ಕೊರೋನ ನಿಯಂತ್ರಣ ಮಾಡುವಲ್ಲಿ ರಾಜ್ಯ ಸರಕಾರ ವಿಫಲ : ಯು.ಆರ್. ಸಭಾಪತಿ

Update: 2020-06-02 14:36 GMT

ಉಡುಪಿ, ಜೂ.2: ಕರ್ನಾಟಕ ರಾಜ್ಯದಲ್ಲಿ ಕೊರೋನಾ ಮಹಾಮಾರಿಯ ನಿಯಂತ್ರಣ ಮಾಡುವಲ್ಲಿ ಕರ್ನಾಟಕ ರಾಜ್ಯ ಸರಕಾರ ಸಂಪೂರ್ಣ ವಿಫಲ ವಾಗಿದೆ ಎಂದು ಉಡುಪಿಯ ಮಾಜಿ ಶಾಸಕ, ಉಡುಪಿ ಜಿಲ್ಲಾ ಕಾಂಗ್ರೆಸ್ ಟಾಸ್ಕ್ಫೋರ್ಸ್ ಸಮಿತಿ ಅಧ್ಯಕ್ಷ ಯು. ಆರ್. ಸಭಾಪತಿ ಅಸಮಾಧಾನ ವ್ಯಕ್ತ ಮಾಡಿದ್ದಾರೆ.

‘ದಕ್ಷಿಣಕನ್ನಡ, ಉಡುಪಿ ಜಿಲ್ಲೆಗಳಿಗೆ ವಿದೇಶ ಹಾಗೂ ಹೊರರಾಜ್ಯಗಳಿಂದ ನಿರಂತರವಾಗಿ ಜನರು ಬರುವಂತೆ ಮಾಡಿ ಕೇವಲ 7ದಿನಗಳ ಕ್ವಾರಂಟೈನ್ ಮಾಡಿ ಪ್ರಯೋಗಾಲಯದ ಫಲಿತಾಂಶ ಪಡೆಯುವ ಮುನ್ನವೇ ಬಿಡುಗಡೆ ಮಾಡುವುದು ಸರಿಯಲ್ಲ. ಈವರೆಗೆ ಹಸಿರು ವಲಯದಲ್ಲಿದ್ದ ಉಡುಪಿಯನ್ನು ‘ಕೆಂಪು ವಲಯ’ವಾಗಿ ಘೋಷಣೆ ಮಾಡುವದು ಇನ್ನೇನು ಬಾಕಿ ಇದೆ.’ ಎಂದು ಸಭಾಪತಿ ಕಳವಳ ವ್ಯಕ್ತಪಡಿಸಿದ್ದಾರೆ.

ಇಷ್ಟಾದರೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು, ಲೋಕಸಭಾ ಸದಸ್ಯರು ಚುನಾಯಿತ ಪ್ರತಿನಿಧಿಗಳು ಈ ಬಗ್ಗೆ ಯಾವುದೇ ಆಸಕ್ತಿ ವಹಿಸದಿರೋದು ತೀರ ಅಕ್ಷಮ್ಯಾಗಿದೆ ಎಂದ ಸಭಾಪತಿ ಆರೋಪಿಸಿದ್ದಾರೆ.

‘ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿದಾಗ ಸುಮಾರು ಹತ್ತು ಸಾವಿರ ಜನರಲ್ಲಿ ಕೊರೋನಾ ತಪಾಸಣೆ ಮಾಡಲು ನಮ್ಮಲ್ಲಿ ದಿನವೊಂದಕ್ಕೆ ನೂರು ಜನರ ಫಲಿತಾಂಶ ಪಡೆಯುವಷ್ಟೇ ಲ್ಯಾಬೊರೇಟರಿಗಳು ಇದೆ ಎಂದು ತನ್ನ ಅಸಹಾಯಕತೆಯನ್ನು ತೋರಿಸಿದ್ದಾರೆ.’ ಎಂದು ಸಭಾಪತಿ ಹೇಳಿದ್ದಾರೆ.

ನಮ್ಮ ವೈದ್ಯಕೀಯ ಆಸ್ಪತ್ರೆಗಳ ವೈದ್ಯರಿಗೆ ಸಾಕಷ್ಟು ವೈದ್ಯಕೀಯ ಕಿಟ್‌ಗಳನ್ನು ಒದಗಿಸಲು ಸರಕಾರ ವಿಫಲವಾಗಿರೋದು ವೈದ್ಯಕೀಯ ವಲಯದಲ್ಲೂ ತೀವ್ರ ಅಸಮಾಧಾನ ವ್ಯಕ್ತವಾಗಿದೆ ಎಂದ ಸಭಾಪತಿ, ಸಾಕಷ್ಟು ವೈದ್ಯಕೀಯ ವ್ಯವಸ್ಥೆ ಮಾಡದೆ ರಾಜ್ಯ ಸರಕಾರ ಇನ್ನು ಇದೆ ರೀತಿ ನಿರ್ಲಕ್ಷ ಮಾಡಿದಲ್ಲಿ ಕಾಂಗ್ರೆಸ್ ಪಕ್ಷ ಸಾರ್ವಜನಿಕರೊಂದಿಗೆ ಸೇರಿ ತೀವ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಸರಕಾರವನ್ನು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News