ಉಡುಪಿಯಲ್ಲಿ ಕೊರೋನ ಸೋಂಕಿನ ಮಹಾಸ್ಫೋಟ: ಒಂದೇ ದಿನದಲ್ಲಿ 150 ಪಾಸಿಟಿವ್

Update: 2020-06-02 16:07 GMT

ಉಡುಪಿ, ಜೂ. 2: ಮಂಗಳವಾರ ಉಡುಪಿ ಜಿಲ್ಲೆಯಲ್ಲಿ ನೋವೆಲ್ ಕೊರೋನ ವೈರಸ್‌ನ (ಕೋವಿಡ್-19) ಮಹಾಸ್ಫೋಟವೇ ಸಂಭವಿಸಿದೆ. ಒಂದೇ ದಿನದಲ್ಲಿ ಜಿಲ್ಲೆಯ 150 ಮಂದಿಯಲ್ಲಿ ಕೊರೋನ ಸೋಂಕು ಪಾಸಿಟಿಟ್ ಆಗಿ ಬಂದಿವೆ. ಈ ಮೂಲಕ ಜಿಲ್ಲೆಯ ಸೋಂಕಿತರ ಸಂಖ್ಯೆ ಅಧಿಕೃತವಾಗಿ 410ಕ್ಕೇರಿದೆ.

ಈ ಮೂಲಕ ಕೊರೋನ ಪಾಸಿಟಿವ್ ಪಟ್ಟಿಯಲ್ಲಿ ಉಡುಪಿ ಜಿಲ್ಲೆ, ಕಲಬುರ್ಗಿ (405), ಬೆಂಗಳೂರು ನಗರ (397), ಯಾದಗಿರಿ (290) ಹಾಗೂ ಮಂಡ್ಯ (289)ಗಳನ್ನು ಹಿಂದಿಕ್ಕಿ ಐದರಿಂದ ಅಗ್ರಸ್ಥಾನಕ್ಕೆ ನೆಗೆದಿದೆ. ಮೇ 15ರವರೆಗೆ ಕೇವಲ ಮೂರು ಪಾಸಿಟಿಟ್ ಪ್ರಕರಣಗಳೊಂದಿಗೆ ರಾಜ್ಯದಲ್ಲಿ 23ನೇ ಸ್ಥಾನದಲ್ಲಿದ್ದ ಉಡುಪಿ, ಕೇವಲ 17 ದಿನಗಳಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ಜಿಲ್ಲೆ ಎನಿಸಿಕೊಂಡಿದೆ.

ಇಂದು ಸೋಂಕು ಪತ್ತೆಯಾದ 150 ಮಂದಿಯಲ್ಲಿ 147 ಮಂದಿ ಮಹಾರಾಷ್ಟ್ರ ರಾಜ್ಯದಿಂದ ಬಂದವರು ಉಳಿದ ಮೂವರು ಗೋವಾ, ತೆಲಂಗಾಣ ಹಾಗು ಆಂದ್ರಪ್ರದೇಶಗಳಿಂದ ಬಂದವರು. ಇವರೆಲ್ಲರೂ ಕೊಲ್ಲೂರಿನಲ್ಲಿ ಕ್ವಾರಂಟೈನ್‌ನಲ್ಲಿದ್ದವರು ಎಂಬುದು ಮತ್ತೊಂದು ವಿಶೇಷ. ಈ ಮೂಲಕ ಉಡುಪಿ ಜಿಲ್ಲೆಯಲ್ಲಿ ಇಂದಿನವರೆಗೆ ಕಾಣಿಸಿಕೊಂಡ 410 ಪಾಸಿಟಿವ್ ವ್ಯಕ್ತಿಗಳಲ್ಲಿ 370ಮಂದಿ ಮಹಾರಾಷ್ಟ್ರದಿಂದ ಬಂದವರೆಂಬುದು ಇನ್ನೂ ಒಂದು ವಿಶೇಷ.

