​ರಾಜ್ಯ ಸರಕಾರದಿಂದ ಮನೆಗಳಿಗೆ ಕೊರೋನ ವಿತರಣೆ ಯೋಜನೆ: ಯುಟಿ ಖಾದರ್ ಆರೋಪ

Update: 2020-06-01 17:24 GMT

ಮಂಗಳೂರು, ಜೂ.1: ಕೊರೋನ ನಿಯಂತ್ರಣದಲ್ಲಿ ವಿಫಲವಾಗಿರುವ ರಾಜ್ಯ ಸರಕಾರ ಇದೀಗ ಕ್ವಾರಂಟೈನ್‌ಗೆ ಸಂಬಂಧಿಸಿ ಹೊಸ ಮಾರ್ಗ ಸೂಚಿಯನ್ನು ಅನುಸರಿಸುವ ಮೂಲಕ ಮನೆಗಳಿಗೆ ಕೊರೋನ ವಿತರಣೆಗೆ ಯೋಜನೆ ರೂಪಿಸಿದಂತಿದೆ ಎಂದು ಶಾಸಕ ಹಾಗೂ ಮಾಜಿ ಸಚಿವ ಯು.ಟಿ.ಖಾದರ್ ಆರೋಪಿಸಿದ್ದಾರೆ.

ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿುಲ್ಲಿ ಅವರು ಈ ಆರೋಪ ಮಾಡಿದರು. ಕೊರೋನ ನಿಯಂತ್ರಣಕ್ಕೆ ಸಂಬಂಧಿಸಿ ಜನರು ಸಂಪೂರ್ಣ ಸಹಕಾರ ನೀಡಿದ್ದಾರೆ. ಸಂಪೂರ್ಣ ಲಾಕ್‌ಡೌನ್ ಇದ್ದ ಸಂದರ್ಭ ಹಿಂದೆ ಹೊರ ರಾಜ್ಯ, ವಿದೇಶಗಳಿಂದ ಬರುವವರಿಗೆ ಆರಂಭದಲ್ಲಿ 28 ದಿನ, 14 ದಿನಗಳ ಸಾಂಸ್ಥಿಕ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿತ್ತು. 2 ಬಾರಿ ತಪಾಸಣೆ ವ್ಯವಸ್ಥೆ ಇತ್ತು. ಆಗ ಕೊರೋನ ಸೋಂಕು ಬೇಗ ಪತ್ತೆಯ ಜತೆಗೆ ಹರಡುವಿಕೆಯೂ ನಿಯಂತ್ರಣದಲ್ಲಿತ್ತು.ಹೊಸ ಮಾರ್ಗಸೂಚಿ ಪ್ರಕಾರ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್. ಅದೂ ಸೋಂಕಿನ ಗುಣಲಕ್ಷಣವಿದ್ದಲ್ಲಿ ಮಾತ್ರವೇ ತಪಾಸಣೆ. ಈ ಮಾರ್ಗಸೂಚಿ ಅನುಸರಿಸಿದರೆ ಕೊರೋನ ಸೋಂಕು ರಾಜ್ಯದಲ್ಲಿ ಗಂಭೀರ ಸ್ವರೂಪವನ್ನು ತಾಳಲಿದೆ ಎಂದು ಅವರು ಎಚ್ಚರಿಸಿದರು.

ಸರಕಾರ ಹೊಸ ಮಾರ್ಗಸೂಚಿ ಬಗ್ಗೆ ಪುನರ್‌ವಿಮರ್ಶೆ ಮಾಡಬೇಕು. ಲಾಕ್‌ಡೌನ್ ಸಂದರ್ಭದಲ್ಲಿಯೂ 2 ಬಾರಿ ತಪಾಸಣೆ ಮಾಡುತ್ತಿದ್ದಾಗ, ಇದೀಗ ಅನ್‌ಲಾಕ್ ಆಗಿರುವ ಸಂದರ್ಭ ತಪಾಸಣೆ ಇಲ್ಲವೆಂದರೆ ಲಾಕ್‌ಡೌನ್ ಮಾಡಿ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದು ಯಾಕೆ, ದೇಶದ ಆರ್ಥಿಕ ಪರಿಸ್ಥಿತಿ ಹಾಳು ಮಾಡಿದ್ದು ಯಾಕೆ ? ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಈ ಬಗ್ಗೆ ಸ್ಪಷ್ಟ ನಿಲುವು ಯಾಕಿಲ್ಲ ಎಂದು ಪ್ರಶ್ನಿಸಿದ ಅವರು, ಇದು ಕೊರೋನ ಜತೆ ಬದುಕುವುದೋ ಅಥವಾ ಕೊರೋನ ಜತೆ ಸಾಯುವುದೋ ಎಂದು ಸರಕಾರವನ್ನು ತರಾಟೆಗೈದರು.

