ಉದ್ಯಾವರ ಪಿಡಿಓ ವರ್ಗಾವಣೆಗೆ ವಿರೋಧ : ಗ್ರಾಪಂ ಕಚೇರಿಗೆ ಬೀಗ ಜಡಿದು ಸದಸ್ಯರಿಂದ ಪ್ರತಿಭಟನೆ

Update: 2020-06-01 17:12 GMT

ಉಡುಪಿ, ಜೂ.1: ಉದ್ಯಾವರ ಗ್ರಾಪಂನ ಪ್ರಭಾರ ಪಿಡಿಓ ವರ್ಗಾವಣೆ ವಿರೋಧಿಸಿ, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಸಹಿತ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತ ಎಲ್ಲ ಸದಸ್ಯರು ಸೇರಿ ಗ್ರಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಿರುವ ಘಟನೆ ಸೋಮವಾರ ನಡೆದಿದೆ.

ಉದ್ಯಾವರ ಗ್ರಾಪಂ ಪ್ರಭಾರ ಪಿಡಿಓ ಪ್ರವೀಣ್ ಡಿಸೋಜ ಅವರನ್ನು ವರ್ಗಾಯಿಸಿ ಆ ಸ್ಥಾನಕ್ಕೆ ಬೇರೆ ಪ್ರಭಾರಿಯನ್ನು ನೇಮಿಸಿರುವುದರಿಂದ ಸಾಕಷ್ಟು ಅನಾನುಕೂಲಗಳು ಆಗಿದ್ದು, ಚುನಾಯಿತ ಸದಸ್ಯರ ಆಡಳಿತಾವಧಿ ಕೇವಲ ಒಂದು ವಾರವಷ್ಟೇ ಬಾಕಿಯಿರುವಾಗ ಪಿಡಿಒ ವರ್ಗಾವಣೆ ಮಾಡಿರುವುದ ರಿಂದ ಕ್ರೀಯಾಯೋಜನೆಗಳ ಅನುಷ್ಠಾನಕ್ಕೆ ಮಂಜೂರಾತಿ ಪಡೆಯಲು ತೊಂದರೆ ಆಗುತ್ತದೆ ಎಂದು ಸದಸ್ಯರು ಆರೋಪಿಸಿದ್ದಾರೆ.

ಈಗಿನ ಪಿಡಿಒ ಅವರನ್ನೇ ಮುಂದುವರಿಸುವಂತೆ ಒತ್ತಾಯಿಸಿ ಗ್ರಾಪಂ ಅಧ್ಯಕ್ಷೆ ಸುಗಂಧಿ ಶೇಖರ್, ಉಪಾಧ್ಯಕ್ಷ ರಿಯಾಝ್ ಪಳ್ಳಿ ಸಹಿತ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತ ಎಲ್ಲಾ 30 ಸದಸ್ಯರು ಸೇರಿಕೊಂಡು ಕಚೇರಿಗೆ ಬೀಗ ಜಡಿದು ಅಲ್ಲೇ ಕುಳಿತು ಧರಣಿ ನಡೆಸಿದರು. ಇದಕ್ಕೆ ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಹಾಗೂ ತಾಪಂ ಸದಸ್ಯೆ ರಜನಿ ಆರ್.ಅಂಚನ್ ಕೂಡಾ ಕೈಜೋಡಿಸಿದರು.

ಸ್ಥಳಕ್ಕೆ ಆಗಮಿಸಿದ ತಾಪಂ ಕಾರ್ಯನಿರ್ವಹಣಾಧಿಕಾರಿ ಮೋಹನ್ ರಾಜ್ ಪ್ರತಿಭಟನಕಾರರನ್ನು ಮನವೊಲಿಸಲು ಪ್ರಯತ್ನಿಸಿದರು. ಆದರೆ ಅವರು, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್ ಸ್ಥಳಕ್ಕೆ ಆಗಮಿಸಿ ಸಮಸ್ಯೆಯನ್ನು ಬಗೆಹರಿಸುವಂತೆ ಪಟ್ಟು ಹಿಡಿದರು. ಬಳಿಕ ಆಗಮಿಸಿದ ಕಾಪು ಶಾಸಕ ಲಾಲಾಜಿ ಮೆಂಡನ್, ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಗಮನಕ್ಕೆ ತಂದರು. ಈ ಕುರಿತು ಸಚಿವರು ನೀಡಿದ ಭರವಸೆ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಕೈಬಿಟ್ಟು ಕಛೇರಿಯ ಬೀಗ ತೆರೆಯಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News