲರ ಕುಟುಂಬಿಕರು ಹಾಗೂ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್‌ ನಲ್ಲಿರಿಸಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News