ಕೆಸಿಎಫ್ ಸೌದಿ ಅರೇಬಿಯಾ ವತಿಯಿಂದ ಬೆದ್ರಬೆಟ್ಟಿನ ಬಡಕುಟುಂಬಕ್ಕೆ ಮನೆ ಹಸ್ತಾಂತರ

Update: 2020-06-01 17:43 GMT

ಬೆಳ್ತಂಗಡಿ : ಅನಿವಾಸಿ ಕನ್ನಡಿಗರ ಸಂಘಟನೆಯಾದ ಕೆಸಿಎಫ್ ಇದರ ದಾರುಲ್ ಅಮಾನ್ ವಸತಿ ಯೋಜನೆಯಡಿಯಲ್ಲಿ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯಿಂದ ಬೆಳ್ತಂಗಡಿ ತಾಲೂಕಿನ ಬೆದ್ರಬೆಟ್ಟು ಎಂಬಲ್ಲಿರುವ ಅರ್ಹ ಕುಟುಂಬಕ್ಕಾಗಿ  8  ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ನೂತನ ಮನೆಯ ಉದ್ಘಾಟನೆ ಜೂ.1 ರಂದು ನಡೆಯಿತು.

ಸಯ್ಯಿದ್ ಮುಹಮ್ಮದ್ ಇಂಬಿಚ್ಚಿ ಕೋಯ ತಂಙಳ್ ಮುರ ದುಆದೊಂದಿಗೆ ಆರಂಭಿಸಿದ ಕಾರ್ಯಕ್ರಮದಲ್ಲಿ ಸಯ್ಯಿದ್ ಝೈನುಲ್ ಆಬಿದೀನ್ ಜಮಲುಲ್ಲೈಲಿ ತಂಙಳ್ ಕಾಜೂರು ಹಾಗೂ ಕೆಸಿಎಫ್ ಅಂತರ್ರಾಷ್ಟ್ರೀಯ ಸಮಿತಿ ಅಧ್ಯಕ್ಷ ಡಾ| ಶೇಖ್ ಬಾವ ಹಾಜಿ ಮಂಗಳೂರು  ರಿಬ್ಬನ್ ಕತ್ತರಿಸುವುದರೊಂದಿಗೆ ಉದ್ಘಾಟನೆ ಮಾಡಿದರು. ಡಾ. ಮುಹಮ್ಮದ್ ಫಾಝಿಲ್ ರಝ್ವಿ, ಕಾವಳಕಟ್ಟೆ ಅವರು ಮನೆಯ ಕೀ ಕುಟುಂಬಕ್ಕೆ ಹಸ್ತಾಂತರಿಸಿದರು.

ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವವರು ಅಲ್ಲಾಹನಿಗೆ ಬಹಳ ಇಷ್ಟವಾದವರು ಹಾಗೂ ಇದು ಲೋಕ ಪ್ರವಾದಿ ಮುಹಮ್ಮದ್ ಮುಸ್ತಫಾ ತಂಙಳ್ ಅವರಿಗೂ ಬಹಳ ಸಂತೋಷವನ್ನು ನೀಡುವ ಕಾರ್ಯವಾಗಿದೆ. ಸಮಾಜ ಸೇವೆ ಇಸ್ಲಾಮಿನ ತತ್ವಗಳಲ್ಲಿ ಬಹುದೊಡ್ಡ ಭಾಗವಾಗಿದೆ. ಈ ಕೆಲಸವನ್ನು ಕರ್ನಾಟಕ ಕಲ್ಚರಲ್ ಫೌಂಡೇಶನ್ ಸಮಿತಿ ಮಾಡುತ್ತಿದೆ ಎಂದು ಕಾರ್ಯಕ್ರಮದಲ್ಲಿ ಮಾತನಾಡಿದ ಎಸ್ ವೈ ಎಸ್ ರಾಜ್ಯ ಪ್ರ. ಕಾರ್ಯದರ್ಶಿ ಡಾ. ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಹೇಳಿದರು.

ಕಾರ್ಯಕ್ರಮದಲ್ಲಿ ದಾರುಲ್ ಅಮಾನ್ ಮನೆಯ ಕಾಮಗಾರಿಯ ಗುತ್ತಿಗೆ ಪಡೆದು ನಿಗದಿತ ಸಮಯದಲ್ಲಿ  ಉತ್ತಮವಾದ ರೀತಿಯಲ್ಲಿ ನಿರ್ಮಿಸಿದ ಯಾಕೂಬ್ ಮಲೆಬೆಟ್ಟು ಅವರನ್ನು  ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲೂಕು ಮುಸ್ಲಿಂ ಜಮಾತ್ ಅಧ್ಯಕ್ಷ ಎಸ್ ಎಂ  ಕೋಯಾ ತಂಙಳ್ ಉಜಿರೆ, ಕೆಸಿಎಫ್. ಸೌದಿ ರಾಷ್ಟ್ರೀಯ ಸಮಿತಿ ನಾಯಕ ಹನೀಫ್ ಕಣ್ಣೂರ್, ಅಬ್ದುಲ್ ಹಮೀದ್ ಮುಸ್ಲಿಯಾರ್ ಕರಾಯ, ಶುಕೂರ್ ನಾಳ, ಇಬ್ರಾಹಿಂ ಕಾಜೂರ್, ಊರಿನ ಸುನ್ನಿ ಸಂಘದ ನೇತಾರ ಸಲೀಮ್ ಕನ್ಯಾಡಿ, ಬೆಳ್ತಂಗಡಿ ಪತ್ರಕರ್ತರ ಸಂಘದ ಅಧ್ಯಕ್ಷ ಅಶ್ರಫ್ ಆಲಿಕುಂಞಿ ಮುಂಡಾಜೆ, ಅಬ್ದುಲ್ ರಝಾಕ್ ಹಾಜಿ ಇಂದಬೆಟ್ಟು, ಶರೀಫ್ ಸಅದಿ ಕಿಲ್ಲೂರು, ಎಸ್ಸೆಸ್ಸೆಫ್ ಈಸ್ಟ್ ಝೋನ್ ಅಧ್ಯಕ್ಷ ಅಯ್ಯೂಬ್ ಮಹ್ಲರಿ, ಬೆಳ್ತಂಗಡಿ ಡಿವಿಷನ್ ಅಧ್ಯಕ್ಷ ನಝೀರ್ ಅಹ್ಮದ್ ಮದನಿ ಹಾಗೂ ಸುನ್ನೀ ಸಂಘಟನೆಗಳ ನಾಯಕರುಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

ಕೆ. ಸಿ. ಎಫ್ ಸೌದಿ ರಾಷ್ಟ್ರೀಯ ಸಮಿತಿ ಸಂಘಟನಾ ಕಾರ್ಯದರ್ಶಿ ಬಶೀರ್ ತಲಪ್ಪಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News