ಬೆಳ್ತಂಗಡಿ: ಭಾರೀ ಮಳೆ ; ನದಿಹಳ್ಳಗಳಲ್ಲಿ ಉಕ್ಕಿ ಹರಿದ ನೀರು

Update: 2020-06-01 17:47 GMT

ಬೆಳ್ತಂಗಡಿ : ತಾಲೂಕಿನಲ್ಲಿ ರವಿವಾರ ಸಂಜೆಯಿಂದ ಮಳೆ ಆರಂಭಗೊಂಡಿದ್ದು ಇಂದೂ ಮುಂದುವರಿದಿದೆ. ಆಗಾಗ ದೊಡ್ಡ ಮಳೆ ಸುರಿಯುತ್ತಿದ್ದು ನದಿಹಳ್ಳಗಳಲ್ಲಿ ಉಕ್ಕಿ ಹರಿಯುತ್ತಿರುವ ನೀರು ಜನರಲ್ಲಿ ಭಯ ಮೂಡಿಸಿದೆ. ಇದರ ನಡುವೆಯೇ ಕಳೆದ ವರ್ಷದ ಪ್ರಳಯದ ವೀಡಿಯೊಗಳು ಸಾಮಾಜಿಕ ಜಾಲಗಳಲ್ಲಿ ಹರಿದಾಡುತ್ತಿದ್ದು ಗೊಂದಲಸೃಷ್ಟಿಸಿದೆ.

ತಾಲೂಕಿನ ಎಲ್ಲ ಪ್ರದೇಶಗಳಲ್ಲಿಯೂ ಮಳೆಯಾಗುತ್ತಿದೆ. ಆಗಾಗ ಬಿಡುವನ್ನು ನೀಡುತ್ತಾ ಮಳೆ ಸುರಿಯುತ್ತಿದ್ದು ಎಲ್ಲಿಯೂ ಯಾವುದೇ ಕೃಷಿ ನಾಶ ಸಂಭವಿಸಿಲ್ಲ. ಕಡಿರುಧ್ಯಾವರ ಗ್ರಾಮದ ಕೊಪ್ಪದ ಗಂಡಿ ಎಂಬಲ್ಲಿ ರವಿವಾರ ಸಂಜೆ ಕಿರು ಸೇತುವೆ (ಕಿಂಡಿಅಣೆಕಟ್ಟು) ವಿನಲ್ಲಿ ಮರಮಟ್ಟುಗಳು ಬಂದು ತುಂಬಿಕೊಂಡು ಸೇತುವೆಯ ಮೇಲಿನಿಂದ ನೀರು ಹರಿದು ಸಂಪರ್ಕ ಕಡಿತಗೊಂಡಿತ್ತು. ಈ ಪ್ರದೇಶಗಳಲ್ಲಿ ತೋಟಗಳಿಗೂ ನೀರು ನುಗ್ಗಿದೆ. ಏಳುವರೆ ಹಳ್ಳದಲ್ಲಿ ಭಾರೀ ನೀರು ಬಂದಿದ್ದು ನೀರಿನೊಂದಿಗೆ ಕಳೆದ ಪ್ರಳಯದ ಸಂದರ್ಭ ಸಿಲುಕಿದ್ದ ಮರಗಳು ಹಾಗೂ ಕಸ ಬಂದು ಅಣೆಕಟ್ಟಿನಲ್ಲಿ ತುಂಬಿಕೊಂಡಿದೆ. ಇದು ಸ್ಥಳೀಯರಲ್ಲಿ ಭಯ ಮೂಡಿಸಿತ್ತು. ಕೆಲವು ಗಂಟೆಗಳಲ್ಲಿ  ನೀರು ಇಳಿದಿದೆ. ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆಗೂ ಹಾನಿಯಾಗಿದೆ. ಇದೀಗ ಇಲ್ಲಿ ಸಲುಕಿಕೊಂಡಿದ್ದ ಮರ, ಕಸಗಡ್ಡಿಗಳನ್ನು ತೆರವು ಮಾಡಲಾಗಿದ್ದು ನೀರಿನ ಹರಿವು ಸುಗಮಗೊಂಡಿದೆ.