ಇಂದು ಪಾಸಿಟಿವ್ ಬಂದವರಲ್ಲಿ 10 ವರ್ಷದೊಳಗಿನ 9 ಮಂದಿ ಮಕ್ಕಳು ಸೇರಿದಂತೆ ಒಟ್ಟು 119 ಮಂದಿ ಪುರುಷರು ಹಾಗೂ 31 ಮಂದಿ ಮಹಿಳೆಯರಿದ್ದಾರೆ. 60 ವರ್ಷಕ್ಕಿಂತ ಮೇಲ್ಪಟ್ಟ ಮೂವರು ಹಿರಿಯರು ಇವರಲ್ಲಿ ಸೇರಿದ್ದಾರೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ‌ಚಂದ್ರ ಸೂಡ ತಿಳಿಸಿದ್ದಾರೆ.

ಜಿಲ್ಲೆಯಲ್ಲೀಗ 345 ಸಕ್ರೀಯ ಪ್ರಕರಣಗಳಿದ್ದರೆ, 64 ಮಂದಿ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದಾರೆ. ಒಬ್ಬರು ಮೃತಪಟ್ಟಿದ್ದಾರೆ. ನಿನ್ನೆಯವರೆಗೆ ಉಡುಪಿ ಜಿಲ್ಲೆಯಲ್ಲಿ ಒಟ್ಟು 30 ಗ್ರಾಮಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಇವುಗಳಲ್ಲಿ ಉಡುಪಿಯ 5, ಕಾರ್ಕಳದ 8, ಬ್ರಹ್ಮಾವರದ 7, ಕಾಪುವಿನ 4, ಬೈಂದೂರಿನ 5 ಹಾಗೂ ಹೆಬ್ರಿಯ 1 ಗ್ರಾಮವಿದೆ ಎಂದವರು ಹೇಳಿದರು.

627 ಸ್ಯಾಂಪಲ್ ನೆಗೆಟಿವ್: ಮಂಗಳವಾರ ಒಟ್ಟು 777 ಸ್ಯಾಂಪಲ್‌ಗಳ ವರದಿ ಬಂದಿದ್ದು, ಇವುಗಳಲ್ಲಿ 150 ಪಾಸಿಟಿವ್ ಆಗಿವೆ. ಉಳಿದ 627 ಸೋಂಕಿಗೆ ನೆಗೆಟಿವ್ ಆಗಿವೆ. ಇಂದು ಕೇವಲ ಏಳು ಮಂದಿಯ ಗಂಟಲು ದ್ರವವನ್ನು ಪರೀಕ್ಷೆಗಾಗಿ ಪಡೆಯಲಾಗಿದ್ದು, ಇವರಲ್ಲಿ ಇಬ್ಬರು ಉಸಿರಾಟದ ತೊಂದರೆ, ಐವರು ಶೀತಜ್ವರದಿಂದ ಬಳಲುವವರು ಎಂದು ಡಿಎಚ್‌ಓ ತಿಳಿಸಿದರು.

ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಗಂಟಲುದ್ರವದ ಮಾದರಿಗಳ ಸಂಖ್ಯೆ ಈಗ 12,511ಕ್ಕೇರಿದೆ. ಇವುಗಳಲ್ಲಿ ಮಂಗಳವಾರ ದವರೆಗೆ ಒಟ್ಟು 6665ರ ಪರೀಕ್ಷಾ ವರದಿ ಬಂದಿವೆ. ಇದರಲ್ಲಿ 6255 ನೆಗೆಟಿವ್ ಆಗಿದ್ದರೆ, ಇಂದಿನ 150 ಸೇರಿ ಒಟ್ಟು 410 ಸ್ಯಾಂಪಲ್‌ಗಳು ಪಾಸಿಟಿವ್ ಆಗಿ ಬಂದಿವೆ. ಇನ್ನೂ 5846 ಸ್ಯಾಂಪಲ್‌ಗಳ ವರದಿ ಬರೇಕಾಗಿದೆ ಎಂದು ಅವರು ಹೇಳಿದರು.

