ಗೂಡಿನಬಳಿ ಯುವಕರಿಗೆ ಶೌರ್ಯ ಪ್ರಶಸ್ತಿ ನೀಡಿ, ಜೀವರಕ್ಷಕ ಸಾಮಗ್ರಿ ಒದಗಿಸಿ : ತಹಶಿಲ್ದಾರ್ ಗೆ ಎಸ್ ಡಿಪಿಐ ಮನವಿ

Update: 2020-06-01 17:40 GMT

ಬಂಟ್ವಾಳ, ಜೂ.1: ನೆರೆ, ಪ್ರವಾಹ ಸಹಿತ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸಂತ್ರಸ್ತರ ರಕ್ಷಣಾ ಕಾರ್ಯದಲ್ಲಿ ನಿರಂತರ ತೊಡಗಿಸಿ ಕೊಂಡಿರುವ ಹಾಗೂ ನೀರು ಪಾಲದವರ ರಕ್ಷಣೆಗೆ ಕೂಡಲೇ ಧಾವಿಸುವ ಗೂಡಿನಬಳಿ, ಪಾಣೆಮಂಗಳೂರು ಪರಿಸರದ ಯುವಕರ ತ‍ಂಡಕ್ಕೆ ಫೈಬರ್ ದೋಣಿ ಸಹಿತ ಜೀವ ರಕ್ಷಕ ಸಾಮಗ್ರಿ ಒದಗಿಸುವುದರ ಜೊತೆಗೆ ಅವರು ಈವರೆಗೆ ಮಾಡಿರುವ ರಕ್ಷಣಾ ಕಾರ್ಯವನ್ನು ಪರಿಗಣಿಸಿ ರಾಜ್ಯ, ಕೇಂದ್ರ ಸರಕಾರದಿಂದ ಶೌರ್ಯ ಪ್ರಶಸ್ತಿಗೆ ತಾಲೂಕು, ಜಿಲ್ಲಾಡಳಿತ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿ ಎಸ್.ಡಿ.ಪಿ.ಐ. ವತಿಯಿಂದ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ಅವರಿಗೆ ಮ‌ನವಿ ಸೋಮವಾರ ಸಲ್ಲಿಸಲಾಯಿತು.

ಪ್ರತೀ ವರ್ಷ ಮಳೆಗಾಲದಲ್ಲಿ ನೇತ್ರಾವತಿ ನದಿ ತುಂಬಿ ಹರಿಯುವ ಸಂದರ್ಭದಲ್ಲಿ ಬಂಟ್ವಾಳ ತಾಲೂಕಿನ ನದಿ ಪಾತ್ರದ ತಗ್ಗು ಪ್ರದೇಶಗಳ ಮನೆಗಳು ಮುಳುಗಡೆಯಾಗುತ್ತವೆ. ಈ ಸಂದರ್ಭದಲ್ಲಿ ಇಲ್ಲಿನ ಕೆಲವು ಯುವಕರು ತಮ್ಮ ಜೀವದ ಹಂಗನ್ನು ತೊರೆದು ಸಂತ್ರಸ್ತರನ್ನು ರಕ್ಷಣೆ ಮಾಡುತ್ತಾರೆ. ಯಾರಾದರೂ ನೀರು ಪಾಲಾದರೆ ಕೂಡಲೇ ಧಾವಿಸಿ ರಕ್ಷಣಾ ಕಾರ್ಯ ಮಾಡುತ್ತಿದ್ದಾರೆ. ಹಲವು ಜೀವಗಳನ್ನು ರಕ್ಷಿಸಿದ್ದಾರೆ. ಅಲ್ಲದೆ ಜಿಲ್ಲೆ, ಹೊರ ಜಿಲ್ಲೆಗಳಲ್ಲಿ ನೀರು ಪಾಲಾದವರ ಮೃತದೇಹವನ್ನು ಶೋಧ ನಡೆಸಿ ನೀರಿನಿಂದ ಮೇಲೆಕ್ಕೆತ್ತಲು ಅಧಿಕಾರಿಗಳು ಈ ಯುವಕರ ಸಹಾಯ ಪಡೆಯುತ್ತಾರೆ.