ದಿಡುಪೆ, ಕಾಜೂರು, ಕೊಲ್ಲಿ, ಮಕ್ಕಿ, ಪರ್ಲ, ಕುಕ್ಕಾವು, ಬೊಳ್ಳೂರು ಬಯಲು,  ಚಾರ್ಮಾಡಿ ಪರಿಸರದ ಕೊಳಂಬೆ, ಅಂತರ, ಪರ್ಲಾನಿ, ಹೊಸಮಠ, ಅನ್ನಾರು, ನಲ್ಲಿಲು ಪರಿಸರವೂ ಸೇರಿದಂತೆ ವಿವಿದೆಡೆ ಕಳೆದ ಬಾರಿ ಪ್ರವಾಹ ಸಂಭವಿಸಿತ್ತು. ನದಿ, ತೋಟ, ಗದ್ದೆಗಳು ಮರಳು, ಹೂಳು ಹಾಗೂ ಮರದ ದಿಮ್ಮಿಗಳಿಂದ ತುಂಬಿತ್ತು. ಇದೀಗ ಶೇಖರಣೆಯಾಗಿದ್ದ ಬಹುತೇಕ ಹೂಳು ಹಾಗೂ ಮರಳು ಅಲ್ಲಿಯೇ ಇದ್ದು ತೆರವು ಮಾಡಲಾಗಿಲ್ಲ. ಇದರಿಂದಾಗಿ ನೇತ್ರಾವತಿ, ಮೃತ್ಯುಂಜಯ ಹಾಗೂ ಇದರ ಉಪನದಿಗಳು ಹಾಗೂ ಹಳ್ಳಗಳಲ್ಲಿ ಹೂಳು ಮರಳು ತುಂಬಿದ್ದು ಅವುಗಳ ಆಳ ತೀರಾ ಕಡಿಮೆಯಾಗಿದೆ. ಇದರಿಂದಾಗಿ ಒಂದೇ ಮಳೆಗೆ  ನೀರು ಮೇಲೆ ಬರುವಂತಾಗಿದೆ. ಹಾಗೂ ನೇರವಾಗಿ ತೋಟಗಳಿಗೆ ನುಗ್ಗುವ ಅಪಾಯವಿದೆ. ಇದು ನದಿಬದಿಯಲ್ಲಿ ವಾಸಿಸುವ ಜನರಲ್ಲಿ ಭಯ ಮೂಡಿಸಲು ಕಾರಣವಾಗಿದೆ.  ಪ್ರವಾಹಕ್ಕೆ ಕೊಚ್ಚಿ ಬಂದಿದ್ದ ಸಾಕಷ್ಟು ಮರಗಳು ಕಲ್ಲು ಮಣ್ಣುಗಳು ನದಿಗಳಲ್ಲಿ ಅಲ್ಲಲ್ಲಿ ಬಾಕಿಯಾಗಿದ್ದು ಇದೀಗ ಮಳೆ ನೀರಿನೊಂದಿಗೆ ಕೆಳಗೆ ಹರಿದು ಬರುತ್ತಿದ್ದು ಕಿಂಡಿಅಣೆಕಟ್ಟುಗಳಲ್ಲಿ ಸಿಲುಕಿಕೊಂಡು ನೀರಿನ ಸರಾಗವಾಗಿರುವ ಹರಿಯುವಿಕೆಗೆ ತಡೆಯೊಡ್ಡುತ್ತಿದೆ. ಮಳೆಗಾಲದ ಆರಂಭದಲ್ಲಿಯೇ ನದಿದಡಗಳಲ್ಲಿ ವಾಸಿಸುತ್ತಿರುವ ಜನರಿಗೆ ಕಳೆದ ವರ್ಷದ ಪ್ರಳಯದ ನೆನಪುಗಳು ಕಾಡಲಾರಂಭಿಸಿದ್ದು, ಮಳೆಗಾಲವನ್ನು ಆತಂಕದಿಂದಲೇ ಎದುರುನೋಡುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News