ಉಡುಪಿ: ಜೂ.3ರಂದು ಭಾರತೀಯ ರೆಡ್‌ಕ್ರಾಸ್‌ನ ಶತಮಾನೋತ್ಸವ ದಿನಾಚರಣೆ

Update: 2020-06-01 15:28 GMT

ಉಡುಪಿ, ಜೂ.1: ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ಶತಮಾನೋತ್ಸವ ಸಂಭ್ರಮಾಚರಣೆಯು ಉಡುಪಿ ಜಿಲ್ಲಾ ಘಟಕದ ಆಶ್ರಯದಲ್ಲಿ ಇದೇ ಜೂ.3ರ ಬುಧವಾರ ಅಜ್ಜರಕಾಡಿನಲ್ಲಿರುವ ರೆಡ್‌ಕ್ರಾಸ್ ಭವನದಲ್ಲಿ ನಡೆಯಲಿದೆ ಎಂದು ಜಿಲ್ಲಾ ಘಟಕದ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಅವರು ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1920ರ ಮಾ.17ರಂದುಪ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಪಾರ್ಲಿಮೆಂಟ್ ಕಾಯ್ದೆ 15ರ ಅಡಿಯಲ್ಲಿ ಪ್ರಾರಂಭಗೊಂಡಿದ್ದು,ಪ್ರಸ್ತುತ 29 ರಾಜ್ಯ ಹಾಗೂ 7 ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 700ಕ್ಕೂ ಅಧಿಕ ಜಿಲ್ಲಾ ಹಾಗೂ ಉಪಜಿಲ್ಲಾ ಶಾಖೆಗಳನ್ನು ಹೊಂದಿದೆ ಎಂದರು.

ಶತಮಾನೋತ್ಸವ ಆಚರಣೆಯು ಜೂ.3ರ ಬೆಳಗ್ಗೆ 10ಗಂಟೆಗೆ ರೆಡ್‌ಕ್ರಾಸ್ ಭವನದಲ್ಲಿ ನಡೆಯಲಿದ್ದು, ಕರ್ನಾಟಕ ವಿಧಾನ ಪರಿಷತ್‌ನ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ, ರಾಜ್ಯ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿ ದ್ದಾರೆ ಎಂದು ರಾಜೀವ್ ಶೆಟ್ಟಿ ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಶ್ವ ರೆಡ್‌ಕ್ರಾಸ್ ಸಂಸ್ಥೆಯ ಸಂಸ್ಥಾಪಕರಾದ ಸರ್ ಜೀನ್ ಹೆನ್ರಿ ಡ್ಯುನಾಂಟ್‌ರ ನೂತನ ಪ್ರತಿಮೆಯನ್ನು ಅನಾವರಣ ಗೊಳಿಸಲಾಗುವುದು. ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಜಿಲ್ಲೆಯಾದ್ಯಂತ ಗುರುತಿಸಲ್ಪಟ್ಟ ವಿಕಲಚೇತನ ಫಲಾನುಭವಿಗಳಿಗೆ ಕೃತಕ ಕಾಲುಗಳನ್ನು ವಿತರಿಸಲಾಗುವುದು. ಕೊರಗ ಸಮುದಾಯದ ಆಯ್ದ 300 ಫಲಾನುಭವಿಗಳಿಗೆ ದಿನಸಿ ಸಾಮಗ್ರಿಗಳ ಕಿಟ್, ಸೋಪು ಹಾಗೂ ಜಂತುಹುಳ ಮಾತ್ರೆಗಳನ್ನು ವಿತರಿಸಲಾಗುವುದು ಎಂದು ಅವರು ಹೇಳಿದರು.

ಅಲ್ಲದೇ ಕೋವಿಡ್-19 ನಿಯಂತ್ರಣ ಹಾಗೂ ತಪಾಸಣಾ ಕಾರ್ಯಕ್ರಮದಲ್ಲಿ ಜಿಲ್ಲೆಯಾದ್ಯಂತ ನಿರಂತರವಾಗಿ ಭಾಗವಹಿಸಿರುವ ಎಲ್ಲಾ ಕಾರ್ಯ ಕರ್ತರುಗಳಿಗೆ, ವೈದ್ಯರು, ದಾದಿಯರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಪೊಲೀಸ್ ಸಿಬ್ಬಂದಿಗಳು ಅಲ್ಲದೇ ಕೋವಿಡ್ ಸೈನಿಕರನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದೂ ಅವರು ವಿವರಿಸಿದರು.

ಕಾರ್ಯಕ್ರಮವನ್ನು ಕೋವಿಡ್-19ರ ನಿಯಮದಂತೆ ಸ್ಯಾನಿಟೈಸ್ ಮಾಡಿ, ಮಾಸ್ಕ್ ಧರಿಸಿ, ಅಗತ್ಯ ಸುರಕ್ಷತಾ ಅಂತರದ ನಿಬಂಧನೆಯನ್ನು ಪಾಲಿಸಿಕೊಂಡು ಆಯೋಜಿಸಲಾಗುತ್ತದೆ ಎಂದ ಅವರು, ಮುಂದಿನ ಕಾರ್ಯಕ್ರಮಗಳಲ್ಲಿ ಶೀಘ್ರವೇ ಸುರತ್ಕಲ್‌ನ ಎಂಆರ್‌ಪಿಎಲ್‌ನಿಂದ ದೊರೆತ ಸಿಎಸ್‌ಆರ್ ನಿಧಿಯ 55 ಲಕ್ಷ ರೂ.ಗಳಲ್ಲಿ 562 ವಿಕಲಚೇತನ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಅಗತ್ಯವಿರುವ ಸಾಧನ ಸಲಕರಣೆ ಗಳಾದ ಕೃತಕ ಕಾಲು, ಕೈ, ತ್ರಿಚಕ್ರ, ಗಾಲಿಕುರ್ಚಿ, ಕ್ಯಾಲಿಫರ್, ಶ್ರವಣ ಸಾಧನಗಳನ್ನು ವಿತರಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ರೆಡ್‌ಕ್ರಾಸ್‌ನ ಉಪಸಭಾಪತಿ ಡಾ.ಅಶೋಕ್ ಕುಮಾರ್ ವೈ.ಜಿ., ಗೌರವ ಖಜಾಂಚಿ ಟಿ.ಚಂದ್ರಶೇಖರ್, ಗೌರವ ಕಾರ್ಯ ದರ್ಶಿ ಬಾಲಕೃಷ್ಣ ಶೆಟ್ಟಿ ಕೆ. ಅವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News