ಇಂದು ರೋಗದ ಗುಣಲಕ್ಷಣದೊಂದಿಗೆ 13 ಮಂದಿ ಐಸೋಲೇಷನ್ ವಾರ್ಡಿಗೆ ದಾಖಲಾಗಿದ್ದಾರೆ. ಒಂಭತ್ತು ಮಂದಿ ಪುರುಷರು ನಾಲ್ವರು ಮಹಿಳೆ ಯರು ಇದರಲ್ಲಿ ಸೇರಿದ್ದಾರೆ. ಕೊರೋನ ಶಂಕಿತರು ನಾಲ್ವರು, ಉಸಿರಾಟದ ತೊಂದರೆಯ ಮೂವರು ಹಾಗೂ ಶೀತಜ್ವರದವು ಆರು ಮಂದಿ ಇದರಲ್ಲಿ ಸೇರಿದ್ದಾರೆ.

ವಿವಿಧ ಆಸ್ಪತ್ರೆಗಳ ಐಸೋಲೇಶನ್ ವಾರ್ಡಿನಿಂದ ಇಂದು 6 ಮಂದಿ ಬಿಡುಗಡೆಗೊಂಡಿದ್ದು, 70 ಮಂದಿ ಇನ್ನೂ ವೈದ್ಯರ ನಿಗಾದಲ್ಲಿದ್ದಾರೆ. ಈವರೆಗೆ ಒಟ್ಟು 725 ಮಂದಿ ಐಸೋಲೇಷನ್ ವಾರ್ಡಿನಿಂದ ಬಿಡುಗಡೆಗೊಂಡಿದ್ದಾರೆ ಎಂದರು.

ಜಿಲ್ಲೆಯಲ್ಲಿ ಕೊರೋನ ಸೋಂಕಿನ ಗುಣಲಕ್ಷಣದ 21 ಮಂದಿ ಇಂದು ನೊಂದಣಿಗೊಂಡಿದ್ದು, ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 4976 ಮಂದಿಯನ್ನು ಕೊರೋನ ತಪಾಸಣೆಗಾಗಿ ನೋಂದಣಿ ಮಾಡಿಕೊಂಡಂತಾಗಿದೆ. 4111 ಮಂದಿ (ಇಂದು 116) 28 ದಿನಗಳ ನಿಗಾವಣೆ ಹಾಗೂ 4800 ಮಂದಿ 14 ದಿನಗಳ ನಿಗಾವಣೆಯನ್ನು ಪೂರೈಸಿದ್ದಾರೆ.

ಜಿಲ್ಲೆಯಲ್ಲಿ ಈಗ 58 ಮಂದಿ ಹೋಮ್ ಕ್ವಾರಂಟೈನ್‌ನಲ್ಲೂ, 106 ಮಂದಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಹಾಗೂ 48 ಮಂದಿ ಆಸ್ಪತ್ರೆ ಕ್ವಾರಂಟೈನ್ ‌ನಲ್ಲಿದ್ದಾರೆ ಎಂದು ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದರು.

ಜಿಲ್ಲೆಯ ಜನತೆ ಆತಂಕ ಪಡಬೇಕಿಲ್ಲ: ಜಿಲ್ಲಾಧಿಕಾರಿ

ಉಡುಪಿ ಜಿಲ್ಲೆಯಲ್ಲಿ ಮಂಗಳವಾರ 150 ಮಂದಿ ಕೊರೋನಕ್ಕೆ ಪಾಸಿಟಿವ್ ಬಂದಿದ್ದು, ಒಟ್ಟಾರೆಯಾಗಿ ಇವರ ಸಂಖ್ಯೆ 410 ಕ್ಕೇರಿದರೂ, ಜಿಲ್ಲೆಯ ಜನತೆ ಇದರಿಂದ ಆತಂಕ ಪಡಬೇಕಾಗಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಭರವಸೆ ತುಂಬುವ ಮಾತುಗಳನ್ನಾಡಿದ್ದಾರೆ.

ಇಂದು ಪಾಸಿಟಿವ್ ಬಂದವರೆಲ್ಲರೂ ಮುಂಬೈ ಹಾಗೂ ಮಹಾರಾಷ್ಟ್ರ ಗಳಿಂದ ಬಂದವರು. ಇವರಲ್ಲಿ 10 ವರ್ಷದೊಳಗಿನ 9 ಮಂದಿ ಮಕ್ಕಳು ಹಾಗೂ ಮೂವರು 60 ಮೀರಿದ ವೃದ್ಧರಿದ್ದಾರೆ. ಇವರೆಲ್ಲರನ್ನೂ ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಿಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೀಗಾಗಿ ಜನಕ್ಕೆ ಯಾವುದೇ ರೀತಿಯ ಆತಂಕ ಬೇಡ ಎಂದವರು ನುಡಿದರು.