ಬೊಳಿಯಾರುವಿನ ವ್ಯಕ್ತಿಯೊಬ್ಬರಲ್ಲಿ ಕೊರೋನ ಪತ್ತೆಯಾದ ಪ್ರಕರಣ ಉಲ್ಲೇಖಿಸಿ ಮಾತನಾಡಿದ ಅವರು, ಅವರನ್ನು ಸಾಂಸ್ಥಿಕವಾಗಿ ಕ್ವಾರಂಟೈನ್ ‌ಗೊಳಪಡಿಸಿ ತಪಾಸಣೆ ಮಾಡುವುದು ಬಿಟ್ಟು ಹೋಂ ಕ್ವಾರಂಟೈನ್‌ಗೆ ಕಳುಹಿಸಿದ ಕಾರಣ ಎರಡು ದಿನಗಳಲ್ಲಿ ಪಾಸಿಟಿವ್ ಆಗಿರುವುದು ಕಂಡು ಬಂದಿದೆ. ಇದರಿಂದ ಊರಲ್ಲೆಲ್ಲಾ ಆತಂಕಕ್ಕೆ ಕಾರಣವಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಯಾವುದೇ ರೀತಿಯ ಮಾರ್ಗಸೂಚಿ ಇದ್ದರೂ ಜಿಲ್ಲಾಡಳಿತ ಈ ಬಗ್ಗೆ ಕಾಳಜಿ ವಹಿಸಬೇಕು. ಹೊರ ರಾಜ್ಯ, ದೇಸಗಳಿಂದ ಬರುವವರಿಗೆ ತಪಾಸಣೆ ಕಡ್ಡಾಯ ಗೊಳಿಸಬೇಕು ಎಂದು ಶಾಸಕ ಖಾದರ್ ಆಗ್ರಹಿಸಿದರು.

ವೆನ್‌ಲಾಕ್‌ನಲ್ಲಿ ತಪಾಸಣೆಗೆ ಲ್ಯಾಬ್‌ನಲ್ಲಿ ಹೆಚ್ಚುವರಿ ಯಂತ್ರಗಳನ್ನು ಅಳವಡಿಸಲಿ. ನಗರದ ಇಂಜಿನಿಯರಿಂಗ್ ಕಾಲೇಜಿನಗಳಲ್ಲು ಪಿಸಿಆರ್ ಯಂತ್ರಗಳಿದ್ದು, ಅದನ್ನು ಬಳಸಿಕೊಳ್ಳುವ ವ್ಯವಸ್ಥೆ ಮಾಡಲಿ ಎಂದು ಅವು ಜಿಲ್ಲಾಡಳಿತಕ್ಕೆ ಸಲಹೆ ನೀಡಿದರು. ಕೊರೋನ ಸೋಂಕಿನ ಆರಂಭದ ದಿನಗಳಲ್ಲಿ ಪ್ರತಿದಿನ ಸಭೆ ನಡೆಸುತ್ತಿದ್ದ ಸಚಿವರು, ಸಂಸದರು, ಶಾಸಕರು ಈಗ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಈ ಬಗ್ಗೆ ಗಂಭೀರವಾಗಿಲ್ಲ. ಕೊರೋನಕ್ಕೆ ವಿಶೇಷಾಧಿಕಾರಿಯಾಗಿ ನೇಮಕಗೊಂಡಿದ್ದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್ಲಿದ್ದಾರೆಂಬುದು ತಿಳಿದಿಲ್ಲ. ಒಟ್ಟಿನಲ್ಲಿ ಜನಸಾಮಾನ್ಯರು ಮಾತ್ರ ಆತಂಕಕ್ಕೆ ಗುರಿಯಾಗಿದ್ದಾೆ ಎಂದು ಯು.ಟಿ.ಖಾದರ್ ಹೇಳಿದರು.

ಗೋಷ್ಠಿಯಲ್ಲಿ ಮಾಜಿ ಶಾಸಕ ಜೆ.ಆರ್. ಲೋಬೋ, ಮುಖಂಡರಾದ ಎ.ಸಿ. ವಿನಯರಾಜ್, ಪ್ರವೀಣ್ ಚಂದ್ರ ಆಳ್ವ, ಮುಹಮ್ಮದ್ ಮೋನು, ಸಂತೋಷ್ ಶೆಟ್ಟಿ, ಮುಸ್ತಫಾ, ಸುಧೀರ್ ಟಿ.ಕೆ., ವಿಶ್ವಾಸ್ ಕುಮಾರ್ ದಾಸ್, ಪ್ರಕಾಶ್ ಸಾಲಿಯಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News