ಇತ್ತೀಚೆಗೆ ನಿಶಾಂತ್ ಎಂಬ ಯುವಕ ಆತ್ಮಹತ್ಯೆ ಮಾಡಲು ನೇತ್ರಾವತಿ ನದಿಗೆ ಹಾರಿದಾಗ ಆತನನ್ನು ಬದುಕಿಸಲು ತಂಡದ ಮುಹಮ್ಮದ್, ತೌಸೀಫ್, ಸಮೀರ್, ಝಾಹಿದ್ ಮತ್ತು ಆರಿಫ್ ಪಿ.ಜೆ. ಎಂಬವರು ಕೊನೆ ಕ್ಷಣದವರೆಗೆ ಪ್ರಯತ್ನಿಸಿದ್ದಾರೆ‌. ಈ ಯುವಕರನ್ನು ವಿವಿಧ ಸಂಘ, ಸಂಸ್ಥೆಗಳು, ಪಕ್ಷಗಳಿಂದ ಸನ್ಮಾನಿಸಲಾಗಿದೆ. ಆದರೆ ತಾಲೂಕು ಆಡಳಿತವಾಗಲಿ, ಜಿಲ್ಲಾಡಳಿತವಾಗಲಿ ಯುವಕರ ಶೌರ್ಯವನ್ನು ಗುರುತಿಸಿಲ್ಲ ಎಂದು ಮನವಿಯಲ್ಲಿ ಬೇಸರ ವ್ಯಕ್ತಪಡಿಸಲಾಗಿದೆ. 

ಯುವಕರ ತಂಡಕ್ಕೆ ತರಬೇತಿ ನೀಡುವ ಜೊತೆಗೆ ದೋಣಿ ಸಹಿತ ಜೀವ ರಕ್ಷಕ ಸಾಮಗ್ರಿಗಳನ್ನು ಕೂಡಲೇ ಒದಗಿಸಬೇಕು. ಜೀವ ರಕ್ಷಣೆ ಮಾಡಿದವರಿಗೆ ರಾಜ್ಯ ಮತ್ತು ಕೇಂದ್ರ ಸರಕಾರದಿಂದ ನೀಡುವ ಶೌರ್ಯ ಪ್ರಶಸ್ತಿಗಳನ್ನು ಈ ಯುವಕರಿಗೆ ನೀಡಲು ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಕೂಡಲೇ ಸರಕಾರಕ್ಕೆ ಶಿಫಾರಸು ಮಾಡಬೇಕು. ಅಲ್ಲದೆ ಯುವಕರಿಗೆ ಪ್ರೋತ್ಸಾಹ ಧನ ನೀಡಬೇಕು. ಪಾಣೆಮಂಗಳೂರು ಹಳೆ ಸೇತುವೆಯಲ್ಲಿ ಹಲವು ಆತ್ಮಹತ್ಯೆ ಪ್ರಕರಣಗಳು ನಡೆದಿರುವುದರಿಂದ ಈ ಪ್ರದೇಶದಲ್ಲಿ ಸೂಕ್ತ ಬಂದೋಬಸ್ತ್ ಕಲ್ಪಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಬಂಟ್ವಾಳ ಪುರಸಭಾ ಸದಸ್ಯೆರಾದ ಝೀನತ್ ಫೈರೋಜ್, ಸಂಶಾದ್ ಬಾನು, ಎಸ್ ಡಿಪಿಐ ಗೂಡಿನಬಳಿ ವಾರ್ಡ್ ಸಮಿತಿ ಅಧ್ಯಕ್ಷ ಸಫೀವುಲ್ಲಾ, ಕಾರ್ಯದರ್ಶಿ ಫಿರೋಝ್, ಪಾಪ್ಯುಲರ್ ಫ್ರಂಟ್ ವಲಯಾಧ್ಯಕ್ಷ ಅಬ್ದುಲ್ ರಹಿಮಾನ್ ಗೂಡಿನಬಳಿ, ಎಸ್ ಡಿಪಿಐ ಕಾರ್ಯಕರ್ತರಾದ ಅನ್ಸಾರ್ ಮತ್ತು ಅನ್ವರ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News