ಕಳೆದೆರಡು-ಮೂರು ದಿನಗಳಲ್ಲಿ 200ಕ್ಕೂ ಅಧಿಕ ಮಂದಿಯಲ್ಲಿ ಸೋಂಕು ಕಂಡುಬರಲು, ಈ ಅವಧಿಯಲ್ಲಿ 2000ಕ್ಕೂ ಅಧಿಕ ಸ್ಯಾಂಪಲ್‌ಗಳ ವರದಿ ಬಂದಿರುವುದೇ ಕಾರಣ. ಸಾಧಾರಣವಾಗಿ ಮುಂಬೈ-ಮಹಾರಾಷ್ಟ್ರದಿಂದ ಬಂದವರಲ್ಲಿ ಶೇ.10ರಷ್ಟು ಮಂದಿಯಲ್ಲಿ ಪಾಸಿಟಿವ್ ಪ್ರಕರಣ ಗಳನ್ನು ನಾವು ನಿರೀಕ್ಷಿಸಿದ್ದೆವು. ಈ ನಿರೀಕ್ಷೆಗನುಗುಣವಾಗಿ ಪರೀಕ್ಷಾ ವರದಿಗಳು ಬಂದಿವೆ ಎಂದರು.

ಕೋವಿಡ್ ಸೋಂಕಿತರಿಗಾಗಿ ಈಗಾಗಲೇ ನಾವು 1120 ಬೆಡ್‌ಗಳನ್ನು ಸಜ್ಜುಗೊಳಿಸಿದ್ದೇವೆ. ಸದ್ಯ 390ರಷ್ಟು ಬೆಡ್‌ಗಳು ತುಂಬಿವೆ. ಇನ್ನೂ 800ಕ್ಕೂ ಅಧಿಕ ಬೆಡ್‌ಗಳು ಲಭ್ಯವಿದೆ. ಹೀಗಾಗಿ ಸೋಂಕಿತರನ್ನೆಲ್ಲಾ ಕೋವಿಡ್ ಆಸ್ಪತ್ರೆಗಳಿಗೆ ಸೇರಿಸಿ ಉತ್ತಮ ಚಿಕಿತ್ಸೆ ನೀಡಲಾಗುವುದು ಎಂದವರು ಭರವಸೆ ನೀಡಿದರು.

ಇಬ್ಬರು ಮಾತ್ರ ಗಂಭೀರ: ಸೋಂಕಿತರಲ್ಲಿ ಕೊರೋನ ಗುಣಲಕ್ಷಣ ಇಲ್ಲದ ವರನ್ನು ಕುಂದಾಪುರ ಹಾಗೂ ಕಾರ್ಕಳ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತದೆ. ಗರ್ಭಿಣಿಯರು, ಮಕ್ಕಳು, ಹಿರಿಯ ನಾಗರಿಕರನ್ನು ಉಡುಪಿಯ ಕೋವಿಡ್ ಆಸ್ಪತ್ರೆಗೆ ಸೇರಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಕೇವಲ ಇಬ್ಬರ ಸ್ಥಿತಿ ಮಾತ್ರ ಸ್ವಲ್ಪ ಗಂಭೀರವಿದ್ದು, ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ. ಇವರಲ್ಲಿ ಒಬ್ಬರಿಗೆ ಆಮ್ಲಜನಕವನ್ನು ನೀಡಲಾಗುತಿದ್ದರೆ, ಮತ್ತೊಬ್ಬರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರೂ ಚೇತರಿಸಿ ಕೊಂಡಿದ್ದಾರೆ. ಹೀಗಾಗಿ ಯಾರೊಬ್ಬರೂ ಆತಂಕಿತರಾಗಬೇಕಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News